ಗೋಕಾಕ:7 ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಧರಣಿ ಸತ್ಯಾಗ್ರಹ
7 ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಧರಣಿ ಸತ್ಯಾಗ್ರಹ
ಬೆಟಗೇರಿ ಡಿ 28 : ಗ್ರಾಮ ಪಂಚಾಯಿತಿಯಿಂದ ನೂತನವಾಗಿ ಮೇಲ್ದರ್ಜೆಗೇರಿದ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 10 ಜನ ಪೌರಕಾರ್ಮಿಕ ಸಿಬ್ಬಂದಿಯವರ ಬಾಕಿ ಉಳಿದಿರುವ ವೇತನ ಪಾವತಿಸುವಂತೆ ಒತ್ತಾಯಿಸಿ ಇಲ್ಲಿಯ ಸಿಬ್ಬಂದಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಗುರುವಾರ ಡಿ.27ಕ್ಕೆ 7 ದಿನ ಗತಿಸಿದರೂ ಸರ್ಕಾರ ಯಾವುದೇ ಪ್ರತಿಕ್ರೀಯೆ ನೀಡದಿರುವದು ವಿಪರ್ಯಾಸ ಸಂಗತಿಯಾಗಿದೆ. ಸರ್ಕಾರ ಕೂಡಲೇ ಬಡಕಾರ್ಮಿಕರ ಈ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಇಲ್ಲಿಯ ಪೌರಕಾರ್ಮಿಕ ಸಿಬ್ಬಂದಿ ಮಾರುತಿ ಇಮ್ಮಡೇರ ಮಾತನಾಡಿ, ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡರು ಸರ್ಕಾರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಂದಾಗದಿರುವದು ಶೋಚನೀಯ ಸಂಗತಿಯಾಗಿದೆ. ಕಳೆದ 10 ತಿಂಗಳಿಂದ ವೇತನ ಸಿಗುತ್ತಿಲ್ಲ, ಪಟ್ಟಣ ಪಂಚಾಯಿತಿ ವೇತನ ನಂಬಿ ಇಲ್ಲಿಯ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಇಂದು ವೇತನವಿಲ್ಲದೇ ನಿತ್ಯ ಕುಟುಂಬ ನಿರ್ವಹಣೆಯ ಜೀವನ ಸಾಗಿಸುವದು ಕಷ್ಟಕರವಾಗಿದೆ. ಹಾಗಾಗಿ ಕೂಡಲೆ ಸರ್ಕಾರ ಬಾಕಿ ಉಳಿಸಿಕೊಂಡಿರುವ ವೇತನವನ್ನು ಪಾವತಿ ಮಾಡಬೇಕೆಂದು ಎಂದು ಪಟ್ಟಣದ ಕಾರ್ಮಿಕರು ಆಗ್ರಹಿಸಿದರು.
ಯಲ್ಲಪ್ಪ ಸುತ್ತಾನಪುರ, ಮಹಾದೇವ ತಳವಾರ, ಸದಾಶಿವ ತೆಳಗಡೆ, ಬಾಳವ್ವ ತಳವಾರ, ಲಕ್ಕವ್ವ ತಳಗಡೆ, ಸುಂದರ ಮರಗನ್ನವರ, ಕೆಂಚಪ್ಪ ಕಳಸನ್ನವರ, ಮಾರುತಿ ತಳವಾರ, ಸುನಿಲ ಮರಗನ್ನವರ ಸೇರಿದಂತೆ ಸ್ಥಳೀಯ ಪಟ್ಟಣ ಪಂಚಾಯಿತಿ ಪೌರಕಾರ್ಮಿಕ ಸಿಬ್ಬಂದಿ, ಇತರರು ಇದ್ದರು.