ಘಟಪ್ರಭಾ:ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ದಿನಗೂಲಿ ನೌಕರರ ಧರಣಿ
ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ದಿನಗೂಲಿ ನೌಕರರ ಧರಣಿ
ಘಟಪ್ರಭಾ ಡಿ 6 : ಈ ಬಾರಿ ಚಳಿಗಾಲದ ಅಧಿವೇಶನದ ಸಮಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ಹುಬ್ಬಳ್ಳಿಯ ಅಧ್ಯಕ್ಷರಾದ ಡಾ.ಕೆ.ಎಸ್.ಶರ್ಮಾ ಇವರ ನೇತೃತ್ವದಲ್ಲಿ ಮಂಗಳವಾರ ದಿ.11 ರಂದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.
ಮಹಾಮಂಡಳದ ಪ್ರಮುಖ ಬೇಡಿಕೆಗಳಾದ ದಿನಗೂಲಿಯಿಂದ ಖಾಯಂಗೊಂಡ ನೌಕರರು, ಅರ್ಹ ದಿನಗೂಲಿ ನೌಕರರು ಹಾಗೂ ಗುತ್ತಿಗೆ ನೌಕರರಿಗೆ 6ನೇ ವೇತನ ಆಯೋಗದ ಪರಿಷೃತ ವೇತನವನ್ನು 01-04-2018 ರಿಂದಲೇ ಜಾರಿಗೊಳಿಸಬೇಕು. ದಿನಗೂಲಿ ನೌಕರರಿಗೆ ಅಧಿನಿಯಮ 2012 ರ ದಿ.15-02-2013 ರಿಂದ ಸೌಲಭ್ಯಗಳನ್ನು ಹಾಗೂ ಪೆನ್ಷನ್ ಯೋಜನೆ ಜಾರಿಗೆ ತರಬೇಕು. ತುಟ್ಟಿ ಭತ್ತೆ ಹಾಗೂ ಮನೆ ಭಾಡಿಗೆ ಭತ್ತೆಯು ಶೇಕಡ 100 ರಷ್ಟು ಜಾರಿಯಾಗಬೇಕು. ಗಳಿಕೆ ರಜೆಯ ನಗದೀಕರಣ ದೊರೆಯುವಂತೆ ಆದೇಶ ನೀಡಬೇಕು. ಅರ್ಹ ದಿನಗೂಲಿ ನೌಕರರಿಗೆ ಅನುಕಂಪದ ಆಧಾರದ ಮೇಲೆ ಸೌಲಭ್ಯ ವಿಸ್ತರಿಸಬೇಕೆಂಬುದನ್ನು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.
ಮುಂಜಾನೆ 10 ಗಂಟೆ ಪ್ರಾರಂಭಗೊಳ್ಳುವ ಧರಣಿಯಲ್ಲಿ ಅರ್ಹ ದಿನಗೂಲಿ ನೌಕರರು, ಗುತ್ತಿಗೆ ನೌಕರರು ಹಾಗೂ ದಿನಗೂಲಿಯಿಂದ ಖಾಯಂಗೊಂಡ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಲ್ಗೊಳ್ಳಬೇಕೆಂದು ಮಹಾಮಂಡಳದ ಗೋಕಾಕ ತಾಲೂಕ ಘಟಕದ ಅಧ್ಯಕ್ಷರಾದ ಐ.ಎಂ.ಸನದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.