ಖಾನಾಪುರ:ಶೀಘ್ರದಲ್ಲೇ ಶಾಂಡಿಲ್ಯೇಶ್ವರ ಮಠದ ಕಟ್ಟಡ ಕಾರ್ಯ ಸಂಪೂರ್ಣ: ನಾಸೀರ ಬಾಗವಾನ್
ಶೀಘ್ರದಲ್ಲೇ ಶಾಂಡಿಲ್ಯೇಶ್ವರ ಮಠದ ಕಟ್ಟಡ ಕಾರ್ಯ ಸಂಪೂರ್ಣ: ನಾಸೀರ ಬಾಗವಾನ್
ಖಾನಾಪುರ ಜೂ 25: ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಶಾಂಡಿಲ್ಯೇಶ್ವರ ಮಠದ ಕಟ್ಟಡ ಕಾರ್ಯ ಶೀಘ್ರದಲ್ಲೇ ಸಂಪೂರ್ಣಗೊಳ್ಳಲಿದ್ದು, ಈ ಮಠದ ನಿರ್ಮಾಣದಿಂದ ಪಾರಿಶ್ವಾಡ ಗ್ರಾಮದ ಜನರ ಬಹುದಿನಗಳ ಆಸೆ ಈಡೇರಲಿದೆ ಎಂದು ಉದ್ಯಮಿ ಮತ್ತು ಕಾಂಗ್ರೆಸ್ ಮುಖಂಡ ನಾಸೀರ ಬಾಗವಾನ ಅಭಿಪ್ರಾಯ ಪಟ್ಟರು.
ಗ್ರಾಮದಲ್ಲಿ ರವಿವಾರ ನಿರ್ಮಾಣ ಹಂತದಲ್ಲಿರುವ ಹಿರೇಮುನವಳ್ಳಿ ಶಾಂಡಿಲ್ಯೇಶ್ವರ ಮಠದ ಶಾಖಾ ಮಠದ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಮಠದ ಸಭಾಗೃಹದಲ್ಲಿ ಜರುಗಿದ ಧರ್ಮ ಸಭೆಯಲ್ಲಿ ಶಾಂಡಿಲ್ಯೇಶ್ವರ ಮಠದ ಭಕ್ತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು ಮಠ ಮಾನ್ಯಗಳ ಪಾತ್ರ ಮಹತ್ವದ್ದಾಗಿದ್ದು, ಮಠಾಧೀಶರ ಸನ್ಮಾರ್ಗದಲ್ಲಿ ಸಾಗುವ ಮೂಲಕ ಪರಸ್ಪರ ಅನ್ಯೋನ್ಯತೆಯಿಂದ ಜೀವಿಸಿ ನಮ್ಮ ದೇಶದ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಸಮುದಾಯ ಅಭಿವೃದ್ಧಿ ಕಾರ್ಯಗಳಲ್ಲಿ ಶಕ್ಯಾನುಸಾರ ದಾನ ಧರ್ಮ ಮಾಡಿ ಸಮಾಜದ ಋಣ ತೀರಿಸಬೇಕು. ಈ ಉದ್ದೇಶದಿಂದ ತಾವು ಒಬ್ಬ ಮುಸ್ಲಿಂ ಸಮುದಾಯದ ವ್ಯಕ್ತಿಯಾದರೂ ಹಿಂದೂ ಧರ್ಮದ ಹಲವಾರು ಮಠಗಳಿಗೆ, ದೇವಾಲಯಗಳಿಗೆ ದೇಣಿಗೆ ನೀಡಿದ್ದು, ದೇಣಿಗೆಯನ್ನು ಸದುಪಯೋಗ ಪಡೆಸಿಕೊಂಡವರು ತಮ್ಮ ಕಾರ್ಯವನ್ನು ನೆನೆದು ಸತ್ಕರಿಸುತ್ತಿರುವುದು ತಮಗೆ ಖುಷಿ ತಂದಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಮುಕ್ತಿ ಮಠದ ಶಿವಸಿದ್ಧ ಶಿವಾಚಾರ್ಯ ಸ್ವಾಮಿಗಳು, ಪಾರಿಶ್ವಾಡದ ಶಾಂಡಿಲ್ಯೇಶ್ವರ ಶಾಖಾ ಮಠದ ನಿರ್ಮಾಣ ಕಾರ್ಯದಲ್ಲಿ ಎಲ್ಲ ಜಾತಿ ಮತ್ತು ಧರ್ಮಗಳ ಜನರು ದೇಣಿಗೆ ನೀಡಿ ಭಾವೈಕ್ಯತೆ ಸಾರಿದ್ದಾರೆ ಎಂದರು. ಹಿರೇಮುನವಳ್ಳಿ ಶಾಂಡಿಲ್ಯೇಶ್ವರ ಮಠದ ಪೀಠಾಧ್ಯಕ್ಷ ಶಂಭುಲಿಂಗ ಸ್ವಾಮಿಗಳು ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪಾರಿಶ್ವಾಡದಲ್ಲಿ ಮಠಕ್ಕೆ ಸ್ಥಳ ದಾನ ನೀಡಿದ ಗ್ರಾಮದ ಹಿರಿಯ ಕಲ್ಲಪ್ಪ ನಾಗಪ್ಪಾ ಕುಕಡೊಳ್ಳಿಯವರನ್ನು ಸತ್ಕರಿಸಲಾಯಿತು. ರೈತ ಮುಖಂಡ ಮಲ್ಲಿಕಾರ್ಜುನ ವಾಲಿ, ಪಾರಿಶ್ವಾಡ ಗ್ರಾ. ಪಂ. ಅಧ್ಯಕ್ಷ ಅಶೋಕ ಅಂಗಡಿ, ಸದಸ್ಯೆ ಸಂಧ್ಯಾ ಪೋಟೆ, ಮಲ್ಲಿಕಾರ್ಜುನ ಗುಳಶೆಟ್ಟಿ, ಡಾ.ತಾರೀಹಾಳ, ಮಹಾಂತೇಶ ಚಿಕ್ಕಮಠ, ಮಡಿವಾಳಪ್ಪ ನಂದಿಹಳ್ಳಿ, ಮಡಿವಾಳಪ್ಪ ದೇವಲತ್ತಿ ಹಾಗೂ ಪಾರಿಶ್ವಾಡ, ಹಿರೇಮುನವಳ್ಳಿ ದೇವಲತ್ತಿ, ಬೋಗೂರ, ಇಟಗಿ ಮತ್ತು ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು. ಶಿಕ್ಷಕ ವಿವೇಕ ಕುರಗುಂದ ನಿರೂಪಿಸಿದರು, ನ್ಯಾಯವಾದಿ ಆರ್. ಜಿ. ಹಿರೇಮಠ ಸ್ವಾಗತಿಸಿದರು, ವಿಶ್ವನಾಥ ಚಿಕ್ಕಮಠ ವಂದಿಸಿದರು