RNI NO. KARKAN/2006/27779|Friday, March 28, 2025
You are here: Home » breaking news » ಗೋಕಾಕ:ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ ಡಾ.ಬೆಟಗೇರಿ ಕೃಷ್ಣಶರ್ಮ

ಗೋಕಾಕ:ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ ಡಾ.ಬೆಟಗೇರಿ ಕೃಷ್ಣಶರ್ಮ 

ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ ಡಾ.ಬೆಟಗೇರಿ ಕೃಷ್ಣಶರ್ಮ

“ ಆನಂದಕಂದರ ಹುಟ್ಟೂರೂ ಬೆಟಗೇರಿ ಸೇರಿದಂತೆ ಬೆಳಗಾವಿ ಜಿಲ್ಲೆ ಹಾಗೂ ನಾಡಿನ ಹಲವಡೆ ಡಾ.ಬೆಟಗೇರಿ ಕೃಷ್ಣಶರ್ಮರ 37ನೇ ಪುಣ್ಯ ತಿಥಿಯ ಪ್ರಯುಕ್ತ ದಿವ್ಯ ಸ್ಮರಣೆ ಕಾರ್ಯಕ್ರಮ ಇದೇ ಮಂಗಳವಾರ ಅ.30 ರಂದು ನಡೆಯಲಿದ್ದು ತನ್ನನಿಮಿತ್ಯ ಈ ಲೇಖನ.

* ಆನಂದಕಂದರು ಅಪ್ಪಟ್ಟ ದೇಶಿ ಕವಿ * ಪ್ರಶಸ್ತಿ-ಪುರಸ್ಕಾರ ಪಡೆಯಲು ಹಂಬಲಿಸಿದವರಲ್ಲ.

*ಅಡಿವೇಶ ಮುಧೋಳ.

ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಡಾ.ಬೆಟಗೇರಿ ಕೃಷ್ಣಶರ್ಮರು ಆನಂದ ಕಂದ ಕಾವ್ಯನಾಮದಿಂದ ಕನ್ನಡ ನಾಡಿಗೆ ಚಿರಪರಿಚಿತರು. ಕೃಷ್ಣಶರ್ಮರು ಪತ್ರಕರ್ತರಾಗಿ, ಕವಿಯಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ನಾಟಕಕಾರರಾಗಿ, ಸಂಶೋಧಕರಾಗಿ ಜನಪದ ಸಾಹಿತ್ಯ ತಜ್ಞರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.
ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿಯಲ್ಲಿ ಪಾಟೀಲ ಮನೆತನದ ರಾಧಾಬಾಯಿ, ಶ್ರೀನಿವಾಸರಾವ್ ಇವರ ಪುತ್ರರಾದ ಕೃಷ್ಣಶರ್ಮರು 1900 ಏಪ್ರೀಲ್ 16 ರಂದು ಜನಿಸಿದರು. ಬಾಲ್ಯವನ್ನು ಹಳ್ಳಿಯಲ್ಲಿ ಕಳೆದ ಆನಂದಕಂದರು ಊರಿನಲ್ಲಿ ನಡೆಯುತ್ತಿದ್ದ ಜಾತ್ರೆ, ಸಮಾರಂಭ, ಪೂಜೆ-ಪುನಸ್ಕಾರ, ಹಬ್ಬ-ಹರಿದಿನಗಳಲ್ಲಿ ಜರುಗುತ್ತಿದ್ದ ಹಾಡು, ಕೀರ್ತನೆ, ಕೋಲಾಟ, ಬಯಲಾಟ, ಲಾವಣಿ ಪದಗಳು ಅವರ ಮೇಲೆ ಪರಿಣಾಮ ಬೀರಿದವು. ಇವೇ ಆನಂದಕಂದರ ಬರವಣಿಗೆಗೆ ಸ್ಪೂರ್ತಿ ನೀಡಿದವು.
ಕೃಷ್ಣಶರ್ಮರು ಕಲಿತದ್ದು ಕೇವಲ ಏಳನೇ ತರಗತಿ..! ಅವರು ಯಾವ ವಿಶ್ವವಿದ್ಯಾಲಯದಿಂದಲೂ ಪದವಿ ಗಳಿಸದೇ ಇದ್ದರೂ ಕಾವ್ಯನಂದ (ನರಸಿಂಹಾಚಾರ್ಯ ಪುಣೇಕರ) ರಿಂದ ಕಲಿತ ಸಂಸ್ಕøತ ಪಾಠ, ಹಳೆಗನ್ನಡ ಸಾಹಿತ್ಯಾಭ್ಯಾಸ ಇವರ ಪ್ರತಿಭೆ ಉಜ್ವಲಗೊಳಿಸಲು ಪ್ರೇರಕವಾದವು. ಕನ್ನಡ, ಮರಾಠಿ ಎರಡೂ ಸಾಹಿತ್ಯಗಳಲ್ಲಿ ಜನಪ್ರೀಯರಾಗಿರುವ ಆನಂದಕಂದರು ಅಪ್ಪಟ್ಟ ದೇಶಿ ಕವಿ. ಅವರ ಬದುಕಿನುದ್ದಕ್ಕೂ ದುಃಖ, ದುಮ್ಮಾನ, ಕಷ್ಟ, ಬಡತನ ಏನೇ ಇದ್ದರೂ ಅಳುಕದೆ ನೋವು ನುಂಗಿ, ಧೀಮಂತ ಬದುಕು ನಡೆಸಿ, ಶ್ರೀಮಂತ ಸಾಹಿತ್ಯ ರಚಿಸಿ, ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ ದಿವ್ಯ ಚೇತನ.
ಆನಂದಕಂದರು ನಲ್ವಾಡಗಳು ಎಂಬ ಕವನ ಸಂಕಲನದ ಮೂಲಕ ಉತ್ತರ ಕರ್ನಾಟಕದ ಬಯಲು ನಾಡಿನ ಹಳ್ಳಿಯ ಜನರ ನಡೆ-ನುಡಿ, ಪ್ರೀತಿ ಗೀತೆಗಳನ್ನು ಜಾನಪದ ದಾಟಿಯಲ್ಲಿ ರಚಿಸಿದರು. ಜಯಂತಿ, ಜಯ ಕರ್ನಾಟಕ, ಮಾತೃ ಭೂಮಿ, ಸ್ವಧರ್ಮ ಹೀಗೆ ಪತ್ರಿಕೆಗಳ ಮೂಲಕ ಪತ್ರಕೋದ್ಯಮದಲ್ಲಿ ಸಂಪಾದಕರಾಗಿ, ಸಹ ಸಂಪಾದಕರಾಗಿ, ಪತ್ರಕರ್ತನಾಗಿ, ಒಂಟಿ ಸಲಗದಂತೆ ಕಾರ್ಯ ನಿರ್ವಹಿಸಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ.
ಆನಂದಕಂದರಿಂದಲೇ ಉತ್ತರ ಕರ್ನಾಟಕದಲ್ಲಿ ಸ್ವತಂತ್ರ ಹಾಗೂ ಸಾಮಾಜಿಕ ಕಾದಂಬರಿಗಳ ಯುಗ ಆರಂಭವಾಯಿತು. ಮಗಳ ಮದುವೆ, ಸುದರ್ಶನ ಎಂಬ ಎರಡು ಕಾದಂಬರಿಗಳು ಕೌಟುಂಬಿಕ ಹಿನ್ನಲೆಯಲ್ಲಿ ಕುತೂಹಲಕಾರಿ ಸನ್ನವೇಶ ಅಳವಡಿಸಿ ರಚಿಸಿದ್ದಾರೆ. ರಾಜಯೋಗಿ, ಮಲ್ಲಿಕಾರ್ಜುನ, ಅಶಾಂತಿ ಪರ್ವ ಕಾದಂಬರಿಗಳು ವಿಜಯನಗರ ಸಾಮ್ರಾಜ್ಯದ ಇತಿಹಾಸದ ಹಿನ್ನಲೆಯಲ್ಲಿ ರಚಿಸಿ ಈ ನಾಡಿನ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಕಳ್ಳರ ಗುರು, ಬಡತನದ ಬಾಳು, ಮಾತನಾಡುವ ಕಲ್ಲು ಹೀಗೆ ಏಳು ಕಥಾ ಸಂಕಲನಗಳನ್ನು ರಚಿಸಿದ್ದಾರೆ. ಕೆರೆಗೆ ಹಾರ ಎಂಬ ಸುಪ್ರಸಿದ್ದ ಕಥನ ಗೀತವನ್ನು ಮೊದಲು ಸಂಗ್ರಹಿಸಿಕೊಟ್ಟ ಕೀರ್ತಿ ಆನಂದಕಂದರಿಗೆ ಸಲ್ಲುತ್ತದೆ. ಹಾಗೂ ಬೀಸುವ ಕಲ್ಲಿನ ಹಾಡುಗಳನ್ನು ಸಹ ಸಂಗ್ರಹಿಸಿಕೊಟ್ಟ ಬೆಳಗಾವಿ ಜಿಲ್ಲೆಯ ಪ್ರಥಮ ವ್ಯಕ್ತಿ ಇವರು. 13 ಕವನ ಸಂಕಲನ. 7 ಸಣ್ಣ ಕಥೆಗಳು, 5 ಸಾಮಾಜಿಕ ಐತಿಹಾಸಿಕ ಕಾದಂಬರಿಗಳು, ನಾಲ್ಕು ತರಂಗ ರೂಪಕಗಳು, ಪುರಂದರ ದಾಸರ ಸಮಗ್ರ ಸಾಹಿತ್ಯದ ಆರು ಸಂಪುಟ ಕೃತಿ, ನಾಲ್ಕು ವಿಮರ್ಶೆ, ಸಂಶೋಧನೆ, ಸಂಸ್ಕøತಿ ಕುರಿತು ಸಂಕಲನ, ಮಕ್ಕಳ ಸಾಹಿತ್ಯ, ಪತ್ರಿಕಾ ಸಂಪಾದನೆ, ಜನಪದ ಸಾಹಿತ್ಯಗಳ ಮೌಲಿಕ ಕೃತಿಗಳನ್ನು ಆನಂದಕಂದರು ರಚಿಸಿದ್ಧಾರೆ.
ಇಷ್ಟೆಲ್ಲ ಸಾಹಿತ್ಯ ರಚಿಸಿದ ಡಾ.ಬೆಟಗೇರಿ ಕೃಷ್ಣಶರ್ಮ ಅವರಿಗೆ ಯಾವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ದೊರೆಯಲಿಲ್ಲ ಎಂಬುದು ವಿಷಾದದ ಸಂಗತಿ. ಯಾವುದೇ ಸರಕಾರಿ ಪ್ರಶಸ್ತಿ, ಪುರಸ್ಕಾರಗಳು ಈ ಬೆಳುವಲದ ಬರಗಾರನತ್ತ ಸುಳಿಯಲಿಲ್ಲ. ಆನಂದಕಂದರು ಪ್ರಶಸ್ತಿ-ಪುರಸ್ಕಾರ ಪಡೆಯಲು ಯಾವತ್ತೂ ಹಂಬಲಿಸಿದವರಲ್ಲ. ಇವರು ಪ್ರಚಾರಪ್ರಿಯ ವ್ಯಕ್ತಿಯಾಗಿರಲಿಲ್ಲ. ಕಣ್ಣೊರೆಸುವ ತಂತ್ರವಾಗಿ ಧಾರವಾಡದ ಕವಿವಿ 1974 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮುಂಬಯಿ ಸರಕಾರದ ಪಾರಿತೋಷಕ ಪ್ರಶಸ್ತಿ, ಕಸಾಪ ಗೌರವ ಸನ್ಮಾನ ಆನಂದಕಂದರಿಗೆ ಲಭಿಸಿದ ಪ್ರಶಸ್ತಿಗಳು. ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ವಿವಿಧ ಗೋಷ್ಠಿಯ ಅಧ್ಯಕ್ಷರಾಗಿ, ಜನಪದ ಸಾಹಿತ್ಯ ಸಮ್ಮೇಳನಗಳಲ್ಲಿಯೂ ಸಹ ಅಧ್ಯಕ್ಷರಾಗಿದ್ದ ಅವರು ಜನಪದ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ. ಆನಂದಕಂದರು 1982 ರ ಅಕ್ಟೋಬರ್ 30 ರಂದು ಮರಣ ಹೊಂದಿದರು. ಅವರು ನಮ್ಮೊಂದಿಗಿರದಿದ್ದರು ಅವರ ಸಾಹಿತ್ಯದ ಕಂಪು ನಮ್ಮ ಮುಂದಿದೆ. ಈ ಕವಿಯ ಜನ್ಮದಿನದ ಸಂದಂರ್ಭದಲ್ಲಿ ನಾಡಿನ ಜನ ಒಂದಿಷ್ಟು ಅವರ ದಿವ್ಯ ಸ್ಮರಣೆ ಮಾಡಬೇಕಿದೆ.

“ಡಾ.ಬೆಟಗೇರಿ ಕೃಷ್ಣಶರ್ಮರು ಪತ್ರಕರ್ತ, ಕವಿ, ಕಥೆಗಾರ, ಕಾದಂಬರಿಕಾರ, ನಾಟಕಕಾರ, ಸಂಶೋಧಕ, ಜನಪದ ಸಾಹಿತ್ಯ ತಜ್ಞರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿ, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. *ಈಶ್ವರಚಂದ್ರ ಬೆಟಗೇರಿ,

.

Related posts: