RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಹೆಚ್ಚುತ್ತಿರುವ ಡೆಂಗ್ಯು ಜ್ವರ ಪ್ರಕರಣ: ಗೋಕಾಕದಲ್ಲಿ ಸಾರ್ವಜನಿಕರ ಆಕ್ರೋಶ , ಆರೋಗ್ಯ ಇಲಾಖೆ , ನಗರಸಭೆ ಅಧಿಕಾರಿಗಳಿಗೆ ಮನವಿ

ಗೋಕಾಕ:ಹೆಚ್ಚುತ್ತಿರುವ ಡೆಂಗ್ಯು ಜ್ವರ ಪ್ರಕರಣ: ಗೋಕಾಕದಲ್ಲಿ ಸಾರ್ವಜನಿಕರ ಆಕ್ರೋಶ , ಆರೋಗ್ಯ ಇಲಾಖೆ , ನಗರಸಭೆ ಅಧಿಕಾರಿಗಳಿಗೆ ಮನವಿ 

ಹೆಚ್ಚುತ್ತಿರುವ ಡೆಂಗ್ಯು ಜ್ವರ ಪ್ರಕರಣ: ಗೋಕಾಕದಲ್ಲಿ ಸಾರ್ವಜನಿಕರ ಆಕ್ರೋಶ , ಆರೋಗ್ಯ ಇಲಾಖೆ , ನಗರಸಭೆ ಅಧಿಕಾರಿಗಳಿಗೆ ಮನವಿ

ಗೋಕಾಕ ಅ 15 : ಡೆಂಗ್ಯು ಜ್ವರದ ಪ್ರಕರಣಗಳು ಮಹಾಮಾರಿಯಂತೆ ನಗರದಲ್ಲಿ ಹಬ್ಬುತ್ತಿದ್ದರೂ ನಗರಸಭೆ ಹಾಗೂ ಆರೋಗ್ಯ ಇಲಾಖೆ ಕಣ್ಣುಮುಚ್ಚಿ ಕುಳಿತಿದ್ದನ್ನು ವಿರೋಧಿಸಿ ಇಲ್ಲಿಯ ಕೊಳಚೆ ಪ್ರದೇಶದ ನಿವಾಸಿಗಳು ಪ್ರತಿಭಟನೆ ನಡೆಸಿ ಎರಡು ಪ್ರತ್ಯೇಕ ಮನವಿಗಳನ್ನು ಅರ್ಪಿಸಿದರು.
ನಗರದ ಕಲಾಲರ ಓಣಿ, ಭೋಜಗಾರ ಓಣಿ, ಡೋಹರ ಓಣಿ ಹಾಗೂ ಉಪ್ಪಾರ ಓಣಿಯ ನಿವಾಸಿಗಳು ಸೋಮವಾರದಂದು ಮುಂಜಾನೆ ನಗರಸಭೆಗೆ ಆಗಮಿಸಿ ಪ್ರತಿಭಟನೆ ನಡೆಸಿ ತಮ್ಮ ಓಣಿಗಳಲ್ಲಿ ಡೆಂಗ್ಯು ಜ್ವರದ ಪ್ರಕರಣಗಳು ಹೆಚ್ಚುತ್ತಿವೆ. ಈ ಓಣಿಗಳಲ್ಲಿ ಗಟಾರು ಸ್ವಚ್ಛ ಮಾಡುತ್ತಿಲ್ಲ, ಕಸ-ಕಡ್ಡಿಗಳು ರಸ್ತೆಯ ತುಂಬೆಲ್ಲ ಬಿದ್ದಿರುತ್ತವೆ. ಈ ಓಣಿಗಳ ಪಕ್ಕದಲ್ಲಿ ಹಾಯ್ದು ಹೋದ ಹಳ್ಳದ ತುಂಬೆಲ್ಲ ಹೊಲಸು ನಿಂತು ದುರ್ಗಂಧವಿಟ್ಟಿರುತ್ತದೆ. ಆದರೂ ಸಹ ಯಾರೂ ಕಣ್ಣೆತ್ತಿ ನೋಡುತ್ತಿಲ್ಲ ಎಂದು ದೂರಿದರು. ನಗರಸಭೆ ಹಾಗೂ ಆರೋಗ್ಯ ಇಲಾಖೆಯವರು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಮಾಡಿದಂತೆ ಮತ್ತು ಕೆಲ ಏರಿಯಾದಲ್ಲಿ ಕಸಬರಗಿ ಹಿಡಿದು ಫೋಟೋ ತೆಗೆಯಿಸಿಕೊಂಡು ಪ್ರಚಾರ ಮಾಡಿಕೊಳ್ಳುವದರಲ್ಲಿಯೇ ನಿರತರಾಗಿದ್ದಾರೆಂದು ನೇರವಾಗಿ ಆರೋಪಿಸಿದರು.
ಪ್ರತಿಭಟನಾಕಾರರು ಸರಕಾರಿ ಆಸ್ಪತ್ರೆಗೆ ಹೋದಾಗ ಮನವಿ ಸ್ವೀಕರಿಸಲು ಸಹ ಯಾರೂ ಬಾರದ್ದರಿಂದ ಆಸ್ಪತ್ರೆಯ ಮುಂದೆ ಧರಣಿ ಕುಳಿತು ಘೋಷಣೆ ಕೂಗತೊಡಗಿದಾಗ ತಾಲೂಕಾ ಆರೋಗ್ಯಾಧಿಕಾರಿ ಡಾ. ಆರ್. ಎಸ್. ಬೆಣಚಿನಮರಡಿ ಅವರು ಆಗಮಿಸಿ ಮನವಿ ಸ್ವೀಕರಿಸಿದರು.
ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ಡೆಂಗ್ಯು ಜ್ವರದ ರೋಗಿಗಳು ಹೋದಾಗ ಒಂದೆರಡು ಜ್ವರದ ಗುಳಿಗೆ ನೀಡಿ ಅವರನ್ನು ಸಾಗ ಹಾಕಲಾಕುತ್ತಿದ್ದು ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗದೆ ಗತ್ಯಂತರವಿಲ್ಲದಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ನಗರಸಭೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚರಾಗಿ ಕೊಳಚೆ ಪ್ರದೇಶಗಳ ಕಡೆಗೆ ಗಮನ ಹರಿಸಬೇಕು. ಇಲ್ಲದಿದ್ದರೆ ನಗರಸಭೆ ಹಾಗೂ ಗೋಕಾಕ ಸರಕಾರಿ ಆಸ್ಪತ್ರೆಗೆ ಬೀಗ ಹಾಕಿ ಧರಣಿ ನಡೆಸಲಾಗುವದೆಂದು ಎಚ್ಚರಿಕೆ ನೀಡಲಾಗಿದೆ.
ಪ್ರತಿಭಟನೆಯಲ್ಲಿ ಪ್ರಕಾಶ ಬನಾಜ, ಗಣಪತಿ ರಂಕನಕೊಪ್ಪ, ಕೃಷ್ಣಾ ತಾಶೀಲ್ದಾರ, ರವಿ ತಾಶೀಲ್ದಾರ, ಮಹೇಶ ಬಡೆಪ್ಪಗೋಳ, ಗಣೇಶ ಗೌಡರ, ಮಲ್ಲಪ್ಪ ಬಡೆಪ್ಪಗೋಳ, ಸಾದಿಕ ಭೋಜಗರ, ಸತ್ತೆವ್ವ ತಾಶೀಲ್ದಾರ, ಪಾರ್ವತಿ ಚಿನಗುಡಿ, ಲಕ್ಷ್ಮವ್ವ ಮನ್ನಿಕೇರಿ, ವೆಂಕವ್ವ ಬಬಲಿ, ಉದ್ದವ್ವ ಮನ್ನಿಕೇರಿ ಭಾಗೀರಥಿ ಬಸಳಿಗುಂದಿ, ಶಿವನಿಂಗ ಹುಳ್ಳಿ ಸೇರಿದಂತೆ ಅನೇಕರು ಇದ್ದರು.

Related posts: