ಗೋಕಾಕ:ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ಇಂದು ನಾಡಿನ ಪ್ರತಿಯೊಬ್ಬರೂ ಪ್ರಯತ್ನಿಸಬೇಕು : ಅಭಿನವ ಶಿವಾನಂದ ಮಹಾಸ್ವಾಮಿಜಿ
ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ಇಂದು ನಾಡಿನ ಪ್ರತಿಯೊಬ್ಬರೂ ಪ್ರಯತ್ನಿಸಬೇಕು : ಅಭಿನವ ಶಿವಾನಂದ ಮಹಾಸ್ವಾಮಿಜಿ
ಬೆಟಗೇರಿ ನ 3 : ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಶ್ರೀಮಂತ ಹಾಗೂ ಸಾಮಾನ್ಯರಿಗೂ ಸಹ ಅರ್ಥವಾಗುವ ಹಾಗೇ ಸಾಹಿತ್ಯ ರಚಿಸಿ, ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಶ್ರೇಯಸ್ಸು ಡಾ.ಬೆಟಗೇರಿ ಕೃಷ್ಣಶರ್ಮ ಅವರಿಗೆ ಸಲ್ಲುತ್ತದೆ. ಕನ್ನಡ ಶ್ರೀಮಂತ ಭಾಷೆಯಾಗಿದೆ. ಗ್ರೀಕ್ ದೇಶದ ನೋಟಿನಲ್ಲಿ ಕನ್ನಡ ಅಕ್ಷರಗಳಿವೆ ಎಂದು ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕರ್ನಾಟಕ ರಕ್ಷಣಾವೇದಿಕೆ ಹಾಗೂ ಬೆಳಗಾವಿ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಗುರುವಾರ ನ.1 ರಂದು ಸಂಜೆ8 ಗಂಟೆಗೆ ನಡೆದ ಆನಂದಕಂದರ ದಿವ್ಯ ಸ್ಮರಣೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ಇಂದು ನಾಡಿನ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.
ಬೆಳಗಾವಿ ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಜ್ಯೋತಿ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆನಂದಕಂದರ ಹುಟ್ಟೂರು ಬೆಟಗೇರಿಯಲ್ಲಿ ಕೃಷ್ಣಶರ್ಮರ ಸ್ಮಾರಕ ಭವನ ನಿರ್ಮಿಸಲು ಪ್ರಯತ್ನಿಸಲಾಗುವುದು. ಪ್ರತಿವರ್ಷ ಸಾಹಿತ್ಯ ವಲಯದ ಸಮಾರಂಭ ಆಯೋಜಿಸುತ್ತಿರುವ ಇಲ್ಲಿಯ ಕರವೇ ಕಾರ್ಯಕರ್ತರ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಸ್ಥಳೀಯ ಎಚ್.ಬಿ.ಪಾಟೀಲ ಅಧ್ಯಕ್ಷತೆ ವಹಿಸಿ, ಹಾರೂಗೇರಿಯ ವಿ.ಎಸ್.ಮಾಳಿ ಮುಖ್ಯ ಅತಿಥಿಗಳಾಗಿ ಕೃಷ್ಣಶರ್ಮರ ಬದುಕು, ಬರಹದ ಕುರಿತು ಮಾತನಾಡಿದರು.
ಇಲ್ಲಿಯ ಕರ್ನಾಟಕ ರಕ್ಷಣಾವೇದಿಕೆ ಹಾಗೂ ಬೆಳಗಾವಿ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ ವತಿಯಿಂದ ಅತಿಥಿ, ಗಣ್ಯರನ್ನು ಶಾಲು ಹೊದಿಸಿ ಸತ್ಕರಿಸಿದರು. ಧಾರವಾಡದ ಆನಂದಕಂದ ಗೆಳೆಯರ ಬಳಗದವರಿಂದ, ದೂರದರ್ಶನ ಕಲಾವಿದ ಜೀವನಸಾಬ ಬಿನ್ನಾಳ ಹಾಗೂ ಸಂಗಡಿಗರಿಂದ ಹಾಸ್ಯ ಸಂಜೆ ಮತ್ತು ಜನಪದ ಗೀತಗಾಯನ ಕಾರ್ಯಕ್ರಮ ಜರುಗಿತು.
ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಪ್ರೌಢ ಶಾಲೆ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ, ಕರವೇ ಅಧ್ಯಕ್ಷ ಈರಣ್ಣ ಬಳಿಗಾರ, ಶಾಲನಿ ಚಿನಿವಾರ, ನಿರ್ಮಲಾ ಪಾಟೀಲ, ಶಂಭು ಹಿರೇಮಠ, ಸುರೇಶ ದಂಡಿನ, ಭರಮಪ್ಪ ಪೂಜೇರ, ಶಿವು ನಾಯ್ಕರ, ವೀರಭದ್ರ ದೇಯಣ್ಣವರ, ವಿಜಯ ಹಿರೇಮಠ, ಗಿರೀಶ ಗಾಣಗಿ ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಕನ್ನಡ ಪರ ಹೋರಾಟಗಾರರು, ಸಾಹಿತಿ-ಶರಣರು, ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಇದ್ದರು.
ನಾಗರಾಜ ಬೆಳಗಲಿ ಸ್ವಾಗತಿಸಿದರು. ಬಸವರಾಜ ಪಣದಿ ಕಾರ್ಯಕ್ರಮ ನಿರೂಪಿಸಿದರು. ಈರಣ್ಣ ಬಳಿಗಾರ ವಂದಿಸಿದರು.