ಬೆಳಗಾವಿ:ಸಿದ್ದು ಭೇಟಿಗೆ ಬೆಂಗಳೂರಿಗೆ ತೆರಳಿದ ಸಚಿವ ರಮೇಶ : ಸತೀಶ್ಗೆ ದೆಹಲಿ ನಾಯಕರ ಬುಲಾವ್!
ಸಿದ್ದು ಭೇಟಿಗೆ ಬೆಂಗಳೂರಿಗೆ ತೆರಳಿದ ಸಚಿವ ರಮೇಶ : ಸತೀಶ್ಗೆ ದೆಹಲಿ ನಾಯಕರ ಬುಲಾವ್!
ಬೆಳಗಾವಿ ಸೆ 17 : ನಿಗೂಢ ನಡೆ ಅನುಸರಿಸುವ ಮೂಲಕ ಮೈತ್ರಿ ಸರಕಾರದ ಚಿಂತೆಗೆ ಕಾರಣವಾಗಿರುವ ರಾಜ್ಯ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಬೆಂಗಳೂರಿಗೆ ಬಂದಿದ್ದಾರೆ
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಅವರಿಗೆ ಸಂಸದ ಪ್ರಕಾಶ್ ಹುಕ್ಕೇರಿ ಸಾಥ್ ನೀಡಿದ್ದಾರೆ. ಎರಡು ದಿನಗಳ ಹಿಂದೆ ಬೆಳಗಾವಿಗೆ ಆಗಮಿಸಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಸಚಿವ ಜಾರಕಿಹೊಳಿ ಅಂತರ ಕಾಯ್ದುಕೊಂಡಿದ್ದರು. ನಗರದಲ್ಲಿ ನಡೆದಿದ್ದ ಸಿಎಂ ಅವರ ಎಲ್ಲ ಕಾರ್ಯಕ್ರಮಗಳಿಗೆ ಗೈರು ಹಾಜರಾಗಿದ್ದ ರಮೇಶ್ ಜಾರಕಿಹೊಲಿ ಗೋಕಾಕ್ನಲ್ಲೇ ಉಳಿದುಕೊಂಡಿದ್ದರು. ಸಚಿವರ ಈ ನಡೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಅಸ್ಥಿರತೆಯ ಆತಂಕ ಕಾಡತೊಡಗಿತ್ತು.
ಜಿಲ್ಲೆಯ ರಾಜಕಾರಣದಲ್ಲಿ ಸಚಿವ ಡಿಕೆಶಿ ಹಸ್ತಕ್ಷೇಪ, ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಸಚಿವ ಡಿಕೆಶಿ ಅವರು ಶಾಸಕಿ ಹೆಬ್ಬಾಳ್ಕರ್ ಬೆನ್ನಿಗೆ ನಿಂತಿದ್ದು, ವರ್ಗಾವಣೆ ವಿಚಾರದಲ್ಲಿ ಬೇರೆಯರವ ಹಸ್ತಕ್ಷೇಪಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಜಾರಕಿಹೊಳಿ ಸಹೋದರರು ಬಹಿರಂಗ ಆರೋಪ ಮಾಡತೊಡಗಿದ್ದರು. ಅಲ್ಲದೇ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಬೆಂಬಲಿತ 8 ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರುವ ಚಿಂತನೆಯನ್ನೂ ನಡೆಸಿದ್ದರು. ಬೆಂಗಳೂರಿಗೆ ಬಂದಿರುವ ಸಚಿವ ರಮೇಶ್ ಜಾರಕಿಹೊಳಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಜಿಲ್ಲೆಯಲ್ಲಿ ಸಚಿವ ಡಿಕೆಶಿ ಹಸ್ತಕ್ಷೇಪ ಹಾಗೂ ಸರ್ಕಾರದಲ್ಲಿ ತಮಗಾಗುತ್ತಿರುವ ಅನ್ಯಾಯ, ವೈಯಕ್ತಿಕ ವಿಚಾರಗಳನ್ನು ಸಚಿವರು ಸಿದ್ದರಾಮಯ್ಯ ಎದುರು ಹೇಳಿಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಭೇಟಿಯ ಬಳಿಕ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಸಚಿವ ಜಾರಕಿಹೊಳಿ ನಿರ್ಧಾರ ಕೈಗೊಳ್ಳಲಿದ್ದಾರೆ.
ಇನ್ನೂ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಸಚಿವ ರಮೇಶ್ ಜಾರಕಿಹೊಳಿ ಕೆಐಎಎಲ್ನಿಂದ ಖಾಸಗಿ ಕಾರಿನಲ್ಲಿ ಬೆಂಗಳೂರಿನತ್ತ ಹೊರಟರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಲು ಸಚಿವರು ನಿರಾಕರಿಸಿದರು. ನಾಯಕರನ್ನ ಬೇಟಿಯಾಗಲು ಬೆಂಗಳೂರಿಗೆ ಹೊಗುತ್ತಿದ್ದೇನೆ ಅಂತ ಹೇಳಿ ಬೆಂಗಳೂರಿನತ್ತ ಹೊರಟ ರಮೇಶ್ ಜಾರಕಿಹೊಳಿಯಾವುದೇ ಸರ್ಕಾರಿ ವಾಹನ ಎಸ್ಕರ್ಟ್ ಇಲ್ಲದೆ ಸಾಮಾನ್ಯ ವ್ಯಕ್ತಿಯಂತೆ ಖಾಸಗಿ ಕಾರಿನಲ್ಲಿ ಪ್ರಯಾಣ ಬೆಳೆಸಿರುವುದು ಕುತೂಹಲ ಕೆರಳಿಸಿದೆ.
ಸತೀಶ್ಗೆ ದೆಹಲಿ ನಾಯಕರ ಬುಲಾವ್!
ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ತ್ವರಿತ ಬೆಳವಣಿಗೆ ಹಿನ್ನಲೆಯಲ್ಲಿ ಶಾಸಕ ಸತೀಶ ಜಾರಕಿಹೊಳಿಗೆ ದೆಹಲಿಯ ಕಾಂಗ್ರೆಸ್ ಹೈಕಮಾಂಡ್‍ನಿಂದ ಬುಲಾವ್ ಬಂದಿದ್ದು, ಇಂದು ಇಲ್ಲವೇ ನಾಳೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ರಮೇಶ್ ಬದಲಿಗೆ ಸತೀಶ್ ಅವರಿಗೆ ಸಚಿವ ಸ್ಥಾನ ನೀಡುವ ನಿರ್ಧಾರಕ್ಕೆ ಪಕ್ಷದ ನಾಯಕರು ಬಂದಿದ್ದಾರೆ ಎನ್ನಲಾಗುತ್ತಿದ್ದು, ಸತೀಶ್ ಅವರ ದೆಹಲಿ ನಾಯಕರ ಭೇಟಿಯೂ ಕುತೂಹಲಕ್ಕೆ ಕಾರಣವಾಗಿದೆ