ಮೂಡಲಗಿ:ಅವರಾದಿ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ
ಅವರಾದಿ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ
ಮೂಡಲಗಿ ಸೆ 14 : ತಾಲೂಕಿನ ಅವರಾದಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ತಿಮ್ಮಾಪೂರ ಗ್ರಾಮದ ಲಕ್ಕವ್ವ ಕರೆಪ್ಪ ಬಿ.ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಹಳೇಯರಗುದ್ರಿ ಗ್ರಾಮದ ಹಣಮವ್ವ ಹಣಮಪ್ಪ ಭಜಂತ್ರಿ ಅವರು ಆಯ್ಕೆಯಾಗಿದ್ದಾರೆ.
ಇಂದಿಲ್ಲಿ ಅವರಾದಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿತ ಲಕ್ಕವ್ವ ಕರೆಪ್ಪ ಬಿ.ಪಾಟೀಲ ಹಾಗೂ ಜಿಪಂ ಮಾಜಿ ಸದಸ್ಯ ರಮೇಶ ಉಟಗಿ ಬೆಂಬಲಿತ ಗುರಪ್ಪ ಕರೆಪ್ಪ ಉಟಗಿ ಅವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಜಾರಕಿಹೊಳಿ ಬೆಂಬಲಿತ ಭಜಂತ್ರಿ ಅವರು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಕ್ಕವ್ವ ಬಿ.ಪಾಟೀಲ ಅವರಿಗೆ 12 ಮತಗಳು ಹಾಗೂ ಗುರಪ್ಪ ಉಟಗಿ ಅವರಿಗೆ 10 ಮತಗಳು ಲಭಿಸಿದ್ದರಿಂದ 2 ಮತಗಳ ಅಂತರದಿಂದ ಲಕ್ಕವ್ವ ಬಿ.ಪಾಟೀಲ ಅವರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ತಾಪಂ ಇಓ ಹೆಗ್ಗರನಾಯಿಕ ಅವರು ಪ್ರಕಟಿಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಚುನಾವಣಾಧಿಕಾರಿಗಳು ಅಭಿನಂದಿಸಿದರು.