RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು: ಶಾಸಕ ಬಾಲಚಂದ್ರ

ಗೋಕಾಕ:ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು: ಶಾಸಕ ಬಾಲಚಂದ್ರ 

ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು: ಶಾಸಕ ಬಾಲಚಂದ್ರ
ಗೋಕಾಕ ಅ 22 : ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಭರವಸೆಯಿತ್ತರು.
ತಾಲೂಕಿನ ಗೋಸಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಜರುಗಿದ 2.53 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿತ್ವದಲ್ಲಿರುವದರಿಂದ ಅಭಿವೃದ್ಧಿ ಕಾರ್ಯಗಳು ಆಮೆಗತಿಯಲ್ಲಿ ಸಾಗುತ್ತಿವೆ. ರೈತರ ಸಾಲ ಮನ್ನಾ ಮಾಡಿರುವುದರಿಂದ ಗುತ್ತಿಗೆದಾರರಿಗೆ ಬಾಕಿ ಬಿಲ್ ಸಂದಾಯ ಮಾಡಲಿಕ್ಕೂ ಸರ್ಕಾರದ ಬಳಿ ಹಣವಿಲ್ಲ. ಹೇಗಾದರೂ ಮಾಡಿ ಸಾರ್ವಜನಿಕರ ಸಂಚಾರಕ್ಕಾಗಿ ಬೆಟಗೇರಿ-ಕೌಜಲಗಿ ರಸ್ತೆಯನ್ನು ಆದಷ್ಟು ಬೇಗನೆ ಸುಧಾರಣೆ ಮಾಡುವುದಾಗಿ ಹೇಳಿದರು.
ಗೋಸಬಾಳ ಬಳಿ 110 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಮಂಜೂರಾಗಿದ್ದು, ಇನ್ನೆರಡು ತಿಂಗಳಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು. ಗೋಸಬಾಳದಲ್ಲಿ ವಿದ್ಯುತ್ ಘಟಕ ಆರಂಭಿಸಿರುವುದರಿಂದ ಈ ಭಾಗದಲ್ಲಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗಲಿದೆ ಎಂದು ಹೇಳಿದರು.
ಗ್ರಾಮಸ್ಥರು ನೀಡಿರುವ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ ಅವರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ಪ್ರೌಢ ಶಾಲೆಯನ್ನು ಆರಂಭಿಸಲಿಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ತೋಟದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದರಿಂದ ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಪೂರೈಕೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಅಭಿವೃದ್ಧಿಯೇ ನನ್ನ ಧ್ಯೇಯ : ಇದುವರೆಗೂ ತಮ್ಮ ರಾಜಕೀಯ ಜೀವನದಲ್ಲಿ ಯಾರ ವಿರೋಧವನ್ನು ಕಟ್ಟಿಕೊಂಡಿಲ್ಲ. ಒಳ್ಳೆಯದನ್ನೇ ಮಾಡಿದ್ದೇನೆ. ಹಿಂದೆಂದೂ ಯಾರೂ ಮಾಡಿರದ ಅಭಿವೃದ್ಧಿ ಕಾರ್ಯಗಳನ್ನು ನನ್ನ ಅವಧಿಯಲ್ಲಿ ಕೈಗೊಂಡು ಕ್ಷೇತ್ರದ ಸರ್ವತೋಮುಖ ಏಳ್ಗೆಗೆ ಶ್ರಮಿಸಿದ್ದೇನೆ. ಬೆರಳೆಣಿಕೆಯಷ್ಟು ಮಾತ್ರ ಜನರು ನನ್ನ ಏಳ್ಗೆ ಸಹಿಸುತ್ತಿಲ್ಲ. ಹೀಗಾಗಿ ಸಣ್ಣಪುಟ್ಟ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಅವುಗಳಿಗೆ ಕಿವಿಗೊಡಬೇಡಿ. ಜನರ ಅಹವಾಲುಗಳಿಗೆ ದಿನನಿತ್ಯ ಸ್ಪಂದಿಸುತ್ತಿರುವುದರಿಂದಲೇ ಜನರ ಆಶೀರ್ವಾದದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಅರಭಾವಿ ಕ್ಷೇತ್ರದ ಮತದಾರರ ಋಣ ನನ್ನ ಮೇಲಿದೆ. ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಗೋಸಬಾಳ, ಬಿಲಕುಂದಿ ಹಾಗೂ ಬಗರನಾಳ ಗ್ರಾಮಸ್ಥರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತಿದ್ದೇನೆ. ಸಿಎಂ ಗ್ರಾಮವಿಕಾಸ ಯೋಜನೆಗೆ ಕೋಟಿ ರೂ. ಅನುದಾನ ಬಂದಿದೆ. ಒಟ್ಟು 2.53 ರೂ.ಗಳಷ್ಟು ವಿವಿಧ ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದೇನೆಂದು ತಿಳಿಸಿದರು.
ಒಳ್ಳೆಯ ವ್ಯಕ್ತಿಯನ್ನು ಆರಿಸಿ : ಗ್ರಾಮದ ಸುಧಾರಣೆಗಾಗಿ ಗ್ರಾಮ ಪಂಚಾಯತಿಗೆ ನಡೆಯುವ ಚುನಾವಣೆಯಲ್ಲಿ ಒಳ್ಳೆಯ ವ್ಯಕ್ತಿಗಳನ್ನು ಆಯ್ಕೆ ಮಾಡಿದರೆ ಸಮಸ್ಯೆಗಳು ಪರಿಹಾರವಾಗುತ್ತವೆ. ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ವ್ಯಕ್ತಿಗಳನ್ನು ಬೆಂಬಲಿಸಬೇಕೆಂದು ಅವರು ಕೋರಿದರು.
ಅಡಿಗಲ್ಲು : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೋಟಿ ರೂ. ವೆಚ್ಚದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ, 50 ಲಕ್ಷ ರೂ. ವೆಚ್ಚದ ಗೋಸಬಾಳದ ಮಾರುತಿ ದೇವಸ್ಥಾನದ ಯಾತ್ರಿ ನಿವಾಸ, 25 ಲಕ್ಷ ರೂ.ವೆಚ್ಚದ ಗೋಸಬಾಳದ ಬೀರಸಿದ್ಧೇಶ್ವರ ದೇವಸ್ಥಾನದ ಸಮುದಾಯ ಭವನ, 25 ಲಕ್ಷ ರೂ. ವೆಚ್ಚದ ಬಿಲಕುಂದಿ ಗ್ರಾಮದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನ, 15 ಲಕ್ಷ ರೂ. ವೆಚ್ಚದ ಗೋಸಬಾಳದಿಂದ ಬಗರನಾಳವರೆಗಿನ ರಸ್ತೆ ಕಾಮಗಾರಿ, 12 ಲಕ್ಷ ರೂ. ವೆಚ್ಚದ ಬಗರನಾಳ ಗ್ರಾಮದ ಎಸ್.ಸಿ ಕಾಲನಿಯಲ್ಲಿ ಡಾ.ಬಾಬು ಜಗಜೀವನರಾಮ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಉದ್ಘಾಟನೆ : 15 ಲಕ್ಷ ರೂ. ವೆಚ್ಚದ ಬಗರನಾಳ ಗ್ರಾಮದ ದುರ್ಗಾದೇವಿ ದೇವಸ್ಥಾನದ ಸಮುದಾಯ ಭವನ, 3 ಲಕ್ಷ ರೂ. ವೆಚ್ಚದ ಬಗರನಾಳದ ಲಕ್ಷ್ಮೀದೇವಿ ದೇವಸ್ಥಾನದ ಸಮುದಾಯ ಭವನ, 8 ಲಕ್ಷ ರೂ. ವೆಚ್ಚದ ಬಿಲಕುಂದಿಯ ಸವದತ್ತಿ ತೋಟದ ಹತ್ತಿರ ಅಂಗನವಾಡಿ ಕಟ್ಟಡ, ಹಾಗೂ ಗೋಸಬಾಳದಲ್ಲಿ ನೂತನವಾಗಿ ನಿರ್ಮಿಸಿದ ಶೌಚಾಲಯಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು.
ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಗೋಸಬಾಳ ಗ್ರಾಪಂ ಅಧ್ಯಕ್ಷ ಶಿವಲಿಂಗ ಬಳಿಗಾರ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಕೆಲಸಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸ್ವಂತ ಹಣದಲ್ಲಿ ಮಾಡಿಕೊಟ್ಟು ಜನಸೇವೆ ಮಾಡುತ್ತಿರುವುದು ಪ್ರಶಂಸನೀಯ. ಇಂತಹ ಶಾಸಕರು ನಮಗೆ ಸಿಕ್ಕಿರುವುದು ಸೌಭಾಗ್ಯವೆಂದರು.
ಅತಿಥಿಗಳಾಗಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ತಾಪಂ ಸದಸ್ಯೆ ನೀಲವ್ವ ಬಳಿಗಾರ, ಜಿಪಂ ಮಾಜಿ ಸದಸ್ಯ ವಿಠ್ಠಲ ಸವದತ್ತಿ, ಗ್ರಾಪಂ ಮಾಜಿ ಅಧ್ಯಕ್ಷ ರಾಮಯ್ಯಾ ಮಠದ, ಸತ್ತೆಪ್ಪ ಹೊಸಟ್ಟಿ, ಗೌಡಪ್ಪ ಪಾಟೀಲ, ಗೋಸಬಾಳ ಗ್ರಾಪಂ ಸದಸ್ಯರಾದ ಬಾಳಪ್ಪ ಬುಳ್ಳಿ, ರಮೇಶ ದಳವಾಯಿ, ಭೀಮವ್ವ ಬುಳ್ಳಿ, ಜಯಶ್ರೀ ಹೊಸಟ್ಟಿ, ಅಶೋಕ ಬಂಡಿವಡ್ಡರ, ಬಸನಗೌಡ ಪಾಟೀಲ, ಸುಭಾಸ ಹಾವಾಡಿ, ಕಾಳವ್ವ ಶಿವಾಪೂರ, ರೇಣುಕಾ ಹರಿಜನ, ಬಸಪ್ಪ ಕಪರಟ್ಟಿ, ವಿಠ್ಠಲ ಜೋತಿನವರ, ಸಾಂವಕ್ಕ ಕಳ್ಳಿಗುದ್ದಿ, ನಾಗವ್ವ ಹಂಚಿನಮನಿ, ಸಕ್ಕುಬಾಯಿ ಸವದತ್ತಿ, ಶಾಂತವ್ವ ಇಟ್ನಾಳ, ಸಿಡಿಪಿಓ ವಾಯ್.ಎಂ. ಗುಜನಟ್ಟಿ, ಪಿಡಿಓ ಯಲ್ಲಪ್ಪ ಹೊಸಮನಿ, ಉಪಸ್ಥಿತರಿದ್ದರು.
ಯಾತ್ರಿ ನಿವಾಸಕ್ಕೆ ಭೂದಾನ ಮಾಡಿದ ಪಾಟೀಲ(ಗೌಡರ) ಕುಟುಂಬದವರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಸತ್ಕರಿಸಿದರು.

Related posts: