ಗೋಕಾಕ:ಮತದಾರರ ಚೀಟಿ ಕುರಿತು ಜಾಗೃತಿ ಜಾಥಾ
ಮತದಾರರ ಚೀಟಿ ಕುರಿತು ಜಾಗೃತಿ ಜಾಥಾ
ಬೆಟಗೇರಿ ನ 10 : ಗ್ರಾಮದಲ್ಲಿರುವ 18 ವರ್ಷ ವಯಸ್ಸು ಪೊರೈಸಿದ ಯುವಕ-ಯುವತಿಯರು ತಪ್ಪದೇ ಮತದಾರ ಯಾದಿಯಲ್ಲಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಬೇಕು. ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ. ಹೀಗಾಗಿ ಎಲ್ಲರು ಕಡ್ಡಾಯವಾಗಿ ಮತದಾರ ಚೀಟಿ ಪಡೆಯಬೇಕು ಎಂದು ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮ ಲೆಕ್ಕಾಧಿಕಾರಿ ಜೆ.ಎಂ.ನದಾಫ್ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ ಮತ್ತು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳ ಸಹಯೋಗದೊಂದಿಗೆ ಶನಿವಾರ ನ.10 ರಂದು ಇಲ್ಲಿಯ ಪ್ರಮುಖ ಬೀದಿಗಳಲ್ಲಿ ಹಮ್ಮಿಕೊಂಡ ಮತದಾರರ ಚೀಟಿ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು,
2018 ಡಿಸೆಂಬರ31ರೊಳಗೆ 18 ವರ್ಷ ಪೂರೈಸುವ ಗ್ರಾಮದ ಎಲ್ಲ ಯುವಕ-ಯುವತಿಯರು ಸಹ ಮತದಾರರ ಯಾದಿಯಲ್ಲಿ ತಮ್ಮ ಹೆಸರು ನೊಂದಾಯಿಸಬೇಕು. ಈಗಾಗಲೇ ಮತದಾರ ಯಾದಿಯಲ್ಲಿ ತಮ್ಮ ಹೆಸರು ಮತ್ತು ಮತ್ತಿತರ ದೋಷಗಳ ತಿದ್ದುಪಡಿ ಮಾಡಿಸಿಕೊಳ್ಳುವ ಅವಕಾಶವಿದೆ. ಮತದಾರರ ಯಾದಿಯಲ್ಲಿ ಹೆಸರು ನೊಂದಾಯಿಸುವಂತೆ ಚುನಾವಣಾ ಗುರುತಿನ ಚೀಟಿ ಪಡೆಯುವಂತೆ ಸ್ಥಳೀಯರು ತಮ್ಮ ಅಕ್ಕ, ಪಕ್ಕದ ಸ್ನೇಹಿತರಿಗೆ ಸಲಹೆ ನೀಡಬೇಕು ಎಂದು ಗ್ರಾಮ ಲೆಕ್ಕಾಧಿಕಾರಿ ಜೆ.ಎಂ.ನದಾಫ್ ತಿಳಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮತದಾರರ ಚೀಟಿ ಕುರಿತು ಹಲವಾರು ಘೋಷಣೆ ಕೂಗುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಭಯ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆದ ಬಳಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಸ್ಥಳೀಯ ಪಿಕೆಪಿಎಸ್ ಮಾಜಿ ಅಧ್ಯಕ್ಷ ರಾಮಪ್ಪ ಬಳಿಗಾರ, ಮುತ್ತೆಪ್ಪ ವಡೇರ, ಗ್ರಾಪಂ ಸದಸ್ಯ ಸುಭಾಷ ಕರೆಣ್ಣವರ ಶಾಲೆಯ ಮುಖ್ಯ ಶಿಕ್ಷಕ ವೈ.ಸಿ. ಶೀಗಿಹಳ್ಳಿ, ಆರ್.ಬಿ.ಬೆಟಗೇರಿ, ಬ್ರಹ್ಮಾನಂದ ಜಡೇರ, ಯಮನಪ್ಪ ಹೊರಟ್ಟಿ, ರುದ್ರಪ್ಪ ಕಾಡವ್ವಗೋಳ, ಶಿಕ್ಷಕರು, ಮಕ್ಕಳು, ಇತರರು ಇದ್ದರು.