RNI NO. KARKAN/2006/27779|Monday, November 4, 2024
You are here: Home » breaking news » ಮೂಡಲಗಿ:ಕನ್ನಡ ಸಾಹಿತ್ಯ ಪರಿಷತ್ ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದೆ : ಚಂದ್ರಶೇಖರ ಅಕ್ಕಿ

ಮೂಡಲಗಿ:ಕನ್ನಡ ಸಾಹಿತ್ಯ ಪರಿಷತ್ ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದೆ : ಚಂದ್ರಶೇಖರ ಅಕ್ಕಿ 

ಕನ್ನಡ ಸಾಹಿತ್ಯ ಪರಿಷತ್ ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದೆ : ಚಂದ್ರಶೇಖರ ಅಕ್ಕಿ

ಮೂಡಲಗಿ ನ 21 : ಕನ್ನಡಪರ ಸಂಘಟನೆಗಳು ಕನ್ನಡ ಉಳಿಸುವ ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದರೆ. ಕನ್ನಡ ಸಾಹಿತ್ಯ ಪರಿಷತ್ ತಾಯಿ ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದೆ ಎಂದು ಗೋಕಾಕಿನ ಸಾಹಿತಿ ಚಂದ್ರಶೇಖರ ಅಕ್ಕಿ ಹೇಳಿದರು.
ಅವರು ಸ್ಥಳೀಯ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್‍ನ ನೂತನ ಮೂಡಲಗಿ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡುತ್ತ, ಮೂಡಲಗಿಯೂ ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರುವಾಸಿಯಾಗಿದೆ. ಹೊಸ ತಾಲೂಕಿನಲ್ಲಿ ನವ ಚೈತನ್ಯದೊಂದಿಗೆ ಕಸಾಪದ ನೂತನ ಘಟಕ ಉದ್ಘಾಟನೆಗೊಂಡಿದೆ. ಇಲ್ಲಿಯ ಕನ್ನಡ ಮನಸ್ಸುಗಳು 22ವರ್ಷಗಳಿಂದ ಕನ್ನಡ ಕಟ್ಟುವ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಮುಂದೆಯೂ ಹೊಸ ಪ್ರತಿಭೆಗಳನ್ನು ಗುರುತಿಸಿ ನಾಡು, ನುಡಿ ಬೆಳೆಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ, ಕೇವಲ ಕಾರ್ಯಕ್ರಮ ನಡೆಸುವುದರಿಂದ ಕನ್ನಡ ಭಾಷೆ ಉದ್ದಾರವಾಗದು.ಕನ್ನಡ ಭಾಷೆ ಪ್ರತಿನಿತ್ಯ ಬಳಸುವುದರಿಂದ ಭಾಷೆ, ಸಂಸ್ಕøತಿ ಬೆಳೆಯುತ್ತದೆ.ಪೋಷಕರು ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸಿ ಕನ್ನಡ ನಾಡನ್ನು ಉಳಿಸುವ ಪ್ರಯತ್ನ ಮಾಡಬೇಕಿದೆ. ಇತ್ತಿಚಿನ ದಿನಗಳಲ್ಲಿ ಸಾಹಿತ್ಯದ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ನಾವು ನಮ್ಮ ಭಾಷಾಭಿಮಾನವನ್ನು ಬಿಟ್ಟು ಪರಭಾಷೆಯ ಮೇಲೆ ವ್ಯಾಮೋಹ ತೋರಿಸುತ್ತಿದ್ದೆವೆ. ಪರಭಾಷಿಕರಲ್ಲಿ ನಾವೆಲ್ಲರು ಕನ್ನಡ ಭಾಷೆಯಲ್ಲಿಯೇ ವ್ಯಾವಹರಿಸಿದಾಗ ಮಾತ್ರ ಕನ್ನಡಕ್ಕೆ ಗೌರವ ನೀಡಿದಂತಾಗುತ್ತದೆ ಎಂದರು.
ಅಧ್ಯಕ್ಷತೆವಹಿಸಿದ ಬೆಳಗಾವಿ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಕನ್ನಡ ಪುಸ್ತಕಗಳನ್ನು ಓದುವುದರಿಂದ ಭಾಷಾ ಜ್ಞಾನ ಬೆಳೆಯುತ್ತದೆ. ಕನ್ನಡಿಗರು ಗ್ರಂಥಾಲಯಗಳಿಗೆ ಹೋಗಿ ಸಾಹಿತಿಗಳ ಪುಸ್ತಕ ಓದುವುದನ್ನು ರೂಡಿಸಿಕೊಳ್ಳಬೇಕು. ಕನ್ನಡ ಭಾಷೆಯ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಕಸಾಪದಿಂದ ಕನ್ನಡ ಸಂಸ್ಕøತಿ ಉಳಿಸುವ ಸಲುವಾಗಿ ಕನ್ನಡಪರ ಕಾರ್ಯಕ್ರಮ ಮಾಡಲಾಗುತಿದೆ. ಜಾನಪದದ ವಿವಿಧ ಕಲಾ ಪ್ರಾಕಾರಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿ ಕನ್ನಡ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದೆವೆ. ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕನ್ನಡ ಸಾಹಿತ್ಯ ಪರಿಷತ್‍ಗೆ ಸಂಪೂರ್ಣ ಸಹಕಾರ ನೀಡುವ ಮತ್ತು ತಾಲೂಕಿನ ಸಾಹಿತಿಗಳು ರಚಿಸುವ ಸಾಹಿತ್ಯಗಳನ್ನು ಧ್ವನಿಮುದ್ರಣದ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯ ಇಲಾಖೆಯಿಂದ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಸಪಾ ನಿಕಟಪೂರ್ವ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡುತ್ತ, ಉತ್ತರ ಕರ್ನಾಟಕಕ್ಕೆ ಸಾಹಿತ್ಯ ಕ್ಷೇತ್ರದಲ್ಲೂ ಅನ್ಯಾಯವಾಗುತಿದೆ. ಈ ಭಾಗದಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಅರ್ಹರಿರುವ ಸಾಕಷ್ಟು ಸಾಹಿತಿಗಳಿದ್ದಾರೆ ಅವರನ್ನು ಕಡೆಗಣಿಸಲಾಗುತ್ತಿದೆ. ನಮ್ಮ ಸುತ್ತಮುತ್ತಲಿನಲ್ಲಿರುವ ಪ್ರತಿಭೆಗಳನ್ನು ಗುರುತಿಸಲೂ ಕಸಾಪದೊಂದಿಗೆ ಎಲ್ಲರು ಕೈಜೊಡಿಸಿ ನಾಡು, ನುಡಿ ಬೆಳೆಸುವ ಕಾರ್ಯದಲ್ಲಿ ಸಹಕರಿಸಿ ಎಂದರು.
ಗೋಕಾಕಿನ ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ, ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ, ಬಿ.ಬಿ. ಹಂದಿಗುಂದ ಮಾತನಾಡಿದರು.
ವೇದಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ.ಆರ್. ಪೂಜೇರಿ, ಎಚ್.ಎ. ಸೋನವಾಲ್ಕರ, ಎಮ್,ವಾಯ್ ಮೆಣಸಿನಕಾಯಿ, ಕಸಪಾ ಮೂಡಲಗಿ ಘಟಕ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಉಪಸ್ಥಿತರಿದ್ದರು.
ಮೂಡಲಗಿ ಸಿದ್ದಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶ್ರೀಪಾದಬೋದ ಸ್ವಾಮಿಜೀ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಈ ಸಂಧರ್ಭದಲ್ಲಿ ಸಾಹಿತಿ ಮುರುಗೇಶ ಗಾಡವಿ ರಚಿಸಿದ “ಮಕ್ಕಳ ಆಸೆ-ತುಂಟಾಟ” ಹಾಡಿನ ಧ್ವನಿ ಮುದ್ರಣವನ್ನು ಬಿಡುಗಡೆಗೊಳಿಸಲಾಯಿತು. ವಿವಿಧ ಸಂಘಟನೆಯ ಪದಾಧಿಕಾರಿಗಳು ಮೂಡಲಗಿ ಕಸಾಪ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಈರಣ್ಣ ಕೊಣ್ಣೂರ, ಹನುಮಂತ ಗುಡ್ಲಮನಿ, ಸಾಹಿತಿ ಮಹಾಲಿಂಗ ಮಂಗಿ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಜಯ ಕರ್ನಾಟಕ ತಾಲೂಕ ಅಧ್ಯಕ್ಷ ಶಿವರೆಡ್ಡಿ ಹುಚರೆಡ್ಡಿ, ಸಿದ್ದಣ್ಣ ದುರದುಂಡಿ, ಮುರುಗೇಶ ಗಾಡವಿ, ಶಂಕರ ನಿಂಗನೂರ, ಉಮೇಶ ಬೆಳಕೂಡ, ಯಲ್ಲಾಲಿಂಗ ವಾಳದ, ಪ್ರಕಾಶ ಮೇತ್ರಿ, ಮಹಾರಾಜ ಸಿದ್ದು, ಸಂಧ್ಯಾ ಪಾಟೀಲ, ಸಾವಿತ್ರಿ ಕಮಲಾಪೂರ ಮತ್ತು ಸಾಹಿತಿಗಳು, ಚಿಂತಕರು, ವಿವಿಧ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಹಾಗೂ ನೂರಾರು ಕನ್ನಡಭಿಮಾನಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಸ್ವಾಗತಿಸಿದರು. ಚಿದಾನಂದ ಹೂಗಾರ ನಿರೂಪಿಸಿದರು. ಬಸವರಾಜ ಕೋಟಿ ವಂದಿಸಿದರು.

Related posts: