RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಭಾರತ ದೇಶವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ

ಗೋಕಾಕ:ಭಾರತ ದೇಶವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ 

ಭಾರತ ದೇಶವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ
ಜನೇವರಿ-25 ರಾಷ್ಟ್ರೀಯ ಮತದಾರರ ದಿನದ ನಿಮಿತ್ತ ಈ ಲೇಖನ

ಭಾರತ ದೇಶವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಭಾರತಕ್ಕೆ ಯಾವ ಬಗೆಯ ಸರಕಾರ ಸೂಕ್ತವಾಗಬಲ್ಲದು ಎಂಬುದರ ಕುರಿತು ಸಂವಿಧಾನ ರಚನಾ ಸಭೆಯಲ್ಲಿ ಚರ್ಚೆ ಸಮಾಲೋಚನೆ ನಡೆಯುತ್ತಿರುವಾಗ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ ರವರು ಅನಾದಿ ಕಾಲದಿಂದ ಪರಕೀಯರ ಗುಲಾಮಗಿರಿಗೆ ಗುರಿಯಾಗಿದ್ದ ಭಾರತಕ್ಕೆ ಜನಾಭಿಪ್ರಾಯ, ಜನತಾ ಪರಮಾಧಿಕಾರ ಬಿಂಬಿಸುವ ಪ್ರಜಾಪ್ರಭುತ್ವವೇ ಸೂಕ್ತ ಎಂದು ಪ್ರತಿಪಾದಿಸಿದ ಪರಿಣಾಮ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳಲಾಗಿದೆ.
ಆದರೆ ದುರಂತ ನೋಡಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡು ಸರಿ ಸುಮಾರು 69 ವರ್ಷಗಳು ಗತಿಸಿದರೂ ಎಷ್ಟರ ಮಟ್ಟಿಗೆ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಿತ್ತೊ ಅಷ್ಟು ಯಶಸ್ವಿಯಾಗಿಲ್ಲ ಎನ್ನಬಹುದು. ಉದಾಹರಣೆಗೆ ಒಂದು ಗ್ರಾಮ ಪಂಚಾಯತಿಯಿಂದ ಲೋಕಸಭೆ ಚುನಾವಣೆಗಳಲ್ಲಿ ಮತದಾನದ ಸರಾಸರಿ ಪ್ರ್ರಮಾಣ ಪ್ರತಿಶತ 40-60 ಆಸುಪಾಸಿನಲ್ಲಿರುತ್ತದೆ. ಅದಿರಲಿ ರಾಷ್ಟ್ರಪತಿ-ಉಪರಾಷ್ಟ್ರಪತಿ-ರಾಜ್ಯಸಭೆ ಚುನಾವಣೆಗಳ ಮತದಾರರಾಗಿರುವ ನಮ್ಮ ಜನಪ್ರತಿನಿಧಿಗಳು ಮತದಾನದಲ್ಲಿ ಶತಪ್ರತಿಶತ ಪಾಲ್ಗೊಳ್ಳುವುದಿಲ್ಲ, ಪಾಲ್ಗೊಂಡರೂ ಮತ ಕುಲಗೆಡಿಸುವದಲ್ಲದೆ ಆಮಿಷಗಳಿಗೆ ಬಲಿಯಾಗಿ ಸತ್ಯ-ನಿಷ್ಠೆಯಿಂದ ಮತದಾನ ಮಾಡದಿರುವದು ವಿಷಾದಕರ.
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗದಿರಲು ಮುಖ್ಯ ಕಾರಣ ಸರಿಯಾದ, ಸೂಕ್ತ, ಪ್ರ್ರಾಮಾಣಿಕ ಮತದಾನವಾಗದಿರುವುದು. ಇದರ ಹಿನ್ನೆಲೆ ಅಭ್ಯಸಿಸಿದಾಗ ವಿವಿಧ ಬಗೆಯ ಅಸಮಾನತೆ ಅನಕ್ಷರತೆ, ಕೋಮುವಾದ, ಜಾತಿಯತೆ, ಧರ್ಮಾಂಧತೆ, ಪ್ರಾದೇಶಿಕವಾದ, ಪ್ರಾದೇಶಿಕ ಅಸಮತೋಲನ, ಭ್ರಷ್ಟಾಚಾರ ಬಹು ಮುಖ್ಯವಾಗಿ ರಾಜಕೀಯ ಪ್ರಜ್ಞೆ ತಿಳುವಳಿಕೆ ಇಲ್ಲದಿರುವದು ಕಂಡು ಬರುತ್ತವೆ.
ಪ್ರಜಾಪ್ರಭುತ್ವದ ಒಂದು ಕೊಡುಗೆ ಮತದಾನದ ಹಕ್ಕು. ಇದು ಒಂದು ಬ್ರಹ್ಮಾಸ್ತ್ರ ಏಕಂದರೆ ಬ್ಯಾಲೆಟ್ ಇಸ್ ಸ್ಟ್ರಾಂಗರ್ ದ್ಯಾನ್ ಬುಲೆಟ್ ಎನ್ನುತ್ತಾರೆ. ಅಲ್ಲದೆ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ದಾನಗಳಲ್ಲಿ ಯಾವ ದಾನ ಶ್ರೇಷ್ಟ? ಎಂದು ಕೇಳಿದರೆ ‘ಮತದಾನ’ ಎನ್ನುವರು ಏಕೆಂದರೆ ಇದು ಸಮರ್ಥ-ಸಭ್ಯ-ಪ್ರ್ರಾಮಾಣಿಕ ಪ್ರತಿನಿಧಿಗಳನ್ನು ಚುನಾಯಿಸಿ ಆ ಮೂಲಕ ರಾಷ್ಟ್ರದ ಭವಿಷ್ಯದ ಗತಿಯನ್ನು ಬದಲಾಯಿಸಬಲ್ಲ ಸಾಧನವಾಗಿದೆ.
ಮತಾಧಿಕಾರ ಎನ್ನುವದು ‘ಪುಗಸಟ್ಟೆ ಪುನಗಲ್ಲು ಅಲ್ಲ’ ಇದು ಅತ್ಯಂತ ಶ್ರೇಷ್ಟ ಪವಿತ್ರವಾಗಿದ್ದು ಇದರ ಮಹತ್ವ ಅರಿಯುವ ಅವಶ್ಯಕತೆಯಿದೆ. ಕೆಲವು ರಾಜಕೀಯ ಚಿಂತಕರುಗಳ ಪ್ರಕಾರ ಮತಾಧಿಕಾರವು ಮಾಣಿಕ್ಯದಂತಿದ್ದು ಬೇಕಾಬಿಟ್ಟಿಯಾಗಿ ಎಲ್ಲರಿಗೂ ನೀಡದೆ ನಿರ್ದಿಷ್ಟ ಅರ್ಹತೆ-ಕ್ಷಮತೆಯಿದ್ದವರಿಗೆ ಮಾತ್ರ ನೀಡತಕ್ಕದ್ದು ಎನ್ನುತ್ತಾರೆ. ಆದರೆ ಇನ್ನೊಂದು ವರ್ಗದವರು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವ ಸಾಕಾರಗೊಳ್ಳಬೇಕಾದರೆ ಯಾವುದೇ ಭೇದ-ಭಾವಗಳಿಲ್ಲದೆ ಪ್ರತಿಯೊಬ್ಬ ವಯಸ್ಕ ಪ್ರಜೆಗೆ ಮತಾಧಿಕಾರ ನೀಡಬೇಕು ಎಂದು ವಾದಿಸುತ್ತಾರೆ. ಆ ನಿಟ್ಟಿನಲ್ಲಿ ನಮ್ಮ ಭವ್ಯ ಸಂವಿಧಾನವು ಸರ್ವೆಜನಾಃ ಸುಖಿನೊ ಭüವಂತುಃ ಎಂಬ ಉಕ್ತಿಯನ್ನು ನಿಜಗೊಳಿಸುವದಕ್ಕಾಗಿ ಯಾವುದೇ ಕೃತಕ ತಾರತಮ್ಯಗಳಿಲ್ಲದೆ ಸಾರ್ವತ್ರಿಕ ವಯಸ್ಕ ಮತಾಧಿಕಾರ ಒದಗಿಸಿರುತ್ತದೆ. ಆದರೆ ಮೂಲಭೂತ ಪ್ರಶ್ನೆ ಏನೆಂದರೆ ನಾವಿಂದು ಎಷ್ಟರ ಮಟ್ಟಿಗೆ ನಮ್ಮ ಮತದ ಮೌಲ್ಯವನ್ನು ಅರಿತಿದ್ದೇವೆ? ಎಷ್ಟು ಜನ ವಿದ್ಯಾವಂತರೂ, ನೌಕರದಾರರೂ ಸೇರಿದಂತೆ ಯಾವುದೇ ಕ್ಷುಲ್ಲಕ ಆಮಿಷಗಳಿಗೆ ಬಲಿಯಾಗದೆ ಕಡ್ಡಾಯವಾಗಿ ಮತ ಚಲಾಯಿಸುತ್ತಿದ್ದೇವೆ? ಎಂಬುದರ ಕುರಿತು ಆತ್ಮ ವಿಮರ್ಶೆ ಮಾಡಿಕೊಳ್ಳುವ ಅವಶ್ಯಕತೆಯಿದೆ.
ಸಾಕಷ್ಟು ಜನರು ಗೊಣಗುವ ಒಂದು ಮಾತು ಯಾರಿಗೆ ಮತ ಹಾಕಿದರೆ ಏನು ಪ್ರಯೋಜನ? ಶ್ರೀರಾಮಚಂದ್ರನ ಆಡಳಿತ ಬಂದರೂ ರಾಗಿ ಬೀಸುವದು ತಪ್ಪುವದಿಲ್ಲ. ಹಾಗಂತ ನಾವು ಸುಮ್ಮನಿರಬೇಕೆ? ಸಮಸ್ತ ರಾಷ್ಟ್ರವನ್ನು ಒಂದಾಗಿಸಿಕೊಂಡು ಸರ್ವರಿಗೂ ಲೇಸನ್ನೆ ಬಯಸುವ ರಾಜಕೀಯ ಪಕ್ಷ-ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಸದವಕಾಶವನ್ನು ನಮಗೆ ಮತದಾನದ ಹಕ್ಕು ಒದಗಿಸಿರುವಾಗ ನಾವು ಅದನ್ನು ಸದುಪಯೋಗ ಪಡಿಸಿಕೊಳ್ಳುವ ಅವಶ್ಯಕತೆವಿದೆ.
ಅಸಮರ್ಥ ಅದಕ್ಷ ಭ್ರಷ್ಟ ಸರಕಾರ ರಚನೆಯಾಗಲು ಕಾರಣಕರ್ತರು ನಾವಲ್ಲವೇ? ಬೇಸರದ ಸಂಗತಿ ಎಂದರೆ ಧರ್ಮ-ಕೋಮು-ಜಾತಿ-ಗಡಿ-ಜಲ-ಭಾಷೆ ವಿಷಯಗಳ ಮೇಲೆ ರಾಜಕಾರಣ ಮಾಡುವ, ಕಳ್ಳಭಟ್ಟಿಧಂದೆ, ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಪಾಲಾಗಿರುವ ಶಾಸನೀಯ-ಸಭೆ ಸಮಾರಂಭಗಳಲ್ಲಿ ಮೋಬೈಲ್ ವೀಕ್ಷಿಸುವ, ಗೊರಕೆ ಹೊಡೆಯುವ, ದೀರ್ಘ ಕಾಲದವರೆಗೆ ಅಧಿವೇಶನಗಳಲ್ಲಿ ಗೈರು ಹಾಜರು ಇರುವ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ಅಂತಹವರಿಂದ ಏನನ್ನು ಅಪೇಕ್ಷಿಸಲು ಸಾಧ್ಯ? ಈ ಸಂದರ್ಭದಲ್ಲಿ ರವಿಚಂದ್ರನ್ ಅಭಿನಯದ ಅಭಿಮನ್ಯು ಚಲನಚಿತ್ರದ “ಓಟು ಕೊಟ್ಟವರು ನೀವೇ ತಾನೆ? ಏಟು ತಿನ್ನುವವರು ನೀವೇ ತಾನೆ?” ಎಂಬ ಹಾಡು ನಮ್ಮನ್ನು ಕುಟುಕುತ್ತದೆ.
ಖ್ಯಾತ ರಾಜಕೀಯ ಚಿಂತಕನಾದ ಜಾನ್ ಸ್ಟುವರ್ಟ ಮಿಲ್ ರವರು ಮತದಾರನು ಮತದಾನವನ್ನು ಒಂದು ಸಾಮಾಜಿಕ-ಧಾರ್ಮಿಕ-ನೈತಿಕ ಕರ್ತವ್ಯವೆಂದು ಭಾವಿಸಿ ಅತ್ಯುತ್ತಮ, ಸುಸಂಸ್ಕøತ, ಸಭ್ಯ, ಸಂಸದೀಯ ಪಟುಗಳನ್ನು ಆಯ್ಕೆ ಮಾಡಬೇಕೆಂದು ತನ್ನ ಗ್ರಂಥವಾದ, ‘ರಿಪ್ರೆಸೆಂಟೆಟಿವ್ ಗವರ್ನಮೆಂಟ್’ ದಲ್ಲಿ ತಿಳಿಸಿರುತ್ತಾರೆ. ಪ್ರಜಾಪ್ರಭುತ್ವದ ಮೇಲಾಗುತ್ತಿರುವ ಬಹುದೊಡ್ಡ ಅವಮಾನ, ಆಘಾತ ಎಂದರೆ ಮತ ಬ್ಯಾಂಕ್ ರಾಜಕಾರಣ (ಗಿoಣe ಃಚಿಟಿಞ Poಟiಣiಛಿs) ಇಂದು ಮತದಾರನನ್ನು ಓರ್ವ ಮತದಾರನೆಂದು ಪರಿಗಣಿಸದೇ ಆತನೊಬ್ಬ ನಿರ್ದಿಷ್ಟ ಧರ್ಮ-ಕೋಮು-ಜಾತಿ ಅಥವಾ ಭಾಷೆಗೆ ಸೇರಿದವನೆಂದು ತಿಳಿಯುವದಾಗಿದೆ, ಹಾಗೂ ನಿರ್ದಿಷ್ಟ ಸಮುದಾಯದವರ ಮತಗಳ ಅವಶ್ಯಕತೆ ನಮಗಿಲ್ಲ ಎನ್ನುವುದು ಆಘಾತಕಾರಿ. ಇದು ರಾಷ್ಟ್ರದ ಸಮಗ್ರತೆ, ಏಕತೆ, ಸುರಕ್ಷೆ ಹಾಗೂ ಬಹಳ ಮುಖ್ಯವಾಗಿ ಸಮ್ಮಿಶ್ರ ಸಂಸ್ಕøತಿಯ ಭಾರತ ದೇಶಕ್ಕೆ ಮಾರಕವಾಗಬಲ್ಲದು.
ಮತದಾರರು ಪ್ರಜಾಪ್ರಭುತ್ವದ, ಚುನಾವಣೆಯ, ಕೇಂದ್ರ ಪಾತ್ರಧಾರಿಗಳು. ಪ್ರಜಾಪ್ರಭುತ್ವ ಹಾಗೂ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾರರ ಪಾತ್ರ ನಿರ್ಣಾಯಕವಾಗಿರುತ್ತದೆ. ಪ್ರಜಾಪ್ರಭುತ್ವದ ಯಶಸ್ಸು, ವಿಫಲತೆಗಳು ಮುಖ್ಯವಾಗಿ ಪ್ರಜೆಗಳು ತಮ್ಮ ಮತಾಧಿಕಾರವನ್ನು ಎಷ್ಟು ಸಕ್ರಿಯವಾಗಿ ಹಾಗೂ ಸಕಾರಾತ್ಮಕವಾಗಿ ನಿರ್ವಹಿಸುತ್ತಾರೆ ಎಂಬುದರ ಮೇಲೆ ಅವಲಂಬಿತರವಿರುತ್ತದೆ ವಿನಃ ವ್ಯಕ್ತಿಗತ ಇಚ್ಚೆ ಅಥವಾ ಕಾಮನೆಗಳಿಂದಲ್ಲ. ಪ್ರತಿಯೊಬ್ಬ ಪ್ರಜೆ ಮತದಾನವನ್ನು ಕಡ್ಡಾಯವಾಗಿ ಚಲಾಯಿಸಬೇಕು. ಇಲ್ಲದಿದ್ದರೆ ಆತನಿಗೆ ಯಾವುದೇ ಸರಕಾರಿ ಸೌಲಭ್ಯ, ರಿಯಾಯತಿ ಪ್ರಶಸ್ತಿ ನೀಡಬಾರದು. ಈ ನಿಟ್ಟಿನಲ್ಲಿ ಕಾನೂನು ರಚನೆಯಾಗಬೇಕೆಂಬ ಚಿಂತನೆ ನಡೆಯುತ್ತಿದೆ. ಆದರೆ ಪ್ರಜ್ಞಾವಂತ ಪ್ರಜೆಗಳು ಮತದಾನವು ತಮ್ಮ ಮೂಲಭೂತ ಕರ್ತವ್ಯವೆಂಬುವುದನ್ನು ಅರಿತು ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದ ಮತ ಚಲಾಯಿಸುವಂತಾಗಬೇಕು. ಒಂದು ವೇಳೆ ಯಾವುದೇ ಸೂಕ್ತ ಅಭ್ಯರ್ಥಿ ಕಂಡು ಬರದಿದ್ದರೆ ಇ.ವಿ.ಎಂ.ದಲ್ಲಿ “ನೋಟಾ” ಎಂದರೆ ‘ಈ ಮೇಲಿನವರಾರೂ ನನ್ನ ಆಯ್ಕೆ ಅಲ್ಲ’ ಎಂಬ ಗುಂಡಿಯನ್ನು ಒತ್ತಿಯಾದರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಂತಾಗಲಿ ದೇಶವನ್ನು ಉನ್ನತಿ ಅಥವಾ ಅವನತಿಯಡೆಗೆ ಮುನ್ನಡೆಸುವ ಅಧಿಕಾರ ಚುಕ್ಕಾಣೆಯನ್ನು ರಾಜಕೀಯ ಪಕ್ಷ ಹಾಗೂ ಪ್ರತಿನಿಧಿಗಳಿಗೆ ಮತದಾನದ ಮೂಲಕ ನೀಡುವುದಕ್ಕಿಂತ ಮುಂಚೆ ಮತದಾರರು ಮಾನಸಿಕವಾಗಿ, ನೈತಿಕವಾಗಿ, ಸಿದ್ದಗೊಂಡು ರಾಜಕೀಯ ಪಕ್ಷಗಳ, ಅಭ್ಯರ್ಥಿಗಳ ತತ್ವ, ಸಿದ್ಧಾಂತ , ಬದ್ಧತೆಗಳನ್ನು ಸಮಗ್ರವಾಗಿ ಅಭ್ಯಸಿಸಿ ಇ.ವಿ.ಎಂ. ಗಳ ಮೂಲಕ ಮತ ಚಲಾಯಿಸುವ ವಿಧಾನವನ್ನು ತಿಳಿದುಕೊಂಡು ನಿಷ್ಕಲ್ಮಶ – ನಿಷ್ಕಪಟ ಮನಸ್ಸಿನಿಂದ ಮತ ಚಲಾಯಿಸುವಂತಾಗಲಿ.
ಪರಿಣಾಮಕಾರಿ ಪ್ರಜಾಪ್ರಭುತ್ವ, ಚುನಾವಣೆಗೆ ಅರ್ಹ ಮತದಾರರು ಪೂರ್ಣ ಚುನಾವಣಾ ಭಾಗೀತ್ವದ ಮೂಲಕ ಪ್ರಜಾಪ್ರಭುತ್ವದ ಆಡಳಿತ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಾಹಿತಿ, ಪ್ರೇರಣೆ ಮತ್ತು ಸಹಾಯಹಸ್ತ ದೊರಕುವ ಪರಿಸರದ ಅಗತ್ಯವಿದೆ. ದೇಶದ ಹಲವಾರು ಭಾಗಗಳಲ್ಲಿ ಮಹಿಳೆಯರು, ನಗರ ಪ್ರದೇಶದ ಜನಸಂಖ್ಯೆ, ಹಿಂದುಳಿದ ವರ್ಗದವರು ಮತ್ತು ಇತರರ ಭಾಗೀತ್ವದಲ್ಲಿ ಹಲವಾರು ಕಾರಣಗಳಿಂದ ನ್ಯೂನ್ಯತೆಯಿರುವುದು ಕಂಡು ಬಂದಿದೆ. ಇದನ್ನು ನೀಗಿಸುವ ದಿಸೆಯಲ್ಲಿ ಚುನಾವಣಾ ಆಯೋಗವು ತನ್ನ ಸ್ಥಾಪನ ದಿನ 25ನೇ ಜನೇವರಿಯನ್ನು ಮತದಾರರ ದಿನವನ್ನಾಗಿ 25 ಜನೇವರಿ-2011 ರಿಂದ ಪ್ರಾರಂಭಿಸಿದ್ದು ಆ ಪ್ರಕಾರ ಪ್ರತಿವರ್ಷ ಜನೇವರಿ 25 ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ನೊಂದಾವಣಿ, ಚುನಾವಣಾ ಗುರುತಿನ ಚೀಟಿ, (ಇPIಅ) ವಿದ್ಯುನ್ಮಾನ ಮತಯಂತ್ರ (ಇಗಿಒ) ಉಪಯೋಗ, ಮತದಾನ ಕೇಂದ್ರ, ಮತದಾನದ ಸಮಯ, ಚುನಾವಣಾ ನೀತಿ ಸಂಹಿತೆ ಸಮಯದಲ್ಲಿ ಮಾಡಬೇಕಾದ/ ಮಾಡಬಾರದ ವಿಷಯಗಳು, ಚುನಾವಣೆಗೆ ನಿಂತ ಅಭ್ಯರ್ಥಿಗಳ ಹಣದ ಬಳಕೆ, ಬಲ ಪ್ರದರ್ಶನ, ಮದ್ಯಪಾನದ ವಿತರಣೆಯಿಂದ ಮತದಾರರನ್ನು ಪ್ರಭಾವಿಸುವುದರ ಕುರಿತು ಮತದಾರನಿಗೆ ಅರಿವು ಮೂಡಿಸುವ ಕಾರ್ಯವನ್ನು ವಿವಿಧ ಹಂತಗಳಲ್ಲಿ ಕೈಗೊಳ್ಳಲಾಗುತ್ತಿದೆ.
‘ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ’ ಎಂಬಂತೆ ನಮ್ಮ ರಾಜಕೀಯ ಮೌಢ್ಯ, ನಿರ್ಲಕ್ಷ್ಯತೆ, ವಿಮುಖತೆಗಳು ನಮ್ಮೆಲ್ಲ ಸಮಸ್ಯೆಗಳಿಗೆ ಮೂಲವಾಗಿರುವುದರಿಂದ ಪ್ರಜ್ಞಾವಂತಿಕೆ-ತಿಳುವಳಿಕೆ ಸಕಾರಾತ್ಮಕ ಧೋರಣೆ ಬೆಳೆಯಿಸಿಕೊಂಡು ಮತಾಧಿಕಾರವನ್ನು ಚಲಾಯಿಸುವಂತಾಗಲಿ ಎಂದು ಹಾರೈಸುತ್ತಾ ರಾಷ್ಟ್ರೀಯ ಮತದಾರರ ದಿನದ ವಾಗ್ದಾನ ಮಾಡೋಣ ಬನ್ನಿ……
‘ಭಾರತದ ಪ್ರಜೆಗಳಾದ ನಾವು ಪ್ರಜಾಪ್ರಭುತ್ವದಲ್ಲಿ ಶಾಶ್ವತ ವಿಶ್ವಾಸವಿಟ್ಟು ಈ ಮೂಲಕ ನಮ್ಮ ದೇಶದ ಪ್ರಜಾಪ್ರಭುತ್ವದ ಸಂಪ್ರದಾಯವನ್ನು ಮತ್ತು ಸ್ವಾತಂತ್ರ್ಯದ ಹಿರಿಮೆ ಎತ್ತಿ ಹಿಡಿಯುವ, ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆ ಹಾಗೂ ಮತೀಯ, ಜನಾಂಗ, ಜಾತಿ, ಸಮುದಾಯ, ಭಾಷೆ ಅಥವಾ ಯಾವುದೇ ಮನವೊಲಿಕೆಯ ಪ್ರಭಾವಕ್ಕೆ ಒಳಗಾಗದೇ ಎಲ್ಲಾ ಚುನಾವಣೆಯಲ್ಲಿ ನಿರ್ಭಯವಾಗಿ ಮತದಾನ ಮಾಡಲು ವಾಗ್ದಾಣ ಮಾಡುತ್ತೇನೆ’.
ಶಕೀಲಅಹ್ಮದ ಎಂ. ಪೀರಜಾದೆ
ರಾಜ್ಯಶಾಸ್ತ್ರ ಉಪನ್ಯಾಸಕರು,
ಅಬುಲ್‍ಕಲಾಮ್ ಆಜಾದ ಕಾಲೇಜ್ `ಗೋಕಾಕ.

Related posts: