ಮೂಡಲಗಿ:ವಿಜ್ಞಾನ ಮಾತೃಭಾಷೆಯ ಕಲಿಕೆಯಿಂದ ಸಂವಹನ ಸುಲಭ
ವಿಜ್ಞಾನ ಮಾತೃಭಾಷೆಯ ಕಲಿಕೆಯಿಂದ ಸಂವಹನ ಸುಲಭ
ಮೂಡಲಗಿ ಅ 1 :ವಿಜ್ಞಾನವನ್ನು ಮಾತೃಭಾಷೆಯಲ್ಲಿ ಕಲಿಯುವುದರಿಂದ ವಿದ್ಯಾರ್ಥಿಗಳಿಗೆ ಸಂವಹನವು ಸುಲಭವಾಗಿ ಪರಿಪೂರ್ಣವಾದ ಜ್ಞಾನ ದೊರೆಯುತ್ತದೆ’ ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎ. ಶಾಸ್ತ್ರೀಮಠ ಹೇಳಿದರು.
ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆತಿಥ್ಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮಟ್ಟದ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಜ್ಞಾನದ ಎಲ್ಲ ವಿಷಯಗಳು ಎಲ್ಲರಿಗೂ ಅರ್ಥವಾಗುವಂತಿರಬೇಕು ಎಂದರು.
ವಿಜ್ಞಾನ ಪರಿಷತ್ತಿನ ಸಂಸ್ಥಾಪಕ ಡಾ. ಎಚ್. ನರಸಿಂಹಯ್ಯ, ಸ.ಜ. ನಾಗಲೋಟಿಮಠ, ಡಾ. ಟಿ.ಆರ್. ಅನಂತರಾಮು, ನಾಗೇಶ ಹೆಗಡೆ ಡಾ. ಕ್ಯಾಲಕೊಂಡ ಹೀಗೆ ಅನೇಕರು ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ವಿಸ್ತರಿಸಿದ್ದು, ವಿದ್ಯಾರ್ಥಿಗಳು ಕನ್ನಡ ವಿಜ್ಞಾನ ಸಾಹಿತ್ಯವನ್ನು ಓದಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವಿಜ್ಞಾನ ಪರಿಷತ್ತ ಅಧ್ಯಕ್ಷ ಅಶೋಕ ತೋಟಗಿ ಮಾತನಾಡಿ ವಿಜ್ಞಾನಲೋಕವು ಇಂಗ್ಲಿಷ್ ಭಾಷೆಯಿಂದ ಪ್ರಭಾವಿತವಾಗಿದ್ದು, ವಿಜ್ಞಾನವನ್ನು ಮಾತೃಭಾಷೆಗೆ ಅಳವಡಿಸುವ ಮೂಲಕ ಭಾಷೆಯ ವ್ಯಾಪಕತೆಯನ್ನು ಹೆಚ್ಚಿಸಬೇಕು ಎಂದರು.
ಅತಿಥಿ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ ಭೌತಶಾಸ್ತ್ರ, ರಸಾಯಣಶಾಸ್ತ್ರ, ಜೀವಶಾಸ್ತ್ರ, ಗಣಿತದಂತ ಕಠಿಣ ವಿಷಯಗಳನ್ನು ಸಂವಹನತೆಯ ದೃಷ್ಟಿಯಿಂದ ಬೇಗ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು ಎಂದರು.
ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿ ಜಿ.ಬಿ. ನೇಸರಗಿ, ವೈ.ಎಂ. ಸನದಿ, ಪಿ.ಎಸ್. ಸಿದ್ನಾಳ ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಯೋಜಕ ಡಾ. ವಿ.ಆರ್. ದೇವರಡ್ಡಿ ಸ್ವಾಗತಿಸಿದರು.
ಸ್ಪರ್ಧೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಮಹಾವಿದ್ಯಾಲಯಗಳಿಂದ 50ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು.