RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಗೋಕಾವಿ ನಾಡು ಜನಪದ ಸಾಹಿತ್ಯದ ತಾಯ್ನೆಲ : ಡಾ. ಸಿ. ಕೆ. ನಾವಲಗಿ

ಗೋಕಾಕ:ಗೋಕಾವಿ ನಾಡು ಜನಪದ ಸಾಹಿತ್ಯದ ತಾಯ್ನೆಲ : ಡಾ. ಸಿ. ಕೆ. ನಾವಲಗಿ 

ಗೋಕಾವಿ ನಾಡು ಜನಪದ ಸಾಹಿತ್ಯದ ತಾಯ್ನೆಲ : ಡಾ. ಸಿ. ಕೆ. ನಾವಲಗಿ

ಗೋಕಾಕ ಅ 24 : ಜನಪದ ಸಾಹಿತ್ಯವು ಬೆಳಗಾವಿ ಜಿಲ್ಲೆಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಉತ್ತರ ಕರ್ನಾಟಕದಲ್ಲಿ ಜನಪದ ಸಾಹಿತ್ಯವನ್ನು ಸಮರ್ಥವಾಗಿ ದುಡಿಸಿಕೊಂಡ ಏಕೈಕ ಕವಿ ಬೆಟಗೇರಿ ಕೃಷ್ಣಶರ್ಮರು. ಸಂಗ್ಯಾ-ಬಾಳ್ಯಾ ನಾಟಕವನ್ನು ಗೋಕಾಕದ ಜಾನಪದ ಇಡೀ ರಾಜ್ಯಕ್ಕೆ ಪರಿಚಯಿಸಿದ ಕೀರ್ತಿ ಚಂದ್ರಶೇಖರ ಕಂಬಾರ ಅವರಿಗೆ ಸಲ್ಲುತ್ತದೆ. ದೇಶಿ ಸಂಸ್ಕøತಿ ಅಳಿವು–ಉಳಿವಿನ ಅಂಚಿನಲ್ಲಿದೆ. ಅದನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಗೋಕಾಕದ ಜನಪದ ಸಂಶೋಧಕ ಡಾ. ಸಿ. ಕೆ. ನಾವಲಗಿ ನುಡಿದರು.
ಕಲ್ಲೋಳಿಯ ಎಸ್.ಆರ್.ಇ.ಎಸ್. ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ, ಬೆಳಗಾವಿ ಇದರ ಸಹಯೋಗದಲ್ಲಿ ಸೋಮವಾರ ದಿ. 22/10/2018 ಹಮ್ಮಿಕೊಂಡಿದ್ದ ಜಾನಪದ ಸಾಹಿತ್ಯ ಸೊಗಡು ಕಾರ್ಯಕ್ರಮವನ್ನು ಬೀಸುವ ಕಲ್ಲನ್ನು ಬೀಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಬೀಸುವ ಹಳೆಯ ಪದ್ಧತಿ ಹೋಗಿದೆ, ಆದರೆ ಆ ಸಂದರ್ಭದ ಹಾಡುಗಳನ್ನು ಹಾಡುವವರಿದ್ದಾರೆ, ಕೇಳುವವರಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.


ಪಾರಿಜಾತ ಪರಂಪರೆಗೆ ಭವ್ಯ ಇತಿಹಾಸವಿದೆ, ಅದಕ್ಕೆ ರಾಷ್ಟ್ರೀಯ ಮಾನ್ಯತೆ ದೊರೆಯುವ ಅವಶ್ಯಕತೆಯಿದೆ ಎಂದು ಹಿರಿಯ ಪಾರಿಜಾತ ಕಲಾವಿದ ಹಾಗೂ ಸಂಸ್ಥೆಯ ನಿರ್ದೇಶಕರಾದ ಶ್ರೀ ಬಿ.ಎಸ್. ಕಡಾಡಿ ಅವರು ತಮ್ಮ ನಿಲುವು ವ್ಯಕ್ತಪಡಿಸಿದರು”.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರಮನ್ನರಾದ ಶ್ರೀ ಬಸಗೌಡ ಪಾಟೀಲರು ಜನಪದ ಪರಂಪರೆಯನ್ನು ಮುಂದಿನ ಪಿಳಿಗೆಗೆ ಉಳಿಸಿಕೊಂಡು ಹೋಗಬೇಕು ಎಂದರು.
ಕಾರ್ಯಕ್ರಮದ ಉದ್ದೇಶ, ಅದರ ಸ್ವರೂಪ ಮತ್ತು ಪಠ್ಯದ ಚಟುವಟಿಕೆಯ ಭಾಗವಾಗಿರುವ ಜನಪದ ಸಾಹಿತ್ಯದ ಅರಿವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ದೊರೆಯಬೇಕು ಎಂದು ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸೋಬಾನೆ ಪದಗಳನ್ನು ಶ್ರೀಮತಿ ಲಕ್ಕವ್ವ ಮರಗನ್ನವರ ಹಾಗೂ ಸಂಗಡಿಗರು, ಗರತಿಯ ಹಾಡುಗಳನ್ನು ಪ್ರೊ. ಅಶೋಕ ಕಾಂಬಳೆ, ಲಾವಣಿಯನ್ನು ಕಾಡಪ್ಪ ಕರಗಾಂವಿ, ರಿವಾಯತ ಭೀಮಶಿ ಪಾಲ್ಕಿ, ಚೌಡಕಿ ಪದಗಳನ್ನು ಶ್ರೀಮತಿ ಕೆಂಪವ್ವ ಸೊಂಟನವರ ಹಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಜನಪದದ ರಸದೌತನ ನೀಡಿದರು. ಶ್ರೀಕೃಷ್ಣ ಪಾರಿಜಾತ ನಾಟಕದ ಕೊರವಂಜಿ ಸನ್ನಿವೇಶಗಳನ್ನು ಈಶ್ವರಚಂದ್ರ ಬೇಟಗೇರಿ ತಮ್ಮ ಕಲಾಭಿನಯದ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಬಿ.ಎಸ್.ಗೋರೋಶಿ, ಶ್ರೀ ಎಸ್. ಬಿ. ಜಗದಾಳಿ, ಶ್ರೀ ಸಾತಪ್ಪ ಖಾನಾಪೂರ, ಶ್ರೀ ಮಲ್ಲಪ್ಪ ಕುರಬೇಟ ಮುಂತಾದವರು ಪಾಲ್ಗೊಂಡಿದ್ದರು. ಸುಧಾ ಕಮತ ಪ್ರಾರ್ಥಿಸಿದರು. ಪ್ರೊ. ಶಂಕರ ನಿಂಗನೂರ ಸ್ವಾಗತಿಸಿದರು, ಪ್ರೊ. ಕೆ. ಎಸ್. ಪರವ್ವಗೋಳ ನಿರೂಪಿಸಿದರು, ಪ್ರೊ. ಎಂ. ಬಿ. ಕುಲಮೂರ ವಂದಿಸಿದರು.

 

Related posts: