ಬೆಳಗಾವಿ:ಆನಂದ ಅಪ್ಪುಗೋಳಗೆ ಈ ವರ್ಷವೂ ಜೈಲಲ್ಲೇ ದೀಪಾವಳಿ
ಆನಂದ ಅಪ್ಪುಗೋಳಗೆ ಈ ವರ್ಷವೂ ಜೈಲಲ್ಲೇ ದೀಪಾವಳಿ
ಬೆಳಗಾವಿ ನ 7 : ಉತ್ತರ ಕರ್ನಾಟಕ ಭಾಗದ ಸಾವಿರಾರು ಅಮಾಯಕ ಜನರ ಬಹುಕೋಟಿ ಠೇವಣಿಯನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಮತ್ತೆ ಅರೆಸ್ಟ್ ಆಗಿರುವ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಈ ವರ್ಷವೂ ಹಿಂಡಲಗಾ ಜೈಲಿನಲ್ಲೇ ಬೆಳಕಿನ ಹಬ್ಬ ದೀಪಾವಳಿ ಆಚರಿಸುವ ಅನಿರ್ವಾಯತೆ ಸೃಷ್ಠಿಯಾಗಿದೆ
ಕಳೆದ ವರ್ಷದ ದೀಪಾವಳಿ ಹಬ್ಬವನ್ನು ಆನಂದ ಅಪ್ಪುಗೋಳ ಇದೇ ಹಿಂಡಲಗಾ ಜೈಲಲ್ಲಿ ಆಚರಿಸಿದ್ದರು. ಕಳೆದ ವರ್ಷ ಆನಂದ ಅಪ್ಪುಗೋಳ ಒಬ್ಬರೆ ಜೈಲು ಸೇರಿದ್ದರೆ, ಈ ವರ್ಷ ಅವರ ಪತ್ನಿ ಹಾಗೂ ಸೊಸೈಟಿಯ ನಿರ್ದೇಶಕಿ ಪ್ರೇಮಾ ಅಪ್ಪುಗೋಳ ಕೂಡ ಜೈಲು ಪಾಲಾಗಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯು ಉತ್ತರ ಕರ್ನಾಟಕದಲ್ಲಿ 50ಕ್ಕೂ ಅಧಿಕ ಶಾಖೆಗಳನ್ನು ಹೊಂದಿದ್ದು, ಇದರ ಅಧ್ಯಕ್ಷ ಆನಂದ ಅಪ್ಪುಗೋಳ ಅವರು ಹೆಚ್ಚಿನ ಬಡ್ಡಿ ಹಣದ ಆಮಿಷವೊಡ್ಡಿ ನೂರಾರು ಕೋಟಿ ರೂ. ಠೇವಣಿ ಹಣ ಸಂಗ್ರಹಿಸಿದ್ದರು. ಅವಧಿ ಮುಗಿದ ಬಳಿಕ ಗ್ರಾಹಕರಿಗೆ ಈ ಠೇವಣಿ ಹಣ ಮರಳಿಸಬೇಕಿದ್ದ ಆನಂದ ಅಪ್ಪುಗೋಳ ಸ್ವಂತಕ್ಕೆ ಬಳಸಿಕೊಂಡ ಆರೋಪ ಎದುರಿಸುತ್ತಿದ್ದಾರೆ.
2017ರಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬೆಳಗಾವಿಯಿಂದ ಕಾಲ್ಕಿತ್ತಿದ್ದ ಆನಂದ ಅಪ್ಪುಗೋಳ ಮುಂಬೈನ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದರು. ವಿಷಯ ತಿಳಿದು ಮುಂಬೈಗೆ ತೆರಳಿದ್ದ ಬೆಳಗಾವಿ ಸಿಸಿಬಿ ಪೊಲೀಸರು ಆನಂದ ಅಪ್ಪುಗೋಳ ಅವರನ್ನು ಬಂಧಿಸಿದ್ದರು. ಆಗ ಜಾಮೀನು ಸಿಗದ ಕಾರಣ ಆನಂದ ಅಪ್ಪುಗೋಳ ಜೈಲಲ್ಲೇ ದೀಪಾವಳಿ ಕಳೆಯಬೇಕಾಯಿತು. ಬಳಿಕ ಜಾಮೀನಿನ ಮೇಲೆ ಹೊರ ಬಂದ ಆನಂದ ಅಪ್ಪುಗೋಳ, ಠೇವಣಿ ಹಣ ಮರಳಿಸಿಲ್ಲ.
ಇದರಿಂದ ಹತ್ತಾರು ಗ್ರಾಹಕರು ಬೆಳಗಾವಿಯ ಗ್ರಾಹಕ ನ್ಯಾಯಾಲದಲ್ಲಿ ದೂರು ದಾಖಲಿಸಿದ್ದರು. ಇದರಿಂದ ಗ್ರಾಹಕರ ನ್ಯಾಯಾಲಯ ಆನಂದ ಅಪ್ಪುಗೋಳ ಹಾಗೂ ಪ್ರೇಮಾ ಅಪ್ಪುಗೋಳ ಅವರಿಗೆ ಅರೆಸ್ಟ್ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ತಡರಾತ್ರಿ ಅರೆಸ್ಟ್ ಆಗಿದ್ದ ಅಪ್ಪುಗೋಳ ದಂಪತಿಗೆ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ಹಿನ್ನಲೆಯಲ್ಲಿ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.