ಮೂಡಲಗಿ:ದರ ನಿಗದಿಗೆ ನ.15 ಅಂತಿಮ ಗಡವು ಇಂದು ಸಂಗನಕೇರಿಯಲ್ಲಿ ಕಬ್ಬು ಬೆಳೆಗಾರರಿಂದ ರಸ್ತೆ ತಡೆ
ದರ ನಿಗದಿಗೆ ನ.15 ಅಂತಿಮ ಗಡವು
ಇಂದು ಸಂಗನಕೇರಿಯಲ್ಲಿ ಕಬ್ಬು ಬೆಳೆಗಾರರಿಂದ ರಸ್ತೆ ತಡೆ
ಮೂಡಲಗಿ ನ 10 : ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನ ಕಬ್ಬು ಕಟಾವಿಗೆ ನೀಡಿರುವ ಆದೇಶವನ್ನು ಹಿಂಪಡೆಯಬೇಕು. ನ. 15ರೊಳಗಾಗಿ ಹಿಂದಿನ ಬಾಕಿ ಕೊಟ್ಟು ಪ್ರಸಕ್ತ ಸಾಲಿನ ದರ ನಿಗದಿ ಮಾಡಿ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು ಎಂದು ರೈತ ಸಂಘದ ಮುಖಂಡ ಚೂನಪ್ಪ ಪೂಜೇರಿ ಆಗ್ರಹಿಸಿದರು.
ಅವರು ಸ್ಥಳೀಯ ವೀರಭದ್ರವೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.15ರಂದು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ನಡೆಸಲಿರುವ ಹೋರಾಟ ಪೂರ್ವಭಾವಿಯಾಗಿ ಸಂಗನಕೇರಿ ಕ್ರಾಸ್‍ದಲ್ಲಿ ನ.11 ಭಾನುವಾರದಂದು ಮುಂಜಾನೆ 10ಗಂಟೆಯಿಂದ ಸಾಂಕೇತಿಕವಾಗಿ ಕಬ್ಬು ಬೆಳೆಗಾರರ ಹಿತರಕ್ಷಣಾ ವೇದಿಕೆಯ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಕಾಂಗ್ರೇಸ್ಸ್ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಖನ್ ಸವಸುದ್ದಿ ಮಾತನಾಡಿ, ಭಾನುವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಕಾರ್ಖಾನೆಗಳ ಎಮ್.ಡಿ ಹಾಗೂ ಸಿ.ಇ.ಓ ಗಳಿಗೆ ಮನವಿ ಸಲ್ಲಿಸಿ ರೈತರ ಬಗ್ಗೆ ಕಾಳಜಿವಹಿಸಿ ನ.15ರೊಳಗೆ ಹಿಂದಿನ ಬಾಕಿ ಹಣ ನೀಡಿ, ಪ್ರಸಕ್ತ ಸಾಲಿನ ದರ ನಿಗದಿ ಪಡಿಸಿ ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲವಾದಲ್ಲಿ ಕಾರ್ಖಾನೆಗಳಿಗೆ ಬೀಗ ಜಡೆಯುವ ಕಾರ್ಯಕ್ರಮ ನಡೆಸಲಾಗುವುದು ಇದು ಅಂತಿಮ ಗಡವು ಎಂದರು.