RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಭಾರತದಲ್ಲಿನ ಗುರು-ಶಿಷ್ಯರ ಬಾಂದವ್ಯವು ವಿಶ್ವಕ್ಕೇ ಮಾದರಿಯಾಗಿದೆ : ಶ್ರೀಮತಿ ಕಮಲಾ ಸನದಿ

ಗೋಕಾಕ:ಭಾರತದಲ್ಲಿನ ಗುರು-ಶಿಷ್ಯರ ಬಾಂದವ್ಯವು ವಿಶ್ವಕ್ಕೇ ಮಾದರಿಯಾಗಿದೆ : ಶ್ರೀಮತಿ ಕಮಲಾ ಸನದಿ 

ಭಾರತದಲ್ಲಿನ ಗುರು-ಶಿಷ್ಯರ ಬಾಂದವ್ಯವು ವಿಶ್ವಕ್ಕೇ ಮಾದರಿಯಾಗಿದೆ : ಶ್ರೀಮತಿ ಕಮಲಾ ಸನದಿ

ಗೋಕಾಕ ಅ 30 : ಇಂದಿನ ಆಧುನಿಕ ಜೀವನ ಶೈಲಿಯ ದಿನಗಳಲ್ಲಿಯೂ ವಿದ್ಯಾರ್ಥಿಗಳು ಶಿಕ್ಷಕರನ್ನು ಸ್ಮರಿಸುವಲ್ಲಿ ತೋರುತ್ತಿರುವ ಉತ್ಸಾಹ, ಭಾರತದ ಗುರುಕುಲ ಪರಂಪರೆಯನ್ನು ನೆನಪಿಸುತ್ತಿದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಶ್ರೀಮತಿ ಕಮಲಾ ಸನದಿ ಹೇಳಿದರು.
ನಗರದ ಡಾಲರ್ಸ ಕಾಲನಿಯ ಗಾರ್ಡನದಲ್ಲಿ ಜರುಗಿದ ಸರ್ಕಾರಿ ಹೊಸ ಮಾಧ್ಯಮಿಕ ಶಾಲೆಯ 1996-97 ನೇ ಸಾಲಿನ 10 ನೇ ತರಗತಿ ಬ ವರ್ಗದ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭಾರತದಲ್ಲಿನ ಗುರು-ಶಿಷ್ಯರ ಬಾಂದವ್ಯವು ವಿಶ್ವಕ್ಕೇ ಮಾದರಿಯಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ದಿನಗಳಲ್ಲಿನ ಸವಿನೆನಪುಗಳನ್ನು ಮೆಲಕು ಹಾಕುತ್ತ ವಿದ್ಯೆಯನ್ನು ದಾರೆ ಎರೆದ ಗುರುವೃಂದವನ್ನು ಸ್ಮರಿಸುವುದರೊಂದಿಗೆ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದೀರಿ, ತಮ್ಮನ್ನು ತಾವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ದೇಶದ ಒಳಿತಿಗೆ ಸಮರ್ಪಿಸಿಕೊಳ್ಳುವುದರ ಮೂಲಕ ಅತ್ಯುನ್ನತ ನಾಗರೀಕತೆಯನ್ನು ಹೊಂದಬೇಕು. ಈ ಗುರುವಂದನಾ ಸಮಾರಂಭವು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ, ಎಲ್ಲರೂ ನಿಮ್ಮ-ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಿ ಸರ್ಕಾರಿ ಶಾಲೆಗಳನ್ನು ಬೆಳೆಸಬೇಕೆಂದು ಕಿವಿಮಾತು ಹೇಳಿದರು.
ನಿವೃತ್ತ ಶಿಕ್ಷಕ ಎ.ಕೆ.ಜಮಾದಾರ ಅವರು ಮಾತನಾಡಿ ಎಲ್ಲ ವಿದ್ಯಾರ್ಥಿಗಳು ದೇಶದ ಕಣ್ಮಣಿಗಳು, ಒಳ್ಳೆಯ ಸಮಾಜ ನಿರ್ಮಾಣ ಮಾಡುವಲ್ಲಿ ಮನೆ-ಮನುಜರನ್ನು ಒಗ್ಗೂಡಿಸಿಕೊಂಡು ಎಲ್ಲರಲ್ಲೂ ಪ್ರೀತಿ-ವಿಶ್ವಾಸ ಗಳಿಸುವುದರ ಮೂಲಕ ಸತ್ಪ್ರಜೆಗಳಾಗುವಂತೆ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಂ.ಪಿ. ಗಾಣಗಿ, ಎಂ.ಎ. ಕೋತವಾಲ, ಎಂ.ಎಂ. ಹಾದಿಮನಿ, ಎ.ಎ. ಬೆಣ್ಣಿ, ಸಿ.ಎಸ್. ಮೇಗಲಮನಿ, ಡಿ.ವಿ. ಕಾಂಬಳೆ, ಎಸ್.ಎನ್. ಪೂಜಾರಿ, ಎಚ್.ಡಿ. ಬೇಗ, ಎಂ.ಎ. ಬಾಗೇವಾಡಿ, ಬಿ.ಎಸ್. ಸೊಲಬನ್ನವರ, ಗುರುಮಾತೆಯರಾದ ಎಸ್.ಎಂ. ಕಲಗುಡಿ, ಎಂ.ಆರ್. ಹರಿದಾಸ, ಎಸ್.ಎಸ್. ಮುನವಳ್ಳಿ, ಡಿ.ಸಿ. ಜುಗಳಿ, ಎಸ್.ಪಿ. ಹಿರೇಮಠ, ಆರ್.ಕೆ. ಹಂದಿಗುಂದ, ಯು.ಕೆ. ವಿಭೂತಿ, ಸಿಬ್ಬಂದಿಯವರಾದ ಆರ್.ಎಲ್. ಬಬಲಿ, ಎಸ್.ಜಿ. ಆಲತಗಿ, ಎಚ್.ಎಂ. ಕಾಲೇಭಾಯಿ ಹಾಜರಿದ್ದು, ಸನ್ಮಾನ ಸ್ವೀಕರಿಸುವುದರ ಮೂಲಕ ಶಿಷ್ಯ ವೃಂದವನ್ನು ಆದರ್ಶ ವ್ಯಕ್ತಿಗಳಾಗುವಂತೆ ಹಾರೈಸಿದರು.
ರಾಯಭಾಗ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಶಿವಕುಮಾರ ತಮ್ಮಣ್ಣವರ, ಜೆ.ಜಿ.ಕೋ. ಕಾಲೇಜ್ ಉಪನ್ಯಾಸಕರಾದ ಪ್ರಕಾಶ ಹಿರೇಮಠ, ಶ್ರೀದೇವಿ ಶೆಟ್ಟಿ, ಇವರುಗಳು ಶಾಲಾ ದಿನಗಳಲ್ಲಿನ ಅನುಭವಗಳನ್ನು, ಶಿಕ್ಷಕರೊಂದಿಗಿನ ಒಡನಾಟವನ್ನು ಹಂಚಿಕೊಂಡರು.
ನಿವೃತ್ತ ಯೋಧರಾದ ವಿಠ್ಠಲ ಧರೆನ್ನವರ ಮತ್ತು ವಿಜಯ ಹನಿಮನಾಳ, ಕೃಷಿಕರಾದ ಸಲೀಮ ನದಾಫ ಇವರನ್ನು ಸನ್ಮಾನಿಸಿದ ಗುರುವೃಂದವು, ಅವರ ಕ್ರೀಡಾ ದಿನಗಳನ್ನು ಮತ್ತು ಸೇನಾ ಸೇವೆಯನ್ನು ಪ್ರಶಂಸಿಸಿದರು.
ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ವಿಜಯಲಕ್ಷ್ಮೀ ಭಗವಂತನವರ ಹಾಗೂ ಡಾ:ರಾಜೇಶ್ವರಿ ಪಾಟೀಲ ಪ್ರಾಸ್ಥಾವಿಕ ಮಾತನಾಡಿದರು. ಉಮೇಶ ಮಾನಕರ ಸ್ವಾಗತಿಸಿದರು, ಉಪನ್ಯಾಸಕರಾದ ಸುನೇನಾ ಕಲಗುಡಿ, ಅಬ್ದುಲ ಮುಜಾವರ ನಿರೂಪಿಸಿದರು, ವಿನಾಯಕ ಜೋಶಿ ವಂದಿಸಿದರು.

Related posts: