ಗೋಕಾಕ:ಅನಾಥ ಕುದುರೆಯ ರೋಧನೆ ಕೇಳುವವರ್ಯಾರು!!
ಅನಾಥ ಕುದುರೆಯ ರೋಧನೆ ಕೇಳುವವರ್ಯಾರು!!
*ಅಡಿವೇಶ ಮುಧೋಳ.
ಬೆಟಗೇರಿ ನ 23 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸುಮಾರು ದಿನಗಳಿಂದ ವಾರಸುದಾರರು ಇಲ್ಲದೇ ಕುದುರೆ ಒಂದು ಮುಂಗಾಲು ಮುರಿದುಕೊಂಡು ಭಾರಿ ನೋವಿನೊಂದಿಗೆ ನರಕಯಾತನೆ ಅನುಭವಿಸುತ್ತಿದೆ. ಕುದುರೆಯ ಬಲ ಮುಂಗಾಲದ ಪಾದದ ಹತ್ತಿರ ಕಾಲು ಮುರಿದು, ನೋವು ಮತ್ತು ಗಾಯ ವಾಸಿಯಾಗದ ಕಾರಣ ಕುದುರೆ ಸಾಕಿದ ಯಾರೂ ಅಪರಿಚಿತರು ಗ್ರಾಮದಲ್ಲಿ ಈ ಕುದುರೆ ತಂದು ಬಿಟ್ಟು ಹೋಗಿದ್ದಾರೆ.
ಅನಾಥವಾಗಿರುವ ಈ ಕುದುರೆಗೆ ಭಾರಿ ಪ್ರಮಾಣದ ಮುಂಗಾಲಿಗೆ ಗಾಯವಾಗಿ ಸತತ ರಕ್ತ ಸ್ರಾವವಾಗುತ್ತಿದೆ. ಹೊಟ್ಟೆಪಾಡಿಗಾಗಿ ಕೇವಲ ಮೂರೂ ಕಾಲಿನಿಂದ ಕುಂಟುತ್ತಾ ಅಲೆದಾಡುತ್ತಿದೆ. ಇಲ್ಲಿಯ ಪ್ರಮುಖ ರಸ್ತೆಯಲ್ಲಿ ಬಿದ್ದ, ತಿಪ್ಪೆಗುಂಡಿಗಳಲ್ಲಿ ಎಸೆದ ನಿರುಪಯುಕ್ತ ಮೇವು, ಕಸವೇ ಅನ್ನಕ್ಕೆ ಆಸರೆಯಾಗಿದೆ. ಕುದುರೆ ಕಾಲಿಗೆ ನೋವು, ಗಾಯ ನೋಡಿ ಮರಮರ ಮರಗುತ್ತಾ ಯಾರು ಕುದುರೆಗೆ ವಾರಸುದಾರರು ಇಲ್ಲವೇ ಅಂತಾ ಮಾತನಾಡಿಕೊಳ್ಳುತ್ತಾ ಹೋಗುತ್ತಿದ್ದಾರೆ. ಅನಾಥ ಕುದುರೆಯ ರೋಧನೆ ಕೇಳುವವರ್ಯಾರು ಇಲ್ಲದಂತಾಗಿದೆ.
ಮಾನವ ಮೂಲತ: ಸ್ವಾರ್ಥಿ ಅಂಬುದಕ್ಕೆ ಈ ಕುದರೆಯ ದುಸ್ಥಿತಿಯೇ ತಾಜಾ ಉದಾಹಣೆಯಾಗಿದೆ. ಎಲ್ಲಾ ಸರಿ ಇದ್ದು, ತನ್ನ ನಿತ್ಯದ ಉಪಯೋಗಕ್ಕೆ ಬರುವ ಸಕಲ ಪ್ರಾಣಿಗಳನ್ನ ಮಾತ್ರ ನರಮಾನವ ಪ್ರೀತಿಸಿ, ತುತ್ತು ಅನ್ನ ನೀಡುತ್ತಾನೆ ಅಂಬುವುದಕ್ಕೆ ಈ ಕುದುರೆಗೆ ಒದಗಿಬಂದ ಸ್ಥಿತಿಗತಿಯೇ ಸಾಕ್ಷಿ. ಇಂದು ಕುದರೆಯ ಪರಿಸ್ಥಿತಿ ಯಾರಿಗೆ ಯಾರಿಲ್ಲಾ.! ಆ ದೇವರೇ ಗತಿ..!! ಎಂಬ ಮಾತಿನಂತಾಗಿದೆ.