RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ವಸತಿ ನಿರ್ಮಾಣ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು : ಸಚಿವ ರಮೇಶ

ಗೋಕಾಕ:ವಸತಿ ನಿರ್ಮಾಣ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು : ಸಚಿವ ರಮೇಶ 

ವಸತಿ ನಿರ್ಮಾಣ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು : ಸಚಿವ ರಮೇಶ

ಗೋಕಾಕ ಅ 5 : ಬುದ್ಧ, ಬಸವ, ಅಂಬೇಡ್ಕರರವರ ತತ್ವದಡಿಯಲ್ಲಿ ಜಾತ್ಯಾತೀತ, ಧರ್ಮಾತೀತವಾಗಿ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ, ಕ್ಷೇತ್ರ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿರುವುದಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ನಗರದ ಗುರುವಾರ ಪೇಠೆಯ ಶ್ರೀ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಕೊಳಗೇರಿ ಬೆಳಗಾವಿ, ನಗರ ಸಭೆ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ 600 ಗೃಹಗಳ ನಿರ್ಮಾಣ ಯೋಜನೆ ಕಾಮಗಾರಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಗರದ ಅಭಿವೃದ್ದಿಗಾಗಿ ಹಲವಾರು ಯೋಜನೆಯ ಕಾಮಗಾರಿಗಳು ಮುಕ್ತಾಯ ಹಂತದಲ್ಲಿ ಇದ್ದು, ಈಗ ವಸತಿ ನಿರ್ಮಾಣ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲಾಗುವುದು. ಬಡವರಿಗೆ ಸೂರುವಿಲ್ಲದವರಿಗೆ ಮುಂದಿನ ದಿನಗಳಲ್ಲಿ ಆಶ್ರಯ ಮನೆ ಯೋಜನೆಯಡಿ 8ಸಾವಿರ ಮನೆಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದ್ದು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.
ಕಳೆದ ಗೋಕಾಕ ನಗರ ಸಭೆ ಹಾಗೂ ಕೊಣ್ಣೂರ ಪುರಸಭೆ ಚುನಾವಣೆಯಲ್ಲಿ ಎಲ್ಲ ವಾರ್ಡಗಳ ಸದಸ್ಯರನ್ನು ಅವಿರೋಧ ಆಯ್ಕೆ ಮಾಡುವ ನಮ್ಮ ಪ್ರಯತ್ನಕ್ಕೆ ಕೆಲವು ಕುಂತ್ರಿಗಳಿಂದ ಅಡಚಣೆಯಾಯಿತು. ಆದರೂ ಜನತೆ ನಮ್ಮ ಅಭಿವೃದ್ದಿ ಪರ ಕಾರ್ಯಗಳನ್ನು ನೋಡಿ ನಮಗೆ ಆಶಿರ್ವದಿಸಿದ್ದಾರೆ. ಸೋತವರು, ಗೆದ್ದವರು ನಮ್ಮವರೆ ಆಗಿದ್ದು, ಅಭಿವೃದ್ದಿ ಕಾರ್ಯದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿದ್ದ ಇಲ್ಲಿ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಜಾರಕಿಹೊಳಿ ಸಹೋದರರ ಪ್ರಯತ್ನದಿಂದ ನಗರ ಶಾಂತಿಯೊಂದಿಗೆ ಅಭಿವೃದ್ದಿ ಪಥದತ್ತ ನಡೆಯುತ್ತಿದೆ. ಸಚಿವ ರಮೇಶ ಜಾರಕಿಹೊಳಿ ನೇರನುಡಿ, ದಿಟ್ಟತನ, ಹೃದಯ ಶ್ರೀಮಂತಿಕೆ ಹಾಗೂ ಅಭಿವೃದ್ದಿ ಕಾರ್ಯಗಳಿಂದ ಜನರ ಮನಗೆಲ್ಲುತ್ತಿದ್ದು, ಮುಂದಿನ ದಿನಗಳಲ್ಲಿ ಉಪ ಮುಖ್ಯಮಂತ್ರಿಗಳಾಗಿ, ಉತ್ತರ ಕರ್ನಾಟಕದ ಅಭಿವೃದ್ದಿಯ ಹರಿಕಾರರಾಗುತ್ತಾರೆ ಎಂದು ಹೇಳಿದರು.
ವೇದಿಕೆ ಮೇಲೆ ಬಟಕುರ್ಕಿಯ ಶ್ರೀ ಬಸವಲಿಂಗ ಸ್ವಾಮಿಜಿ, ಜಿಪಂ ಸದಸ್ಯ ಟಿ.ಆರ್.ಕಾಗಲ, ನಗರ ಸಭೆ ಸದಸ್ಯರಾದ ಎಸ್.ಎ.ಕೋತವಾಲ, ತರನ್ನುಮ ಶಾಬಾಶಖಾನ, ಬಸವರಾಜ ಆರೆನ್ನವರ, ಪೌರಯುಕ್ತ ಎಮ್.ಎಚ್.ಅತ್ತಾರ, ಮುಖಂಡ ಪ್ರಭಾಕರ ಚೌವ್ಹಾಣ,ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅಧಿಕಾರಿಗಳಾದ ಮಾರುತಿ ಲಮಾಣಿ, ಶಂಬುಲಿಂಗ ಎಸ್. ಇದ್ದರು.
ನಗರ ಸಭೆ ಸಹಾಯಕ ಅಭಿಯಂತರ ವಿ.ಎಸ್.ತಡಸಲೂರ ಸ್ವಾಗತಿಸಿದರು, ಲೆಕ್ಕ ಅಧಿಕ್ಷಕ ಎಮ್.ಎನ್.ಸಾಗರೇಕರ ನಿರೂಪಿಸಿ ವಂದಿಸಿದರು.

Related posts: