ಗೋಕಾಕ:ಶನಿವಾರ ಡಿ.8 ರಿಂದ ಗೋಸಬಾಳ ಮಾರುತಿ ದೇವರ ಕಾರ್ತಿಕೋತ್ಸವ
ಶನಿವಾರ ಡಿ.8 ರಿಂದ ಗೋಸಬಾಳ ಮಾರುತಿ ದೇವರ ಕಾರ್ತಿಕೋತ್ಸವ
ಬೆಟಗೇರಿ ಡಿ 5 :ಸಮೀಪದ ಗೋಸಬಾಳ ಗ್ರಾಮದ ಮಾರುತಿ ದೇವರ ಕಾರ್ತಿಕೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ಶನಿವಾರ ಡಿ.8 ರಿಂದ ರವಿವಾರ ಡಿ.9 ರವರೆಗೆ ನಡೆಯಲಿವೆ.
ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ದಿವ್ಯ ಸಾನಿಧ್ಯದಲ್ಲಿ ಶನಿವಾರ ಡಿ.8ರಂದು ಬೆಳಿಗ್ಗೆ 6ಗಂಟೆಗೆ ಸ್ಥಳೀಯ ಮಾರುತಿ ದೇವರ ದೇವಾಲಯದಲ್ಲಿರುವ ಗದ್ದುಗೆಗೆ ಮಹಾಭಿಷೇಕ ಮಹಾಪೂಜೆ, ಹೋಮ, ಎಲೆಪೂಜೆ, ಪಂಚಾಮೃತಾಭಿಷೇಕ, 11 ಗಂಟೆಗೆ ಮಹಾಪ್ರಸಾದ, ಮಧ್ಯಾಹ್ನ 2ಗಂಟೆಗೆ ಪುರ ಜನರಿಂದ ಪೂಜೆ, ನೈವೇದ್ಯ ಸಮರ್ಪಣೆ, ಸಾಯಂಕಾಲ 5 ಗಂಟೆಗೆ ಗ್ರಾಮದ ಸಕಲ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಗೋಸಬಾಳ ಗ್ರಾಪಂ ಸಿಬ್ಬಂದಿಯವರಿಂದ ಕಾರ್ತಿಕ ದೀಪೋತ್ಸವ, ರಾತ್ರಿ 10ಗಂಟೆಗೆ ರಾಂಪೂರದ ಮಲ್ಲಿಕಾರ್ಜುನ ನಾಟ್ಯ ಸಂಘದವರಿಂದ ರತ್ನ ಮಾಂಗಲ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ರವಿವಾರ ಡಿ.9 ರಂದು ಬೆಳಿಗ್ಗೆ 6ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಪಂಚಾಮೃತಾಭಿಷೇಕ, ಮಹಾಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ ನಂತರ ಮಧ್ಯಾಹ್ನ 2ಗಂಟೆಗೆ ಸ್ಥಳೀಯ ಹಾಗೂ ಸುತ್ತಲಿನ ವಿವಿಧ ಹಳ್ಳಿಗಳ ಕಲಾ ತಂಡದವರಿಂದ ಕರಡಿ ಮಜಲು, ಹಲಿಗೆ ವಾದನ, ಡೊಳ್ಳಿನ ಮಜಲು, ಬ್ಯಾಂಡ್ ತಂಡಗಳು ಸೇರಿದಂತೆ ವಿವಿಧ ಕಲಾ ತಂಡವರಿಂದ ಭಕ್ತಿಯ ಕಲಾ ಪ್ರದರ್ಶನ ಸೇವೆ, ಸಾಯಂಕಾಲ 5.30 ಗಂಟೆಗೆ ಪಲ್ಲಕ್ಕಿ ಉತ್ಸವ, ಕಾರ್ತಿಕೋತ್ಸವ, ಕಾಯಿ ಹಾರಿಸುವದು, ಸಿಹಿಹಂಚುವ ಕಾರ್ಯಕ್ರಮ, ರಾತ್ರಿ 10.30 ಗಂಟೆಗೆ ಸ್ಥಳೀಯ ನವ ತರುಣರಿಂದ ಜಗ ಮೆಚ್ಚಿದ ಜಯಸಿಂಹ ನಾಟಕ ಪ್ರದರ್ಶನಗೊಂಡು ಕಾರ್ತಿಕೋತ್ಸವ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ.
ಸ್ಥಳೀಯ ಹಾಗೂ ಸುತ್ತಲಿನ ಹತ್ತೂರಿನ ಗಣ್ಯರು, ರಾಜಕೀಯ ಮುಖಂಡರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಮಾರುತಿ ದೇವರ ಅಸಂಖ್ಯಾತ ಭಕ್ತರು ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ಮಾರುತಿ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಶಿವಾನಂದ ಬುಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.