ಗೋಕಾಕ:ವಿಭಿನ್ನವಾಗಿ ದೀಪಾವಳಿ ಹಬ್ಬದ ಆಚರಿಸಿದ ಬೆಟಗೇರಿ ಗ್ರಾಮಸ್ಥರು
ವಿಭಿನ್ನವಾಗಿ ದೀಪಾವಳಿ ಹಬ್ಬದ ಆಚರಿಸಿದ ಬೆಟಗೇರಿ ಗ್ರಾಮಸ್ಥರು
ಬೆಟಗೇರಿ ನ 8 : ಗ್ರಾಮದಲ್ಲಿ ದೀಪಾವಳಿ ಹಬ್ಬದ ಪಾಡ್ಯೆ ದಿನವನ್ನು ಗುರುವಾರ ನ.8 ರಂದು ಕುರಿ ಬೆದರಿಸುವ ಮೂಲಕ ಸ್ಥಳೀಯರು ವಿಭಿನ್ನವಾಗಿ ಆಚರಿಸಿದರು.
ಸಾಯಂಕಾಲ ಐದು ಗಂಟೆಗೆ ಊರಿನಲ್ಲಿರುವ ಕೆನರಾ ಬ್ಯಾಂಕ್‍ದ ಮುಂದಿರುವ ಕೌಜಲಗಿ-ಬೆಟಗೇರಿ ಮುಖ್ಯ ರಸ್ತೆಯ ಮೇಲೆ ಕಬ್ಬು, ಜೋಳದ ದಂಟು, ಅವರೆ ಹೂ ಸೇರಿದಂತೆ ಇನ್ನೀತರ ಹೂ ಗಳಿಂದ ಹಂಪ್ ನಿರ್ಮಿಸಿ ಪೂಜೆ, ನೈವೇದ್ಯ ಅರ್ಪಿಸಿ, ಊರಿನಲ್ಲಿರುವ ಎಲ್ಲ ಕುರಿಗಳನ್ನು ಒಂದಡೆ ಸೇರಿಸಿ ಕುರಿಗಾಹಿಗಳು, ಸ್ಥಳೀಯರು ಕುರಿ ಬೆದರಿಸಿದರು. ಸ್ಥಳೀಯ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಊರಿನ ಹಿರಿಯರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದÀರು.
ಬಳಿಕ ಇಲ್ಲಿಯ ಎಲ್ಲ ಮನೆಗಳಲ್ಲಿ 5, 7, 9 ದಿನಗಳಿಂದ ಸಗಣಿಯಿಂದ ತಟ್ಟಿದ ಪಾಂಡವ(ಪಾಂಡ್ರವ್ವ)ರನ್ನು ಹೂಗಳಿಂದ ಅಲಂಕಾರಿಸಿ ಪೂಜಿಸಿದ ಪಾಂಡವ(ಪಾಂಡ್ರವ್ವ)ರನ್ನು ಮನೆಯ ಮಾಳಗಿ ಮೇಲೆ ಇಡ(ಕಳುಹಿಸ)ಲಾಯಿತು.
ಲಕ್ಷ್ಮೀದೇವಿಯ ಆರಾಧನೆ: ಗುರುವಾರದಂದು ಗ್ರಾಮದಲ್ಲಿ ಬೆಳಗ್ಗೆಯಿಂದ ಸಂಜೆ ತನಕ ಎಲ್ಲರ ಮನೆಗಳಲ್ಲಿ, ಜೀಪ್, ಟ್ಯಾಕ್ಟರ್ ಸೇರಿದಂತೆ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ದೇವಿಯ ಆರಾಧನೆ, ಪೂಜೆ ವೈಭವದಿಂದ ನಡೆದು, ಪುರದೇವರ ಎಲ್ಲ ದೇವಾಲಯಗಳಲ್ಲಿ ಪುರಜನರಿಂದ ಪೂಜಾ, ನೈವೇದ್ಯ ಸಮರ್ಪಿಸುವ ಕಾರ್ಯಕ್ರಮ ಜರುಗಿತು.
ದೀಪಾವಳಿ ಹಬ್ಬದ ಪ್ರಯುಕ್ತ ನಾಲ್ಕೈದು ದಿನ ಗ್ರಾಮದ ಎಲ್ಲ ದೇವಾಲಯಗಳಲ್ಲಿ ದೀಪೋತ್ಸವ, ಮನೆ ಮುಂದೆ ಬೆಳಕಿನಿಂದ ಬೆಳಗುವ ಹಣತೆಗಳ ಸಾಲು, ಮನೆ ಮೇಲೆ ರಂಗು ರಂಗಿನ ಆಕಾಶಬುಟ್ಟಿಗಳು ನೋಡುಗರ ಕಣ್ಮನ ಸೆಳೆದವು. ಎಲ್ಲರ ಮನೆ-ಮನಗಳಲ್ಲಿ ಸಂತಸ ಮಾನೆ ಮಾಡಿತ್ತು. ಮಕ್ಕಳು, ಹೆಣ್ಣುಮಕ್ಕಳು, ಪುರುಷರು ಸೇರಿದಂತೆ ಮನೆ ಮಂದಿಯಲ್ಲಾ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು.