ಮೂಡಲಗಿ:”ಜಪಾನೀ ಪುದೀನ” ಬೆಳೆಯನ್ನು ಬೆಳೆಯುವ ವಿಧಾನಗಳ ಬಗ್ಗೆ ಮಾಹಿತಿ ಕಾರ್ಯಕ್ರಮ
“ಜಪಾನೀ ಪುದೀನ” ಬೆಳೆಯನ್ನು ಬೆಳೆಯುವ ವಿಧಾನಗಳ ಬಗ್ಗೆ ಮಾಹಿತಿ ಕಾರ್ಯಕ್ರಮ
ಮೂಡಲಗಿ ಡಿ 11 : ದಿನನಿತ್ಯ ಬಳಸುವ ವಸ್ತುಗಳಾದ ಟೂತಪೇಸ್ಟ, ನೋವು ನಿವಾರಕ ಜೌಷಧಿಗಳು, ಪಾನ ಮತ್ತು ಚಾಕಲೇಟಗಳಲ್ಲಿ ಬಳಸುವ ಸುಗಂಧ ತೈಲಗಳಿಗೆ ಉಪಯೋಗಿಸುವ ಜಪಾನೀ ಪುದೀನಾವನ್ನು ಕಬ್ಬು ಬೆಳೆಗಾರರು ಕಬ್ಬಿನ ಬೆಳೆಯ 4 ಪೂಟು ಅಥವಾ ಹೆಚ್ಚಿನ ಅಂತರವಿರುವ ಸಾಲುಗಳಲ್ಲಿ ಬೆಳೆಯುವದರಿಂದ ಆರ್ಥಿಕವಾಗಿ ಸಭಲರಾಗಲು ಸಹಾಯಕವಾಗುವದು ಎಂದು ಅರಬಾಂವಿ ಕಿ.ರಾ.ಚ.ತೋ ಮಹಾವಿದ್ಯಾಲಯ ಪ್ರಾಧ್ಯಾಪಕ ಶ್ರೀಕಂಠಪ್ರಸಾದ ತಿಳಿಸಿದರು.
ಅವರು ಸಮೀಪದ ಹಳ್ಳೂರ ಗ್ರಾಮದಲ್ಲಿ ಅರಬಾಂವಿ ಕಿತ್ತೂರು ರಾಣಿ ಚೆನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯದ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಆಶ್ರಯದಲ್ಲಿ ಸೋಮವಾರ ಜರುಗಿದ ಜಪಾನೀ ಪುದೀನ” ಬೆಳೆಯನ್ನು ಬೆಳೆಯುವ ವಿಧಾನಗಳ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಪಾನೀ ಪುದೀನಾ ಬೆಳೆಯನ್ನು ಭಾರತದಲ್ಲಿಯೇ ಹೆಚ್ಚು ಬೆಳೆಯುತ್ತಿದ್ದು, ಉತ್ತರಪ್ರದೇಶ, ಪಂಜಾಬ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಬೇಸಿಗೆ ಬೆಳೆಯಾಗಿ ಬೆಳೆಯುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬೀಳುವಂತಹ ಸಮಯ ಬಿಟ್ಟು ಎಲ್ಲಾ ತಿಂಗಳುಗಳಲ್ಲಿಯೂ ಈ ಬೆಳೆಯನ್ನು ಬೆಳೆಯಬಹುದೆಂದು ತಿಳಿಸಿದರು. ಈ ಬೆಳೆಯನ್ನು ಬೇರಿನ ಕಾಂಡಗಳ ತುಂಡಗಳಿಂದ ಸಸ್ಯಾಭಿವೃದ್ಧಿ ಮಾಡಿ, 1 ಎಕರೆಗೆ 150 ಕೆ.ಜಿ ಬೇರುಕಾಂಡಗಳನ್ನು, 45 ಸೆಂ.ಮೀ ಸಾಲಿಂದ ಸಾಲಿಗೆ ಮತ್ತು 30 ಸೆಂ.ಮೀ ಗಿಡದಿಂದ ಗಿಡಕ್ಕೆ ಅಂತರ ಕೊಟ್ಟು ನಾಟಿ ಮಾಡಬೇಕೆಂದು ಮಾಹಿತಿ ನೀಡಿದರು. ನಾಟಿ ಮಾಡಿದ 100 ರಿಂದ 120 ದಿನಗಳಲ್ಲಿ ಸೊಪ್ಪನ್ನು ಕಟಾವು ಮಾಡಿ, 3 ರಿಂದ 4 ಗಂಟೆ ಒಣಗಿಸಿ ಭಟ್ಟಿ ಇಳಿಸಬೇಕು. 1 ಎಕರೆಗೆ 12 ರಿಂದ 15 ಟನ್ ಹಸಿ ಸೊಪ್ಪು ದೊರಕಿ ಅದರಿಂದ 65 ರಿಂದ 75 ಕೆ.ಜಿ ಸುಗಂಧ ತೈಲ ಎಣ್ಣೆ ನಿರೀಕ್ಷಿಸಬಹುದು ಮತ್ತು ಎಕರೆಗೆ 40 ರಿಂದ 45 ಸಾವಿರ ನಿವ್ವಳ ಆದಾಯ ಗಳಿಸಬಹುದೆಂದು ತಿಳಿಸಿದರು.
ಕಿತ್ತೂರು ರಾಣಿ ಚೆನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ “ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ”ಯಡಿಯಲ್ಲಿ ಭಟ್ಟಿ ಇಳಿಸುವ ಯಂತ್ರದ ಸೌಲಭ್ಯ ಇರುವದರಿಂದ ರೈತರು ಸುಗಂಧ ತೈಲ ಎಣ್ಣೆಯನ್ನು ತೆಗೆಯಲು ಬಳಸಿಕೊಳ್ಳಬಹುದೆಂದು ತಿಳಿಸಿದರು.
ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮುಖ್ಯಸ್ಥ ಡಾ. ಕಾಂತರಾಜು ವಿ ಮಾತನಾಡಿ, ರೈತರು ಜಪಾನೀ ಪುದೀನಾ ಬೆಳೆಯನ್ನು ತಾಂತ್ರಿಕವಾಗಿ ಬೆಳೆಯ ಇರುವ ಸೌಲಭ್ಯವನ್ನು ಪಡೆದುಕೊಂಡು ಹೆಚ್ಚಿನ ಆದಾಯ ಗಳಿಸಬೇಕೆಂದು ತಿಳಿಸಿದರು. ಬೆಳಗಾವಿ ಜಿಲ್ಲೆ ವಾತಾವರಣ ಈ ಬೆಳೆಗೆ ಸೂಕ್ತವಾಗಿರುವುದರಿಂದ ಮತ್ತು ಕಬ್ಬಿನ ಬೆಳೆಯಲ್ಲಿ ಅಂತರ ಬೆಳೆಯಾಗಿ ಅಥವಾ ಏಕ ಬೆಳೆಯಾಗಿ ಬೆಳೆಯಲು ಅತೀ ಸೂಕ್ತವಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹಳ್ಳೂರು ಗ್ರಾಮದ ಪ್ರಗತಿಪರ ರೈತರಾದ ಲಕ್ಷಣ ಚಬ್ಬಿ, ರಾಮಪ್ಪಾ ಚಬ್ಬಿ, ಲಕ್ಷಣ ಸಪ್ತಸಾಗರ, ಮಹಾವೀರ ಚಬ್ಬಿ ಮತ್ತು ಸುಮಾರು 40 ಜನ ರೈತರು ಭಾಗವಹಿಸಿದ್ದರು.