ಬೆಳಗಾವಿ:ಸಮ್ಮಿಶ್ರ ಸರಕಾರದ ಚೊಚ್ಚಲ ಚಳಿಗಾಲ ಅಧಿವೇಶನಕ್ಕೆ ಸಜ್ಜಾಗುತ್ತಿದೆ ಸುರ್ವಣಸೌಧ
ಸಮ್ಮಿಶ್ರ ಸರಕಾರದ ಚೊಚ್ಚಲ ಚಳಿಗಾಲ ಅಧಿವೇಶನಕ್ಕೆ ಸಜ್ಜಾಗುತ್ತಿದೆ ಸುರ್ವಣಸೌಧ
ಬೆಳಗಾವಿ ನ 27 : ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದ ಚೊಚ್ಚಲ ಚಳಿಗಾಲ ಅಧಿವೇಶನಕ್ಕೆ ಬೆಳಗಾವಿಯ ಸುರ್ವಣಸೌಧ ಸಜ್ಜಾಗುತ್ತಿದೆ
ಡಿ.10 ರಿಂದ ಆರಂಭವಾಗಲಿರುವ ಅಧಿವೇಶನಕ್ಕೆ ಸುವರ್ಣಸೌಧ ಸ್ವಚ್ಛಗೊಳಿಸಲಾಗುತ್ತಿದೆ. ನಿರ್ವಹಣೆ ಕೊರತೆ ಹಾಗೂ ಅಸಮರ್ಪಕ ಬಳಕೆಯ ಕಾರಣ ಸುವರ್ಣಸೌಧದ ಭವ್ಯ ಕಟ್ಟಡದ ಕೆಲ ಭಾಗಗಳಲ್ಲಿ ಪಾಚಿಗಟ್ಟಿತ್ತು. ಹೀಗಾಗಿ ಬಿಳಿ ಆನೆಯಂತಿದ್ದ ಈ ಕಟ್ಟಡ ಕಳೆದ ಹಲವು ದಿನಗಳ ಕಾಲ ಹಸಿರು ಬಣ್ಣಕ್ಕೆ ಪರಿವರ್ತನೆಗೊಂಡಿತ್ತು. ಆದರೆ ನೀರಿನಿಂದ ಉಜ್ಜಿ ಪಾಚಿ ತೆಗೆಯಲಾಗಿದ್ದು, ಇದೀಗ ಮತ್ತೆ ಭವ್ಯ ಕಟ್ಟಡದಂತೆ ಕಂಗೊಳಿಸುತ್ತಿದೆ.
2006ರಲ್ಲೂ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಜತೆಗೆ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿಸಿದ್ದರು. 2012ರಲ್ಲಿ ಲೋಕಾರ್ಪಣೆಗೊಂಡಿರುವ ಬೆಳಗಾವಿಯ ಸುವರ್ಣಸೌಧಲ್ಲಿ ಕಳೆದ 5 ವರ್ಷಗಳಿಂದ ನಿರಂತರ ಅಧಿವೇಶನ ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ಹೆಚ್‍ಡಿಕೆ ಮತ್ತೆ ಸಿಎಂ ಆಗಿದ್ದು, ಅವರೇ ಶಂಕುಸ್ಥಾಪನೆ ನೆರವೇರಿಸಿದ್ದ ಭವ್ಯ ಕಟ್ಟಡದಲ್ಲಿ ಅಧಿವೇಶನ ನಡೆಸಲಿರುವುದು ವಿಶೇಷತೆ ಮೂಡಿಸಿದೆ.
ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಕಳೆದ ವಾರವೇ ಸುವರ್ಣಸೌಧದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಅಧಿವೇಶನಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ಕೂಡ ನೀಡಲಾಗಿದೆ. ಕಳೆದೊಂದು ವಾರದಿಂದ 50ಕ್ಕೂ ಅಧಿಕ ಕಾರ್ಮಿಕರು ಸುವರ್ಣಸೌಧ ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.