ಗೋಕಾಕ:ಭಗವಾನ ಶ್ರೀ ಸತ್ಯ ಸಾಯಿ ಬಾಬಾ ಪಾದಸ್ಪರ್ಶಕ್ಕೆ 50ರ ಸಂಭ್ರಮ..!
ಭಗವಾನ ಶ್ರೀ ಸತ್ಯ ಸಾಯಿ ಬಾಬಾ ಪಾದಸ್ಪರ್ಶಕ್ಕೆ 50ರ ಸಂಭ್ರಮ..!
*ಕಲ್ಲೋಳಿಗೆ ಭೇಟಿ ನೀಡಿ 50ವರ್ಷ * ಇದೇ ಅ.21 ರಂದು ಸುವರ್ಣ ಮಹೋತ್ಸವ ಆಚರಣೆ
*ಅಡಿವೇಶ ಮುಧೋಳ. ಬೆಟಗೇರಿ
ಸಮೀಪದ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣಕ್ಕೆ ಭಗವಾನ ಶ್ರೀ ಸತ್ಯ ಸಾಯಿಬಾಬಾ ಪಾದಸ್ಪರ್ಶ ಮಾಡಿ ಇದೇ ಅಕ್ಟೋಬರ 25ಕ್ಕೆ ಐವತ್ತು ವರ್ಷ ತುಂಬಲಿವೆ. ಸುವರ್ಣ ಮಹೋತ್ಸವದ ಪ್ರಯುಕ್ತ ಪಟ್ಟಣದಲ್ಲಿ ಭಕ್ತಿಯ ಸಂಭ್ರಮ ತುಂಬಿತುಳುಕುತ್ತಿದೆ. ಇದೇ ಅಕ್ಟೋಬರ್ 21 ರಂದು ಸಮಿತಿಯ 32 ನೇ ವಾರ್ಷೀಕೋತ್ಸವದ ಜೊತೆಗೆ ಬಾಬಾ ಅವರ ಪಾದಸ್ಪರ್ಶದ ಸುವರ್ಣ ಮಹೋತ್ಸವ ಕಾರ್ಯಕ್ರಮ ಸಡಗರದಿಂದ ನಡೆಯಲಿದೆ.
ಭಗವಾನ ಸತ್ಯ ಸಾಯಿ ಬಾಬಾ ಅವರು ಸನ್ 1968 ಅಕ್ಟೋಬರ್ 25 ರಂದು ಕಲ್ಲೋಳಿ ಪಟ್ಟಣಕ್ಕೆ ಭೇಟಿ ನೀಡಿ, ಪಾದಸ್ಪರ್ಶ ಬಳಿಕ 1986 ಅಕ್ಟೋಬರ್21 ರಂದು ಆರಂಭವಾದ ಇಲ್ಲಿಯ ಶ್ರೀ ಸತ್ಯ ಸಾಯಿಸೇವಾ ಸಮಿತಿಯೂ ಸಹ ಆಶ್ಚರ್ಯಕರವಾಗಿ ಬೆಳವಣಿಗೆ ಹೊಂದಿ ಇಂದು ತನ್ನದೇ ವೈಶೀಷ್ಯತೆ ಕಾರ್ಯಗಳ ಮೂಲಕ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ವಲಯದಲ್ಲಿ ಒಳ್ಳೆಯ ಸೇವಾ ಕಾರ್ಯಕೈಗೊಂಡು ಉತ್ತಮ ಸೇವಾ ಸಮಿತಿ ಎಂದು ಗುರುತಿಸಿಕೊಂಡಿದೆ. ಅಲ್ಲದೇ ಭಗವಾನ ಸತ್ಯ ಸಾಯಿ ಬಾಬಾರ ಪಾದಸ್ಪರ್ಶದಿಂದ ಕಲ್ಲೋಳಿ ಪಟ್ಟಣ ಸುಕ್ಷೇತ್ರವಾಗಿ ಇಂದು ಕಂಗೊಳಿಸುತ್ತಿದೆ.
ಭವ್ಯ ಕಟ್ಟಡ ನಿರ್ಮಾಣ: ಇಲ್ಲಿ ಕೆಲವೇ ವರುಷಗಳಲ್ಲಿ ಶ್ರೀ ಸತ್ಯ ಸಾಯಿ ಭವನ ಹಾಲ್, ಶ್ರೀ ಸತ್ಯಸಾಯಿ ರಜತ ಭವನ, ಶ್ರೀ ಸಾಯಿ ಪ್ರಶಾಂತಿ ಕೊಠಡಿ ಹಾಗೂ ಎರಡು ಅತಿಥಿ ಗೃಹಗಳಿಂದ ಕೂಡಿದ ಸುಂದರ ಭವ್ಯ ಪ್ರಶಾಂತಿ ಕುಟಿರ ಆಶ್ರಮ (ವiಹಾಲಿಂಗಪೂರದ ನಿವೃತ್ತ ಶಿಕ್ಷಕ ಸಿ.ಎಂ.ಕಟಗಿ ಅವರು ನೀಡಿದ ಭೂದಾನ ಜಾಗೆಯಲ್ಲಿ) ನಿರ್ಮಾಣವಾಗಿದೆ. ಇಲ್ಲಿ ಪ್ರತಿ ದಿನ ಮುಂಜಾನೆ 5 ಗಂಟೆಗೆ 21 ಸಲ ಓಂಕಾರ, ಸಾಯಿ ಸುಪ್ರಭಾತ ಹಾಗೂ ಪ್ರಾಣಾಯಾಮ ಕಾರ್ಯಕ್ರಮಗಳು ನಿರಂತರ ಈ ಪ್ರಶಾಂತಿ ಕುಟಿರದಲ್ಲಿ ನಡೆಯುತ್ತಿವೆ.
ಸೇವೆಗೆ ಅಣಿಯಾದ ಸಮಿತಿ: ಕಲ್ಲೋಳಿ ಪಟ್ಟಣದ ಪ್ರಶಾಂತಿ ಕುಟಿರದಲ್ಲಿ ವಾರಕ್ಕೆ 2 ದಿನ ಸಾಯಿ ಭಜನೆ, ವಾರಕ್ಕೊಮ್ಮೆ ಬಾಲವಿಕಾಸ ವರ್ಗಗಳು, ತಿಂಗಳಿಗೊಮ್ಮೆ ನಗರ ಸಂಕೀರ್ತನೆ, ವರುಷಕ್ಕೆ 2 ಭಾರಿ ಬೆಂಗಳೂರಿನ ಸಾಯಿ ಸುಪರ ಆಸ್ಪತ್ರೆಯಲ್ಲಿ ಒಂದು ವಾರ ಸಮಿತಿ ಸದಸ್ಯರ ಸೇವೆ, ಬಡ ಕುಟುಂಬಗಳಿಗೆ, ಬಡ ವಿದ್ಯಾರ್ಥಿಗಳಿಗೆ ಹಾಗೂ ಬಡ ಅಂಗವಿಕಲರಿಗೆ ಸಹಾಯ ಸೇರಿದಂತೆ ರಚನಾತ್ಮಾಕ ಕಾರ್ಯಗಳು ಅವ್ಯಾಹಿತವಾಗಿ ಜರುಗುತ್ತಿವೆ. ಗೋಕಾಕ ತಾಲೂಕಿನ ಹಣಮಾಪೂರ ಪುಟ್ಟ ಗ್ರಾಮವನ್ನು ದತ್ತು ತೆಗೆದುಕೊಳ್ಳುವದರ ಜೊತೆಗೆ ಅಲ್ಲಿಯ ಸರಕಾರಿ ಪ್ರಾಥಮಿಕ ಶಾಲೆಯನ್ನು “ವಿದ್ಯಾ ಜ್ಯೋತಿ” ಯೋಜನೆಯಡಿ ಈ ಸೇವಾ ಸಮಿತಿಯು ಪ್ರತಿ ವರ್ಷ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಶಿಕ್ಷಣದ ಜೋತೆಗೆ ವಿವಿಧ ಸೇವೆ ಸಲ್ಲಿಸಲು ಅಣಿಯಾಗಿದೆ.
ಸುವರ್ಣ ಮಹೋತ್ಸವ ಕಾರ್ಯಕ್ರಮ : ಇದೇ ಅಕ್ಟೋಬರ 21 ರಂದು ಕಲ್ಲೋಳಿ ಪಟ್ಟಣದಲ್ಲಿ ಬಾಬಾ ಪಾದಸ್ಪರ್ಶ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಅಂದು ಭಗವಾನ ಬಾಬಾ ಅವರು ಪಟ್ಟಣದಲ್ಲಿ ಪಾದ ಸ್ಪರ್ಶ ಸ್ಥಳದಿಂದ ಸಾಯಿ ಭಜನೆ, ಸುಮಂಗಲೆಯರಿಂದ ಕುಂಭ ಮೇಳ, ಯುವಕರ ವೇದ ಘೋಷದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮರಳಿ ಪ್ರಶಾಂತ ಕುಟೀರದ ತನಕ ಜರುಗಲಿದೆ.
ಬೆಳಗಾವಿ ಜಿಲ್ಲಾ ಶ್ರೀ ಸತ್ಯ ಸಾಯಿ ಬಾಬಾ ಸಮಿತಿ ಅಧ್ಯಕ್ಷ ವಸಂತ ಬಾಳಿಗಾ ಅಧ್ಯಕ್ಷತೆ, ದಾವಣಗೇರಿ ಖ್ಯಾತ ಭಾಷಣಕಾರ ಜಗನ್ನಾಥ ನಾಡಿಗೇರ ಅವರು ಮುಖ್ಯ ಅತಿಥಿಗಳಾಗಿಉಪನ್ಯಾಸ ನೀಡಲಿದ್ದಾರೆ. ಬೆಳಗಾವಿ ಜಿಲ್ಲಾ ಶ್ರೀ ಸತ್ಯ ಸಾಯಿ ಬಾಬಾ ಸಮಿತಿ ಹಿರಿಯ ಮಾರ್ಗದರ್ಶಕ ಎಚ್.ಎಮ್.ನಾಯಿಕ ಅತಿಥಿಗಳಾಗಿ ಆಗಮಿಸಲಿದ್ದು, ಕಾರ್ಯಕ್ರಮದ ಪೂರ್ವದಲ್ಲಿ 50 ಸೇವಾ ಕಾರ್ಯಕ್ರಮಗಳು, ಕೆಲವು ಬಡ ಕುಟುಂಬಕ್ಕೆ ರೇಶನ್, ಕೆಲವು ಬಡ ವಿದ್ಯಾರ್ಥಿಗಳಿಗೆ ಶಾಲಾ ಉಪಕರಣಗಳ ವಿತರಣೆ ಕಾರ್ಯಕ್ರಮ ಜರುಗಲಿದೆ. 50 ಜನ ಬಡ ರೋಗಿಗಳಿಗೆ ಖ್ಯಾತ ಸ್ಕ್ಯಾನಿಂಗ ತಜ್ಞ ವೈದ್ಯ ಶೆಟ್ಟೆಪ್ಪ ಗೋರೋಶಿ ಉಚಿತ ಸೇವೆ ನೆರವೇರಿಸಲಿದ್ದಾರೆ. ಅಲ್ಲದೇ ಸತ್ಯ ಸಾಯಿ ಬಾಬಾರ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮಗಳು ಜರುಗಲಿವೆ ಎಂದು ಇಲ್ಲಿಯ ಶ್ರೀ ಸತ್ಯ ಸಾಯಿ ಸಮಿತಿ ಸಂಚಾಲಕ ಸಿ.ಪಿ.ಪಟ್ಟಣಶೆಟ್ಟಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸುರೇಶ ಕಬ್ಬೂರ ಪ್ರಕಟನೆಗೆ ತಿಳಿಸಿದ್ದಾರೆ.