ಬೆಳಗಾವಿ:ಬಿಜೆಪಿ ಮುಖಂಡ ಧೋತ್ರೆ ವಿರುದ್ಧ ಭೂ ಕಬಳಿಕೆ ಆರೋಪ
ಬಿಜೆಪಿ ಮುಖಂಡ ಧೋತ್ರೆ ವಿರುದ್ಧ ಭೂ ಕಬಳಿಕೆ ಆರೋಪ
ಬೆಳಗಾವಿ ಅ 12 : ಮಹಾನಗರದ ಬಿಜೆಪಿ ಮುಖಂಡ ಪಾಂಡುರಂಗ ಧೋತ್ರೆ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿದೆ . ಜಮಿನಿನ ಮಾಲಿಕ ಅನಿಲ್ ಬಾಡಿವಾಲೆ ಎಂಬುವವರು ಧೋತ್ರೆ ವಿರುದ್ಧ ಕಾನೂನು ಸಮರ ಸಾರಿದ್ದಾರೆ
ನಗರದ ಹಿಂಡಲಗಾ ಬಡವಣೆಯಲ್ಲಿರುವ ಖಾಲಿ ಜಾಗವನ್ನು ಬಿಜೆಪಿ ಮುಖಂಡ ಪಾಂಡುರಂಗ ಧೋತ್ರೆ ಅವರು ಕಬಳಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಅನಿಲ್ ಬಾಡಿವಾಲೆ ಅವರಿಗೆ ಸೇರಿದ ಸರ್ವೆ ನಂಬರ್ 181/7 ಹಾಗೂ 181/8 ವ್ಯಾಪ್ತಿಯ 2.5 ಕೋಟಿ ರೂ. ಬೆಲೆಬಾಳುವ ಒಟ್ಟು 23 ಗುಂಟೆ ಜಮೀನು ಕಬಳಿಕೆಗೆ ಮುಂದಾಗಿರುವ ಆರೋಪಕ್ಕೆ ಪಾಂಡುರಂಗ ಧೋತ್ರೆ ಗುರಿಯಾಗಿದ್ದಾರೆ.
ಅನಿಲ್ ಬಾಡಿವಾಲೆಗೆ ಸೇರಿದ 23 ಗುಂಟೆ ಜಾಗವನ್ನು ಪಾಂಡುರಂಗ ಧೋತ್ರೆ ಅವರು ತನ್ನ ಕಚೇರಿಯ ಆಫೀಸ್ ಬಾಯ್ ಆಗಿದ್ದ ಸಿದ್ಧಾರ್ಥ ಕಾಂಬಳೆ ಹೆಸರಿಗೆ ಪವರ್ ಆಫ್ ಅಟಾರ್ನಿ ಮಾಡಿಸಿದ್ದಾರೆ. ನನಗೆ ಗೊತ್ತಿಲ್ಲದೇ ನಕಲಿ ದಾಖಲೆ ಸೃಷ್ಠಿಸಿ ಪಾಂಡುರಂಗ ಧೋತ್ರೆ ಅವರು ಈ ಕೃತ್ಯ ಎಸಗಿದ್ದಾರೆ ಎನ್ನುವುದು ಜಮೀನಿನ ಮಾಲೀಕ ಅನಿಲ್ ಬಾಡಿವಾಲೆ ಅವರ ಆರೋಪವಾಗಿದೆ. ಅಲ್ಲದೇ ಪಾಂಡುರಂಗ ಧೋತ್ರೆ ಹಾಗೂ ಸಿದ್ಧಾರ್ಥ ಕಾಂಬಳೆ ವಿರುದ್ಧ ಅನಿಲ್ ಬಾಡಿವಾಲೆ ಅವರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಸಿಇಎನ್ ಪೊಲೀಸರು ಪಾಂಡುರಂಗ ಧೋತ್ರೆ ಹಾಗೂ ಸಿದ್ಧಾರ್ಥ ಕಾಂಬಳೆ ಅವರಿಗೆ ನೋಟಿಸ್ ನೀಡಿದರೂ ಧೋತ್ರೆ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಪಾಂಡುರಂಗ ಧೋತ್ರೆ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದಾರೆ ಎಂದು ಆರೋಪಿಸಿರುವ ಅನಿಲ್ ಬಾಡಿವಾಲೆ ಕಠಿಣ ಕ್ರಮ ಜರುಗಿಸಬೇಕು ಆಗ್ರಹಿಸುತ್ತಿದ್ದಾರೆ.