RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ: ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಗೋಕಾಕ: ಕನ್ನಡವೇ ಸತ್ಯ ಕನ್ನಡವೇ ನಿತ್ಯ 

ಕನ್ನಡವೇ ಸತ್ಯ ಕನ್ನಡವೇ ನಿತ್ಯ
ವಿಶೇಷ ವರದಿ : ಶ್ರೀ ಶಕೀಲ ಅಹ್ಮದ ಎಮ್. ಪೀರಜಾದೆ
ಉಪನ್ಯಾಸಕರು
ಗೋಕಾಕ ನ 1 : ನವ್ಹೆಂಬರ 1 ಕರ್ನಾಟಕ ರಾಜ್ಯ ಇತಿಹಾಸದ ಪುಟಗಳಲ್ಲಿನ ಒಂದು ಪ್ರಮುಖ ಮೈಲುಗಲ್ಲು. ಏಕೆಂದರೆ ನವ್ಹಂಬರ್ 1, 1956 ರಂದು ವಿವಿಧ ಬ್ರಿಟಿಷ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕರುನಾಡಿನ ಪ್ರದೇಶಗಳು ಏಕೀಕರಣಗೊಂಡು ಮೈಸೂರ ರಾಜ್ಯ ಉದಯವಾಗಿ ರಾಜ್ಯೋತ್ಸವ ಆಚರಣೆ ಪ್ರಾರಂಭಗೊಂಡ ದ್ಯೋತಕವೇ ನವ್ಹೆಂಬರ 1.
ಅಖಂಡ, ಭವ್ಯ ಕರ್ನಾಟಕದ ಕನಸನ್ನು ಹೊತ್ತು ಏಕೀಕರಣಕ್ಕಾಗಿ ಹೋರಾಡಿದ ಮಹಾನ್ ಕನ್ನಡಾಭಿಮಾನಿಗಳನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಕರ್ನಾಟಕ ಏಕೀಕರಣ ಚಳವಳಿಯು ಒಂದು ಐತಿಹಾಸಿಕ, ಭಾವನಾತ್ಮಕ, ಸಾಂಸ್ಕøತಿಕ ಹಾಗೂ ರಾಜಕೀಯ ಆಯಾಮಗಳನ್ನು ಹೊಂದಿರುತ್ತದೆ. ಕರ್ನಾಟಕ ಏಕೀಕರಣವು ರಾತ್ರಿ ಕಳೆದು ಬೆಳಗಾಗುವದರೊಳಗೆ ಅಸ್ತಿತ್ವಕ್ಕೆ ಬಂದಿರುವದಿಲ್ಲ. ಇದೊಂದು ಸುದೀರ್ಘ ಸತತ ಪರಿಶ್ರಮದ, ಫಲಶೃತಿಯಾಗಿರುತ್ತದೆ.


ಕರ್ನಾಟಕ ಏಕೀಕರಣ ಹೋರಾಟವು ಸರಿಸುಮಾರು 19ನೇ ಶತಮಾನದ ಮಧ್ಯಭಾಗದಿಂದ ಪ್ರಾರಂಭಗೊಂಡಿತು. ಈ ದಿಸೆಯಲ್ಲೆ 1890ರಲ್ಲಿ ಧಾರವಾಡದಲ್ಲಿ ಸ್ಥಾಪಿತವಾದ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಮುಖವಾಗಿದ್ದು ಕನ್ನಡಾಭಿಮಾನವನ್ನು ಜಾಗೃತಗೊಳಿಸಲು ನಾಂದಿಯಾಯಿತು. ಇದರ ಆಶ್ರಯದಲ್ಲಿ ಜರುಗಿದ ಅಖಿಲ ಕರ್ನಾಟಕ ಸಾಹಿತಿಗಳ ಸಮ್ಮೇಳನವು ಏಕೀಕರಣ ರೂಪರೇಷೆಗಳನ್ನು ರಚಿಸಿತು.
1915ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತ ಕನ್ನಡ ಸಾಹಿತ್ಯ ಪರಿಷತ್ ಹೋರಾಟ ದೀವಿಗೆಯನ್ನು ಪ್ರಜ್ವಲಿಸಿತು. 1920ರಲ್ಲಿ ಧಾರವಾಡದಲ್ಲಿ ಆಯೋಜಿಸಲಾದ ಕರ್ನಾಟಕ ರಾಜ್ಯ ರಾಜಕೀಯ ಸಮ್ಮೇಳನವು ಏಕೀಕರಣದ ಹೋರಾಟಕ್ಕೆ ಹೆಚ್ಚಿನ ಬಲ ನೀಡಿತು.
1924ರಲ್ಲಿ, ಬೆಳಗಾವಿಯಲ್ಲಿ, ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಭಾರತ ರಾಷ್ಟ್ರೀಯ ಕಾಂಗ್ರೇಸ್ ಸಭೆಯಲ್ಲಿ ಹುಯಿಲಗೋಳ ನಾರಾಯಣರವರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡು ಹೇಳಿ ಹೋರಾಟಕ್ಕೆ ಚೈತನ್ಯ ತುಂಬುತ್ತಾರೆ. ಆ ಸಮ್ಮೇಳನದಲ್ಲಿಯೇ ಕರ್ನಾಟಕ ಏಕೀಕರಣ ಕಾರ್ಯಕ್ರಮ ಸಂಘಟಿಸಿ ಕರ್ನಾಟಕ ಏಕೀಕರಣ ಸಭೆ ಸ್ಥಾಪಿಸಲಾಗುತ್ತದೆ. ಮುಂದೆ ಇದುವೇ ಕರ್ನಾಟಕ ಏಕೀಕರಣ ಸಂಘ ಎಂದು ಪ್ರಸಿದ್ಧವಾಯಿತು.


ಪ್ರತ್ಯೇಕ ಕನ್ನಡ ನಾಡಿನ ಕೂಗಿಗೆ ಇಂಬು ನೀಡಿದ್ದು, 1940ರಲ್ಲಿ ಸ್ಥಾಪಿತವಾದ ಕರ್ನಾಟಕ ಏಕೀಕರಣ ಪರಿಷತ್. ಅದರಂತೆ 1947ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಏಕೀಕರಣ ಮಹಾಸಮಿತಿಯು ಕರುನಾಡಿನ ಎಲ್ಲ ಪ್ರದೇಶಗಳಲ್ಲಿ ಸಂಚರಿಸಿ ಕನ್ನಡಿಗರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತದೆ.
1953ರಲ್ಲಿ ಅಖಂಡ ಕರ್ನಾಟಕ ರಾಜ್ಯ ಪರಿಷತ್ ಸ್ಥಾಪನೆಯಾಗಿ ಸ್ವತಂತ್ರ ಕರ್ನಾಟಕ ರಾಜ್ಯ ರಚಿಸುವ ನಿಟ್ಟಿನಲ್ಲಿ ಹೋರಾಟವನ್ನು ಮೊನಚುಗೊಳಿಸುತ್ತದೆ. ಈ ಎಲ್ಲ ಹೋರಾಟಗಳ ಫಲವಾಗಿ ಮುಂಬೈ, ಮದ್ರಾಸ್, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹಂಚಿಕೆಯಾಗಿದ್ದ ಕನ್ನಡ ಪ್ರದೇಶಗಳು ಏಕೀಕರಣಗೊಂಡು 1956ರಲ್ಲಿ ಮೈಸೂರು ರಾಜ್ಯ ಉದಯವಾಗುತ್ತದೆ. ಕನ್ನಡಗಿರ ಒಕ್ಕೂರಲಿನ ಫಲವಾಗಿ 1973ರಲ್ಲಿ ಕರ್ನಾಟಕ ರಾಜ್ಯ ಎಂದು ಮರುನಾಮಕರಣವಾಗುತ್ತದೆ.
ಕರ್ನಾಟಕ ರಾಜ್ಯ ಏಕೀಕರಣದ ಪ್ರಾತಃಸ್ಮರಣೀಯ ಕಟ್ಟಾಳುಗಳಾದ ಆಲೂರು ವೆಂಕಟರಾವ್ ಗಂಗಾಧರರಾವ್ ದೇಶಪಾಂಡೆ, ಹುಯಿಲಗೋಳ ನಾರಾಯಣ, ಗುದ್ಲೆಪ್ಪ ಹಳ್ಳಿಕೇರಿ, ಬೆನಗಲ್ ರಾಮರಾವ್, ಮಾಧವೀಡು ಕೃಷ್ಣರಾವ್, ಗಳಗನಾಥರು, ಶ್ರೀನಿವಾಸರಾವ್ ಮಂಗಳವೇಡೆ, ಜಯದೇವಿ ತಾಯಿ ಲಿಂಗಾಡೆ, ರಂಗೊಕಟ್ಟಿ, ಎಸ್. ನಿಜಲಿಂಗಪ್ಪ ಪಾಟೀಲ ಪುಟ್ಟಪ್ಪ. ವಿದೇಶಿಯವರಾದರೂ ಕನ್ನಡಾಭಿಮಾನಿಗಳಾದ ಫರ್ಡಿನಾಂಡ ಕಿಟೆಲ್, ಜೆ.ಎಫ್. ಫ್ಲೀಟ್, ಬಿ. ಎಲ್. ರೈಸ್, ಮುಲ್ಲರ್‍ರವರುಗಳನ್ನು ಹಾಗೂ ತಮ್ಮ ಗದ್ಯ – ಪದ್ಯ – ಲೇಖನಗಳ ಮೂಲಕ ಕನ್ನಡಾಭಿಮಾನ ಜಾಗೃತಿಗೊಳಿಸಿದ ಮಹಾನ್ ಸಾಹಿತಿಗಳಾದ ಕೇಶಿರಾಜ, ಹರಿಹರ, ರಾಘವಾಂಕ, ನಾಗಚಂದ್ರ, ಲಕ್ಷ್ಮೀಶ, ಬಿ.ಎಂ. ಶ್ರೀಕಂಠಯ್ಯ, ಜಿ.ಪಿ.ರಾಜರತ್ನಂ, ಡಿ.ವ್ಹಿ. ಗುಂಡಪ್ಪ, ಬೆಟಗೇರಿ ಕೃಷ್ಣಶರ್ಮ, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡಾಂಬೆಯ ಮುಡಿಗೇರಿಸಿದ ಸಾಹಿತಿಗಳನ್ನು ಅಲ್ಲದೆ ಕನ್ನಡ ಪರ ಅಲೆಯನ್ನು ಪ್ರಜ್ವಲಗೊಳಿಸಿದ ನಿಯತಕಾಲಿಕೆಗಳಾದ ಸಂಯುಕ್ತ ಕರ್ನಾಟಕ, ವಿಶಾಲ ಕರ್ನಾಟಕ, ವಿಶ್ವಕರ್ನಾಟಕ, ಕರ್ಮವೀರ, ಪ್ರಪಂಚ, ಸ್ವತಂತ್ರ ಕರ್ನಾಟಕ ವಾಗ್ದೇವಿ ಮುಂತಾದವುಗಳು ಶ್ಲಾಘನೀಯ ಕಾರ್ಯ, ಸೇವೆಗಳ ಬಗ್ಗೆ ಈಗಿನ ತಲೆಮಾರಿನ ಕನ್ನಡಿಗರಿಗೆ? ಕಂಗ್ಲೀಷರಿಗೆ? ತಿಳುವಳಿಕೆ, ಮಾಹಿತಿ ನೀಡಿ ಅವರುಗಳನ್ನು ನಿಜವಾದ ಅರ್ಥದಲ್ಲಿ ಪರಿಶುದ್ಧ ಕನ್ನಡಗರನ್ನಾಗಿಸುವ ಅವಶ್ಯಕತೆಯಿದೆ.
ಇಂದು ನಾವಾಡುವ ಕಸ್ತೂರಿ ಕನ್ನಡಕ್ಕೆ ತನ್ನದೇಯಾದ ಇತಿಹಾಸವಿದೆ. ಕರ್ನಾಟಕಂ ಎಂಬ ಪದದ ಬಳಕೆ ಪ್ರಪ್ರಥಮವಾಗಿ ಮಹಾಕಾವ್ಯವಾದ ಮಹಾಭಾರತದಲ್ಲಿ ಕಂಡು ಬರುತ್ತದೆ. ನಂತರ ಕಾಲ-ಕಾಲಕ್ಕೆ ರೂಪಾಂತರಗೊಂಡು ಕ್ರಿಸ್ತಶಕ 1000ರಲ್ಲಿ ರಾಜಶೇಖರನ ಕಾವ್ಯ ಮೀಮಾಂಸೆಯಲ್ಲಿ ಕರ್ನಾಟಕವೆಂದು ಕರೆಯಲ್ಪಟ್ಟಿದೆ.
ನಮ್ಮ ಕರ್ನಾಟಕ ಪ್ರಖ್ಯಾತ ರಾಜಮನೆತನಗಳ ತವರೂರು, ಶಿಲ್ಪಕಲೆಯ ಬೀಡು ಸಾಹಿತ್ಯದ ತವರೂರು, ಮಹಾನ್ ದಾರ್ಶನಿಕರ, ಶರಣರ, ಸಂತರÀ ಭೂಮಿ, ಸಾಮರಸ್ಯ-ಭಾವೈಕ್ಯತೆಗಳ ನೆಲೆ, ಸುಂದರ ನದಿ-ವನ, ಹೊನ್ನಿನ ಗಣಿಯಾಗಿದ್ದು ನಾವೆಲ್ಲರೂ ಅಪಾರ ಅಭಿಮಾನ – ಹೆಮ್ಮೆಪಡುವಂತಹ ಪುಣ್ಯಭೂಮಿ.
ಆದರೆ ವಿಷಾದದ ಸಂಗತಿ ಏನೆಂದರೆ, ಜಾಗತೀಕರಣದ ವ್ಯಾಮೋಹದಲ್ಲಿ ಪಾಶ್ಚಿಮಾತ್ಯೀಕರಣದ ಗುಂಗಿನಲ್ಲಿ ಕನ್ನಡ ನಾಡು ಭಾಷೆ, ಸಂಸ್ಕøತಿಗಳು ಅಪಾಯಕ್ಕೆ ಸಿಲುಕುತ್ತಿರುವುದು ಕಳವಕಾರಿ ಸಂಗತಿ. ಸುಮಾರು 2000 ವರ್ಷಗಳಿಗಿಂತಲೂ ಪುರಾತನವಾದ ಶ್ರೀಮಂತ ಕನ್ನಡ ಭಾಷೆ ಇಂದು ಬಡವಾಗುತ್ತಿದ್ದು ಈ ದಿಸೆಯಲ್ಲಿ ರಸಋಷಿ ಕುವೆಂಪುರವರ ಬಾರಿಸು ಕನ್ನಡ ಡಿಂಡಿಮದ ಓ ಕರ್ನಾಟಕ ಹೃದಯ ಶಿವಾ, ಸತ್ತಂತಿಹರನ್ನು ಬಡಿದೆಚ್ಚರಿಸು ಕಚ್ಚಾಡುವರನು ಕೂಡಿಸಿ ಒಲಿಸು ಎಂಬ ಆಶಯದಂತೆ ಕನಿಷ್ಟ ಪಕ್ಷ ನವ್ಹೆಂಬರ ತಿಂಗಳಿನಾದ್ಯಂತ ಕನ್ನಡ ನಾಡು, ನುಡಿ ಸಂಸ್ಕøತಿ, ಪರಂಪರೆಗಳ ಕುರಿತು ಎಲ್ಲ ಪ್ರಾಥಮಿಕ, ಪ್ರೌಢಶಾಲೆ, ಮಹಾವಿದ್ಯಾಲಯಗಳು ಸೇರಿದಂತೆ ಸಾರ್ವಜನಿಕವಾಗಿ ಪ್ರಬಂಧ, ಭಾಷಣ, ಚರ್ಚಾಕೂಟ ಚಿಂತನ-ಮಂಥನ, ರೂಪಕ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ.
ಕನ್ನಡ ನಾಡಿನಲ್ಲಿ ಜನಿಸಿ ಅಥವಾ ಹಲವು ಹತ್ತು ವರ್ಷಗಳಿಂದ ವಾಸಿಸುತ್ತಿರುವ ಇಲ್ಲಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಲಾಭ ಪಡೆಯುತ್ತಿರುವ ನಾವುಗಳು ಕನ್ನಡತವನ್ನು ಮೈಗೂಡಿಸಿಕೊಳ್ಳದಿರುವದು ಅಕ್ಷಮ್ಯ ಅಪರಾಧ.
ಕುಲವೆನ್ನದ ಗರಿಮೆಯೇ, ಛಲವೆನ್ನದ ಹಿರಿಮೆಯೇ ಸದ್ವಿಕಾಸಶೀಲ ನುಡಿವ ಲೋಕಾಮೃತ ಮಹಿಮೆಯ ನಾಡಿನಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ, ಬೌದ್ಧ, ಜೈನರುಗಳ ಉದ್ಯಾನವನವಾದ ಕರುನಾಡಿನಲ್ಲಿ ನಾವು ಜನಿಸಿರುವದಕ್ಕೆ ಹೆಮ್ಮೆ ಪಡುವಂತಾಗಬೇಕು. ನಮ್ಮ ಮಾತೃಭಾಷೆ, ಮನೆಭಾಷೆ, ಯಾವುದೇ ಇರಲಿ ಹೊಸ್ತಿಲದ ಆಚೆ ವ್ಯವಹಾರಿಕವಾಗಿ, ಆಡಳಿತಾತ್ಮಕವಾಗಿ, ಸಂವಹನಶೀಲ ಭಾಷೆಯಾಗಿ ಕನ್ನಡ ಮಾತ್ರವೇ ಇರಲಿ. ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ, ಶಿವರಾಮ ಕಾರಂತ, ದ.ರಾ.ಬೇಂದ್ರೆ, ಗಿರೀಶ ಕಾರ್ನಾಡರವರ ಮಾತೃಭಾಷೆ ಭಿನ್ನವಾಗಿದ್ದರೂ ಕನ್ನಡ ನಾಡು, ಭಾಷೆಯ ಬಗ್ಗೆ ಅವರಿಗಿರುವ ತುಡಿತ – ಮಿಡಿತ ವರ್ಣಿಸಲಸದಳ.
ಈ ಹೊತ್ತು ಕನ್ನಡ ಭಾಷೆ, ನೆಲ, ಜಲ, ಗಡಿ, ಸಂಸ್ಕøತಿಗಳ ರಕ್ಷಣೆಗಾಗಿ ಕಾವಲು ಸಮಿತಿಗಳನ್ನು ಅಭಿವೃದ್ಧಿ ಪ್ರಾಧಿಕಾರಗಳನ್ನು, ಅಸಂಖ್ಯಾತ ಕನ್ನಡ ಪರ ಸಂಘಟನೆಗಳನ್ನು ಹಾಗೂ ಹೋರಾಟವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗಿರುವದು ವಿಪರ್ಯಾಸವೇ ಸರಿ. ಇದಕ್ಕೆ ಕಾರಣ ಕನ್ನಡ ನಾಡು ಹಾಗೂ ಕನ್ನಡ ಭಾಷೆಯ ಬಗ್ಗೆ ನಾವು ಅನಾದರ – ಅಸಹಾಯಕತೆ ಹೊಂದಿರುವದು. ವಯಕ್ತಿಕ ರಾಗ-ದ್ವೇಷಗಳಿಂದಾಗಿಯೋ, ರಾಜಕೀಯ ತೆವಲುಗಳಿಂದಾಗಿಯೋ, ಪ್ರತ್ಯೇಕ ರಾಜ್ಯದ ಬೇಡಿಕೆ ಹಾಗೂ ಸಂಭ್ರಮಿಸಬೇಕಾದ ಕಾಲದಲ್ಲಿ ಕರಾಳ ದಿನಾಚರಣೆಯ ಕೂಗುಗಳು ಕೇಳಿ ಬರುತ್ತಿರುವುದು ಉಚಿತವಲ್ಲ. ಅಖಂಡ-ಸಮಗ್ರ ಕರ್ನಾಟಕದ ಕನಸನ್ನು ಕಂಡಿದ್ದ ಕರ್ನಾಟಕದ ಏಕೀಕರಣದ ಹೋರಾಟಗಾರರಿಗೆ ನಾವು ನೀಡುವ ಕೊಡುಗೆ ಇದುವೇ ಏನು?
ಕರುನಾಡು ತಾಯಿ ಸದಾ ಚಿನ್ಮಯಿ. ಈ ಪುಣ್ಯಭೂಮಿ ನಮ್ಮ ದೇವಾಲಯವಿದ್ದು ಇದೇ ನಾಡು, ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ. ಎಲ್ಲಿಯೇ ಇರಲಿ, ಹೇಗೆಯೇ ಇರಲಿ ಕನ್ನಡ ಭಾಷೆಯು ನಮ್ಮ ಉಸಿರಾಗಲಿ. ವಾಣಿಯ ವೀಣೆಯ ಸ್ವರ ಮಾಧುರ್ಯ ಹಾಗೂ ಕಸ್ತೂರಿ ಕಂಪಿನ ಕನ್ನಡ ಭಾಷೆ ನಮ್ಮೆಲ್ಲರ ಮನಗಳಲ್ಲಿ ಮನೆ ಮಾಡಲಿ ಎಂಬುದೇ ಮನದಾಳದ ಆಶಯ.

Related posts: