RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಶಿಕ್ಷಕರಿಂದ ಪಾಠ..!

ಗೋಕಾಕ:ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಶಿಕ್ಷಕರಿಂದ ಪಾಠ..! 

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಶಿಕ್ಷಕರಿಂದ ಪಾಠ..!

ಗುರೂಜಿ ಬಂದರು ಗುರುವಾರ ವಿನೂತನ ಕಾರ್ಯಕ್ರಮ ಜಾರಿ * ವಿದ್ಯಾರ್ಥಿಗಳ ಮೇಲೆ ಶಿಕ್ಷಕರ ವಿಶೇಷ ಗಮನ

*ಅಡಿವೇಶ ಮುಧೋಳ.

ಬೆಟಗೇರಿ ಜ 5 : ವಿದ್ಯಾರ್ಥಿಗಳ ಮೇಲೆ ವಿಶೇಷ ಗಮನ…ಮನೆಗಳಿಗೆ ತೆರಳಿ ಶಿಕ್ಷಕರಿಂದ ಪಾಠ ಪ್ರವಚನ…ಇದು ಎಲ್ಲಿ ಅನ್ನುತ್ತೀರಾ.! ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ, ಶಿಕ್ಷಕರು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಗುರೂಜಿ ಬಂದರು ಗುರುವಾರ ಎಂಬ ವಿನೂತನ ವಿಶೇಷ ಕಾರ್ಯಕ್ರಮ ಇದು…
ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಇಲ್ಲಿಯ ಪ್ರೌಢ ಶಾಲೆಯ 10ನೇ ವರ್ಗದ ವಿದ್ಯಾರ್ಥಿಗಳ ಮೇಲೆ ಶಿಕ್ಷಕವೃಂದ ವಿಶೇಷ ಗಮನ ಹರಿಸುತ್ತಿದ್ದಾರೆ. ಪ್ರತಿ ಗುರುವಾರ ಶಾಲಾವಧಿ ನಂತರ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಹೆಚ್ಚಿನ ತರಬೇತಿ ನೀಡಲು ಆರಂಭಿಸಿದ್ದಾರೆ.
ಗುರುವಾರ ಜ.3 ರಂದು ಶಾಲೆಯ ವಿದ್ಯಾರ್ಥಿಗಳಾದ ಜಯಶ್ರೀ ಹೊಸಟ್ಟಿ, ರಾಜಶ್ರೀ ಹೊಸಟ್ಟಿ, ಪರಮಾನಂದ ಬಿಳ್ಯಾಡಿ, ಶೃತಿ ದೇವಮಾನೆ ಸೇರಿದಂತೆ ಹಲವಾರು ಜನ ವಿದ್ಯಾರ್ಥಿಗಳ ಮನೆಗೆ ತೆರಳಿ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ, ಗಣಿತ ವಿಷಯ ಶಿಕ್ಷಕ ಮಂಜುನಾಥ ಹತ್ತಿ, ಎ.ಬಿ.ತಾಂವಶಿ, ವೀಣಾ ಹತ್ತಿ, ಮಲ್ಹಾರಿ ಪೋಳ ಅವರು ವಿದ್ಯಾರ್ಥಿಗಳ ಮನೆಗಳಲ್ಲಿಯೇ ಸುಮಾರು 1 ಗಂಟೆಗಳ ಕಾಲ ಉಳಿದು ಗಣಿತ ವಿಷಯದಲ್ಲಿರುವ ಕಠಿಣ ಪಾಠಗಳ, ಪರೀಕ್ಷೆ ಬರೆಯುವ ವಿಧಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ಹೇಳಿಕೊಟ್ಟಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತಿ ಗುರುವಾರಕ್ಕೂಮ್ಮೆ ಶಿಕ್ಷಕರು ಮನೆ ಮನೆಗೆ ತಮ್ಮ ವಿಷಯದ ಕುರಿತು ಪಾಠ ಪ್ರವಚನ ಹೇಳಿಕೊಡುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬಗ್ಗೆ ಮಕ್ಕಳಲ್ಲಿ ಅರಿವು, ಪರೀಕ್ಷೆಯ ಭಯ ಮುಕ್ತ ವಾತಾವರಣ ನಿರ್ಮಾಣ, ಮಕ್ಕಳ ಕಲಿಕೆಗೆ ಬೇಕಾದ ಪಾಠೋಪಕರಣಗಳ ಸಮಸ್ಯೆಗಳನ್ನು ಅರಿತು ಅಂತ ವಿದ್ಯಾರ್ಥಿಗಳಿಗೆ ಸ್ಥಳೀಯ ಶಿಕ್ಷಣ ಪ್ರೇಮಿಗಳ ಮೂಲಕ ಸಹಾಯ, ಸಹಕಾರ ಪೂರೈಸಲಾಗುತ್ತಿದೆ. ಎಂದು ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ತಿಳಿಸಿದ್ದಾರೆ.
“ಗುರೂಜಿ ಬಂದರು ಗುರುವಾರ ಎಂಬ ವಿನೂತನ ಕಾರ್ಯಕ್ರಮ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಪ್ರೇರಣಾ ಪೂರಕವಾಗಿದೆ. ವಿದ್ಯಾರ್ಥಿಗಳ ಮನೆಗೆ ಶಿಕ್ಷಕರು ಹೊಗುವುದರಿಂದ ಮಕ್ಕಳ ಕಲಿಕೆಗೆ ಮತ್ತಷ್ಟು ಪ್ರೇರಣೆ ಜೊತೆಗೆ ವಿದ್ಯಾರ್ಥಿ, ಪಾಲಕರು ಹಾಗೂ ಶಿಕ್ಷಕರ ನಡುವಿನ ಅವಿನಾಭಾವ ಸಂಬಂಧವೂ ಸಹ ಬೆಸೆಯುತ್ತದೆ.
* ಅಜೀತ ಮನ್ನಿಕೇರಿ. ಬಿಇಒ ಮೂಡಲಗಿ ವಲಯ.

“ವಿದ್ಯಾರ್ಥಿಗಳ ಜೀವನದಲ್ಲಿ 10ನೇ ತರಗತಿ ಬಹುಮುಖ್ಯವಾದ ಘಟ್ಟ. ವಿದ್ಯಾರ್ಥಿಗಳಿಗೆ ಈ ವಿನೂತನ ವಿಶೇಷ ಕಾರ್ಯಕ್ರಮದ ಮೂಲಕ ಕಲಿಕೆಗೆ ಪ್ರೇರಣೆ ನೀಡುತ್ತಿರುವ ಸ್ಥಳೀಯ ಪ್ರೌಢ ಶಾಲೆಯ ಶಿಕ್ಷಕರ ಸೇವೆ ಶ್ಲಾಘನೀಯವಾಗಿದೆ.

* ಕುತುಬುಸಾಬ ಮಿರ್ಜಾನಾಯ್ಕ. ಅಧ್ಯಕ್ಷರು ಎಸ್‍ಡಿಎಮ್‍ಸಿ ವಿವಿಡಿ ಸ.ಪ್ರೌ.ಶಾಲೆ ಬೆಟಗೇರಿ, ತಾ.ಗೋಕಾಕ.

Related posts: