ಬೆಳಗಾವಿ:ಪಿಎಲ್ ಡಿ ಬ್ಯಾಂಕ್ ಚುನಾವಣಾ ವಿವಾದಕ್ಕೆ ತೆರೆ : ಈಶ್ವರ ಖಂಡ್ರೆ
ಪಿಎಲ್ ಡಿ ಬ್ಯಾಂಕ್ ಚುನಾವಣಾ ವಿವಾದಕ್ಕೆ ತೆರೆ : ಈಶ್ವರ ಖಂಡ್ರೆ
ಬೆಳಗಾವಿ ಸೆ 7 : ಬೆಳಗಾವಿ ಪಿಎಲಡಿ ಬ್ಯಾಂಕ ಚುನಾವಣೆಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಸ್ಥಳೀಯ ನಾಯಕರ ನಡುವಿನ ಗೊಂದಲಕ್ಕೆ ವರಿಷ್ಠರ ಸಲಹೆ ಮೆರೆಗೆ ತೆರೆ ಎಳೆಯಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಜತೆಗೆ ಚರ್ಚಿಸಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಮಹಾದೇವ ಪಾಟೀಲ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಾಪುಸಾಹೇಬ ನಾಮಪತ್ರ ಸಲ್ಲಿಸಿದ್ದು, ಇವರೇ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಈ ಇಬ್ಬರ ಆಯ್ಕೆಗೆ ಸ್ಥಳೀಯ ನಾಯಕರ ಸಹಮತ ಇದೆ. ವರಿಷ್ಠರ ಸೂಚನೆ ಮೇರೆಗೆ ಈ ಆಯ್ಕೆ ನಡೆದಿದೆ. ಶಾಸಕರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಜತೆಗೆ ಸೌಹಾರ್ಧಯುತವಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸಿದ್ದೇನೆ. ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಶಾಂತಿಯುತವಾಗಿ ಬಗೆಹರಿದಿದೆ. ಇದರಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಇರಲಿದೆ ಎಂದು ಸ್ಪಷ್ಟಪಡಿಸಿದರು.
ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಆದ ಬೆಳವಣಿಗೆಗೆ ಸಂವಹನ ಕೊರತೆಯೇ ಮುಖ್ಯ ಕಾರಣ. ನಮ್ಮ ಹಾಗೂ ಗ್ರಾಮೀಣ ಕ್ಷೇತ್ರದ ಶಾಸಕರ ನಡುವೆ ಸಂವಹನ ಕೊರತೆ ಉಂಟಾಯಿತು. ಇದೀಗ ಕೆಪಿಸಿಸಿ ಕಾರ್ಯದರ್ಶಿ ಅವರು ನಮ್ಮ ಜತೆಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದ್ದಾರೆ. ನಮ್ಮ ವಾದ ಕೂಡ ಅವಿರೋಧ ಆಯ್ಕೆ ನಡೆಯಲಿ, ಚುನಾವಣೆ ಬೇಡ ಎಂದಾಗಿತ್ತು. ಹೀಗಾಗಿ ಒಮ್ಮತದ ಅಭಿಪ್ರಾಯದ ಮೇರೆಗೆ ಅವಿರೋಧ ಆಯ್ಕೆ ನಡೆದಿದೆ. ನಮ್ಮ ಭಾವನೆ, ವರ್ಚಸ್ಸಿಗೆ ಧಕ್ಕೆ ಆಗಿಲ್ಲ ಎಂದು ಹೇಳಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ನಾನು ವೈಯಕ್ತಿಕವಾಗಿ ಯಾವುದೇ ಹೇಳಿಕೆ ನೀಡುವುದಿಲ್ಲ. ಒಮ್ಮತದ ಆಯ್ಕೆಗೆ ನಮ್ಮ ಸಹಮತ ಇದೆ. ನಾನು ತಪ್ಪು ಮಾಡಿದ್ರೆ ಭಗವಂತ ನೋಡಿಕೊಳ್ಳುತ್ತಾನೆ ಎಂದು ಪರೋಕ್ಷವಾಗಿ ಜಾರಕಿಹೊಳಿ ಕುಟುಂಬಕ್ಕೆ ತಿರುಗೇಟು ನೀಡಿದರು.