ಗೋಕಾಕ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬೃಹತ್ ಪ್ರತಿಭಟನೆ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬೃಹತ್ ಪ್ರತಿಭಟನೆ
ಗೋಕಾಕ ಸೆ 11 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಂಗಳವಾರದಂದು ನಗರದ ನಾಕಾ ನಂ1 ರಿಂದ ಬೃಹತ್ ಬೈಕ್ ರ್ಯಾಲಿ ಹಾಗೂ ಚಕ್ಕಡಿ ಬಂಡಿಗಳ ಹಾಗೂ ಪಾದಯಾತ್ರೆಯ ಮೂಲಕ ನೂರಾರು ರೈತ ಮಹಿಳೆಯರೊಂದಿಗೆ ಆಗಮಿಸಿ ಕೆಲ ಸಮಯ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ನಂತರ ತಹಶೀಲದಾರ ಕಚೇರಿಗೆ ಮುತ್ತಿಗೆ ಹಾಕಿದರು.
ಮಿನಿವಿಧಾನ ಸೌಧದ ಮುಂದೆ ತಾಲೂಕಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ರೈತರಿಗೆ ಆಗುತ್ತಿರುವ ಕುಂದು ಕೊರತೆಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರೈತರ ವಿವಿಧ ಬೇಡಿಕೆಗಳಾದ ಬಾಕಿ ಇರುವ ರೈತರ ಕಬ್ಬಿನ ಬಿಲ್ಲನ್ನು ಪಾವತಿಸಬೇಕು. ಪಂಚಾಯತಿಗಳಲ್ಲಿ ಪಹಣಿ ಪತ್ರಿಕೆಗಳನ್ನು ವಿತರಿಸಬೇಕು. ಹೊಸ ಪಡಿತರ ಚೀಟಿಗಳನ್ನು ವಿತರಿಸಬೇಕು. ರೈತರ ಪಂಪಸೆಟ್‍ಗಳಿಗೆ ನಿರಂತರವಾಗಿ ವಿದ್ಯುತ್‍ನ್ನು ಪೂರೈಸಬೇಕು. ಸರ್ಕಾರ ರೈತರ ಸಂಪೂರ್ಣ ಸಾಲವನ್ನು ಮಾಡಿದ್ದರ ಋಣಮುಕ್ತ ಪ್ರಮಾಣ ಪತ್ರಗಳನ್ನು ನೀಡಬೇಕು. ಪಶು ಚಿಕಿತ್ಸಾಲಯಗಳಲ್ಲಿ ಗುಣಮಟ್ಟದ ಔಷಧಗಳನ್ನು ವಿತರಿಸಬೇಕು. ಸುಟ್ಟ ಟಿ.ಸಿ.ಗಳನ್ನು ಶೀಘ್ರವಾಗಿ ನೀಡುವ ಕ್ರಮ ಕೈಗೊಳ್ಳಬೇಕು. ರೈತರಿಗೆ ವಾಹನಾ ಚಾಲನಾ ಪರವಾಣಿಗೆ ಪತ್ರಗಳನ್ನು ನೀಡಲು ಹಳ್ಳಿಗಳಲ್ಲಿ ಕ್ಯಾಂಪಗಳನ್ನು ನಡೆಸಬೇಕು. ಕಡ್ಡಾಯವಾಗಿ 3 ತಿಂಗಳಿಗೊಮ್ಮೆ ತಾಲೂಕಾ ಮಟ್ಟದ ಅಧಿಕಾರಿಗಳು ರೈತರ ಕುಂದು ಕೊರತೆಗಳ ಸಭೆಯನ್ನು ಏರ್ಪಡಿಸಬೇಕು. ಕೃಷಿ ಉತ್ಪನ್‍ಗಳ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಗೋಕಾಕದಿಂದ ತುಕ್ಕಾನಟ್ಟಿ ಗ್ರಾಮದ ವರೆಗೆ ನಿರಂತರವಾಗಿ ಬಸ್ ಸೇವೆಯನ್ನು ಒದಗಿಸಬೇಕು. ಶಿರೂರ್ ಜಲಾಶಯದಿಂದ ತವಗ ಗ್ರಾಮಕ್ಕ ನೀರಾವರಿ ವ್ಯವಸ್ಥೆಯನ್ನು ಮಾಡಬೇಕು. ಎಸ್.ಸಿ.ಎಸ್.ಟಿ ಜನಾಂಗದದವರಿಗೆ ಸರ್ಕಾರದ ಸಾಗುವಳಿ ಮಾಡುವ ಜಮೀನಗಳ ಹಕ್ಕು ಪತ್ರವನ್ನು ವಿತರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಚೂನಪ್ಪ ಪೂಜೇರಿ, ತಾಲೂಕಾ ಕಾರ್ಯಾಧ್ಯಕ್ಷ ಮಂಜುನಾಥ ಪೂಜೇರಿ, ಸತ್ತೆಪ್ಪ ಮಲ್ಲಾಪೂರೆ, ರಾಜು ಹೂಲಿಕಟ್ಟಿ, ಅಶೋಕ ಯಮಕನಮರಡಿ, ರವಿ ಸಿದ್ದಮ್ಮನವರ, ಮಂಜುನಾಥ ಗದಾಡಿ, ಮಾರುತಿ ನಾಯ್ಕ, ಮಹಾದೇವ ಮಡಿವಾಳರ, ಬಸು ನಾಯ್ಕ, ಯಲ್ಲಪ್ಪ ತಿಗಡಿ, ಪ್ರದೀಪ ಪೂಜಾರಿ, ಇರ್ಫಾನ ಜಮಾದಾರ, ವಿಜಯ ಕೋಳಿ, ಸಿದ್ದಲಿಂಗ ಪೂಜೇರಿ, ಈರಣ್ಣ ಸಸಾಲಟ್ಟಿ, ಶ್ರೀಶೈಲ ಅಂಗಡಿ ಸೇರಿದಂತೆ ಅನೇಕರು ಇದ್ದರು.