RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಅನಂತಕುಮಾರರಂತಹ ಸಂಘಟನಾ ಚತುರ ರಾಜಕಾರಣಿಯನ್ನು ಪಕ್ಷ ಬಡವಾಗಿದೆ : ಬಾಲಚಂದ್ರ ಜಾರಕಿಹೊಳಿ

ಗೋಕಾಕ:ಅನಂತಕುಮಾರರಂತಹ ಸಂಘಟನಾ ಚತುರ ರಾಜಕಾರಣಿಯನ್ನು ಪಕ್ಷ ಬಡವಾಗಿದೆ : ಬಾಲಚಂದ್ರ ಜಾರಕಿಹೊಳಿ 

ಅನಂತಕುಮಾರರಂತಹ ಸಂಘಟನಾ ಚತುರ ರಾಜಕಾರಣಿಯನ್ನು ಪಕ್ಷ ಬಡವಾಗಿದೆ : ಬಾಲಚಂದ್ರ ಜಾರಕಿಹೊಳಿ

ಗೋಕಾಕ ನ 12 : ಅನಂತಕುಮಾರರಂತಹ ಸಂಘಟನಾ ಚತುರ ರಾಜಕಾರಣಿಯನ್ನು ಕಳೆದುಕೊಂಡು ಪಕ್ಷ ಬಡವಾಗಿದೆ ಎಂದು ಅರಭಾವಿ ಶಾಸಕ ಸಚಿವ ಬಾಲಚಂದ್ರ ಜಾರಕಿಹೊಳಿ ಸಂತಾಪ ಸೂಚಿಸಿದರು.
ಇಂದಿಲ್ಲಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಅರಭಾವಿ ಮಂಡಲ ಬಿಜೆಪಿ ಹಮ್ಮಿಕೊಂಡಿದ್ದ ಕೇಂದ್ರ ಸಚಿವ ಅನಂತಕುಮಾರ ಅವರಿಗೆ ಶೃದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಯಲ್ಲಿ ಅನಂತಕುಮಾರ ಪಾತ್ರ ಹಿರಿದಾಗಿತ್ತು ಎಂದು ಹೇಳಿದರು.
ಕೇಂದ್ರ ಸಚಿವರಾಗಿ ಅನೇಕ ಮಹತ್ವದ ಖಾತೆಗಳನ್ನು ನಿಭಾಯಿಸಿದ್ದರು. ಜೊತೆಗೆ ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷರಾಗಿ ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಲು ಶ್ರಮಿಸಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೊಂಡಿಯಂತೆ ಕೆಲಸ ನಿರ್ವಹಿಸುತ್ತಿದ್ದ ಇವರು, 1996 ರಿಂದ ಸತತವಾಗಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರರೆನಿಸಿಕೊಂಡಿದ್ದರು. ಕೇಂದ್ರ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಬಡ ರೋಗಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಜನೌಷಧಿ ಜಾರಿಗೊಳಿಸುವ ಮೂಲಕ ಜನೌಷಧಿಯ ಹರಿಕಾರರೆನಿಸಿಕೊಂಡರು. ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಮುಟ್ಟಿಸುವಲ್ಲಿ ಅನಂತಕುಮಾರ ಅವರು ರೂಪಿಸಿದ ನೀತಿಯೇ ಕಾರಣವೆಂದು ಹೇಳಿದರು.
ಎಲ್ಲ ಪಕ್ಷಗಳ ಮುಖಂಡರೊಂದಿಗೆ ಸೌಹಾರ್ದಯುತ ಸಂಬಂಧವನ್ನಿಟ್ಟುಕೊಂಡು ಅಭಿವೃದ್ಧಿಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸ್ನೇಹ-ಸಂಬಂಧಕ್ಕೆ ಅಗಾಧ ಬೆಲೆ ನೀಡುತ್ತಿದ್ದರು. ಪ್ರತಿಸಾರಿ ನಾನು ಭೇಟಿಯಾದಾಗೊಮ್ಮೆ ನನ್ನನ್ನು ಪ್ರೀತಿಯ ತಮ್ಮನೆಂದು ಕರೆಯುತ್ತಿದ್ದರು. ಇವರಿಲ್ಲದ ಪಕ್ಷ ಇಂದು ಬಡವಾಯಿತು. ಅನಂತಕುಮಾರರಂತಹ ಅದಮ್ಯ ಚೇತನ ಕಣ್ಮರೆಯಾಯಿತೆಂದು ಬಾಲಚಂದ್ರ ಜಾರಕಿಹೊಳಿ ಅನಂತಕುಮಾರರ ಸೇವೆಯನ್ನು ಸ್ಮರಿಸಿಕೊಂಡರು.
ಬೆಳಗಾವಿ ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಎಪಿಎಂಸಿ ನಿರ್ದೇಶಕ ಅಶೋಕ ನಾಯಿಕ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಪಿಎಲ್‍ಡಿ ಬ್ಯಾಂಕ್ ಉಪಾಧ್ಯಕ್ಷ ರಾಜು ಬೈರುಗೋಳ, ನಿರ್ದೇಶಕರಾದ ಬಸವರಾಜ ಬಡಗನ್ನವರ, ಸುಭಾಸ ಬೆಳಗಲಿ, ಜಿಪಂ ಮಾಜಿ ಸದಸ್ಯ ವಿಠ್ಠಲ ಸವದತ್ತಿ, ತಾಪಂ ಮಾಜಿ ಅಧ್ಯಕ್ಷ ಉಮೇಶ ಬೂದಿಹಾಳ, ಗಿರೀಶ ನಾಡಗೌಡ, ಯಲ್ಲಪ್ಪ ಸತ್ತಿಗೇರಿ, ಪರಸಪ್ಪ ಬಬಲಿ, ಎಂ.ಕೆ. ಕುಳ್ಳೂರ, ಬಸವರಾಜ ಕಸ್ತೂರಿ, ಮಹಾದೇವ ಹಾರೂಗೇರಿ, ಯಮನಪ್ಪ ಕರಬನ್ನವರ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts: