ಬೆಳಗಾವಿ: ಪಿಎಲ್‍ಡಿ ಬ್ಯಾಂಕ್ ಕದನ : ಪಿಕ್ಚರ್ ಅಬಿ ಬಾಕಿ ಹೈ ಅನ್ನುವಂತಿದೆ (ದೋಸ್ತ )
ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಕದನ : ಪಿಕ್ಚರ್ ಅಬಿ ಬಾಕಿ ಹೈ ಅನ್ನುವಂತಿದೆ (ದೋಸ್ತ )
ಬೆಳಗಾವಿ ಸೆ 7 : ರಾಜ್ಯದಲ್ಲಿ ಯಾವುದೆ ಸರಕಾರ ಬರಲಿ ಅಲ್ಲಿ ಜಾರಕಿಹೊಳಿ ಸಹೋದರರೊಬ್ಬರು ಸಚಿವರಾಗಿ ಇರುತಾರೆ. ಅಷ್ಟರ ಮಟ್ಟಿಗೆ ಪ್ರಭಾವ ಹೊಂದಿರುವ ಜಾರಕಿಹೊಳಿ ಬ್ರದರ್ಸಗೆ ಇಂದು ಬೆಳಗಾವಿಯ ಸಣ್ಣ ಬ್ಯಾಂಕವೊಂದರ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಮುಖಭಂಖವಾದಂತೆ ಕಂಡರೂ ಆಂತರ್ಯದಲ್ಲಿ ಬೇರೆಯದನ್ನೇ ಪ್ರತಿಬಿಂಬಿಸುವಂತೆ ಕಾಣುತ್ತಿದೆ
ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಮೂವರು ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರನ್ನು ಸೆಳೆಯುವ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್ ಮೇಲುಗೈ ಸಾಧಿಸಿದ್ದಾರೆ. ಈ ಚುನಾವಣೆಯನ್ನು ಜಾರಕಿಹೊಳಿ ಕುಟುಂಬ ಪ್ರತಿಷ್ಠೆಯಾಗಿ ಸ್ವೀಕರಿಸಿತ್ತು. ಹಾಗೆಯೇ ಗ್ರಾಮಾಂತರ ಕ್ಷೇತ್ರದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿಕೊಳ್ಳಲು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಹಠಕ್ಕೆ ಬಿದ್ದು, ಪಿಎಲ್‍ಡಿ ಬ್ಯಾಂಕ್‍ನಲ್ಲಿ ಅಧಿಪತ್ಯ ಸಾಧಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಜಿಲ್ಲೆಯ ಕಾಂಗ್ರೆಸ್‍ನಲ್ಲಿ ನಾನೂ ಪ್ರಭಾವಿ ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ಶಾಸಕಿ ರವಾನಿಸಿದ್ದಾರೆ ಎಂದು ರಾಜಕೀಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕಳೆದ 20 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಎಲ್ಲ ಸರ್ಕಾರಗಳ ಸಂಪುಟದಲ್ಲಿ ಜಾರಕಿಹೊಳಿ ಸಹೋದರರು ಸ್ಥಾನ ಪಡೆಯುತ್ತಲೇ ಬಂದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸತೀಶ ಜಾರಕಿಹೊಳಿ, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ, ಬಿಜೆಪಿ ಸರ್ಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ, ಕಾಂಗ್ರೆಸ್ ಸರ್ಕಾರದಲ್ಲಿ ಸತೀಶ ಹಾಗೂ ರಮೇಶ ಜಾರಕಿಹೊಳಿ, ಪ್ರಸ್ತುತ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ರಮೇಶ ಜಾರಕಿಹೊಳಿ ಸಚಿವರಾಗಿದ್ದಾರೆ.
ರಾಜ್ಯದಲ್ಲಿ ಪ್ರಭಾವಿಯಾಗಿರುವ ಜಾರಕಿಹೊಳಿ ಕುಟುಂಬಕ್ಕೆ ಈ ಚುನಾವಣೆಯ ಸೋಲು ನುಂಗಲಾರದ ಬಿಸಿತುಪ್ಪವಾಗಿದೆ. ಕೆಪಿಸಿಸಿ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರು ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಬೆಳಗಾವಿಯ ಸ್ಥಳೀಯ ನಾಯಕರ ಭಿನ್ನಮತ ಶಮನಗೊಂಡಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ನಡುವಿನ ಸ್ನೇಹಕ್ಕೆ ಕುತ್ತು ತಂದಿರುವ ಬ್ಯಾಂಕ್ ರಾಜಕಾರಣ, ಭವಿಷ್ಯದಲ್ಲಿ ಜಿಲ್ಲಾ ಕಾಂಗ್ರೆಸ್ಗೆ ಮಾರಕವಾಗಲಿದೆ ಎಂಬ ಮಾತಿಗಳು ಕೇಳಿಬರುತ್ತಿವೆ.
ಕಳೆದ ಹಲವು ವರ್ಷಗಳಿಂದ ದೂರವಾಗಿದ್ದ ಸತೀಶ ಜಾರಕಿಹೊಳಿ ಹಾಗೂ ಸಚಿವ ರಮೇಶ ಜಾರಕಿಹೊಳಿ ಈ ಚುನಾವಣೆಯಲ್ಲಿ ಒಂದಾಗಿದ್ದಾರೆ. ಜೊತೆಗೆ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ನಡುವಿನ ಸ್ನೇಹ ಕೊಂಡಿ ಕಳಚಿದ್ದು, ಜಿಲ್ಲಾ ಕಾಂಗ್ರೆಸ್ ಸಂಘಟನೆಗೆ ಪೆಟ್ಟು ಬೀಳಲಿದೆ ಎಂದು ಹೇಳಲಾಗುತ್ತಿದೆ.
ಮೇಲ್ನೋಟಕ್ಕೆ ಮುಖಭಂಗ ಆಗಿದ್ದರೂ ಆಂತರ್ಯದಲ್ಲಿ ಬೇರೇನೋ ಇದೆ…! ಆದರೆ, ಸಭೆಯ ಬಳಿಕ ಹೊರ ಬಂದ ಶಾಸಕ ಸತೀಶ್ ಜಾರಕಿಹೊಳಿ ನಗುಮುಖದೊಂದಿಗೆ ಹೊರ ಬರುತ್ತಿರೋದು ಗೋಚರಿಸುತ್ತಿದೆ. ಮೇಲ್ನೋಟಕ್ಕೆ ಜಾರಕಿಹೊಳಿ ಸಹೋದರರಿಗೆ ಮುಖಭಂಗ ಎಂಬ ಮಾತು ಚಾಲ್ತಿಯಲ್ಲಿದ್ದರೂ, ಇಷ್ಟೆಲ್ಲ ದೊಡ್ಡ ರಂಪ ರಾಮಾಯಣದ ಬಳಿಕ ಈಜಿಯಾಗಿ ಹೈಕಮಾಂಡ್‍ಗೆ ಜಾರಕಿಹೊಳಿ ಕುಟುಂಬ ಮಣಿಯಿತಾ ಅನ್ನೋದು ಯಕ್ಷ ಪ್ರಶ್ನೆಯಾಗೇ ಉಳಿದಿದೆ.
ಮತ್ತೊಂದು ಕಡೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಂಧಾನದ ಬಳಿಕವೂ ಶಾಸಕ ಜಾರಕಿಹೊಳಿ ಬೆಂಬಲಿಗರು ತೀವ್ರ ಅಸಮಾಧಾನವನ್ನ ಬಹಿರಂಗವಾಗೇ ಹೊರಹಾಕಿದ್ದಾರೆ. ಇದೆಲ್ಲವನ್ನ ನೋಡಿದರೆ ಯಾವುದೂ ಮುಕ್ತಾಯವಾಗಿಲ್ಲ ಎಂಬಂತೆ ಕಾಣುತ್ತಿದೆ. ಇನ್ನು ಸತೀಶ್ ಜಾರಕಿಹೊಳಿ ಅಂದುಕೊಂಡಿದ್ದನ್ನ ಸಾಧಿಸಿದ್ದಾರೆ. ಚುನಾವಣೆ ನಡೆಯಬಾರದು ಎನ್ನುವುದು ಅವರ ಒನ್ಲೈನ್ ಅಜೆಂಡಾ ಆಗಿತ್ತು. ಅವರು ಅದನ್ನ ಸಾಧಿಸಿದ್ದಾರೆ ಎಂದೂ ಕೆಲವರು ಬಣ್ಣಿಸುತ್ತಿದ್ದಾರೆ. ಇದು ಏನೇ ಇರಲಿ ಪಿಕ್ಚರ್ ಅಬಿ ಬಾಕಿ ಹೈ ಅನ್ನುವಂತಿದೆ ಇಂದಿನ ಈ ಎಲ್ಲ ಘಟನೆಗಳು…