ಘಟಪ್ರಭಾ:ಲೋಂಡಾ-ಮಿರಜ ರೈಲು ಜೋಡಿ ಮಾರ್ಗ ಕಾಮಗಾರಿ 2021 ರ ವೇಳೆಯಲ್ಲಿ ಪೂರ್ಣಗೊಳ್ಳಲಿದೆ : ಸಂಸದ ಸುರೇಶ ಅಂಗಡಿ
ಲೋಂಡಾ-ಮಿರಜ ರೈಲು ಜೋಡಿ ಮಾರ್ಗ ಕಾಮಗಾರಿ 2021 ರ ವೇಳೆಯಲ್ಲಿ ಪೂರ್ಣಗೊಳ್ಳಲಿದೆ : ಸಂಸದ ಸುರೇಶ ಅಂಗಡಿ
ಘಟಪ್ರಭಾ ಜ 29 : ಮಹತ್ವಾಕಾಂಕ್ಷಿ ಲೋಂಡಾ-ಮಿರಜ ರೈಲು ಜೋಡಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿ ಇದ್ದು, 2021 ರ ವೇಳೆಯಲ್ಲಿ ಪೂರ್ಣಗೊಳ್ಳಲಿದೆ ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ಹೇಳಿದರು.
ಅವರು ಮಂಗಳವಾರ ಸ್ಥಳೀಯ ರೈಲು ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡ ಹೊಸ ರೈಲು ನಿಲ್ದಾಣದ ಕಟ್ಟಡ ಹಾಗೂ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ಘಟಪ್ರಭಾ ನಗರ ವೇಗದಿಂದ ಬೆಳೆಯುತ್ತಿದೆ. ಅದರಂತೆ ಜೋಡಿ ಮಾರ್ಗ ಯೋಜನೆಯಡಿಯಲ್ಲಿ ಇಲ್ಲಿಯ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಮಾದರಿ ರೈಲು ನಿಲ್ದಾಣ ಮಾಡಲಾಗುವುದು. ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು.
ಈ ಭಾಗದ ರೈತರ ಮತ್ತು ಶಾಲಾ ಮಕ್ಕಳ ಅನುಕೂಲಕ್ಕಾಗಿ ಒಂದು ಅಂಡರ ಪಾಸ್ ಮಾರ್ಗ ನಿರ್ಮಿಸಲಾಗುವುದು. ಘಟಪ್ರಭಾ ಸಮೀಪ ಅನೇಕ ಸಕ್ಕರೆ ಕಾರಖಾನೆಗಳಿದ್ದು, ಸಕ್ಕರೆ ಶೇಖರಣೆ ಹಾಗೂ ಸಾಗಾಣಿಕೆಗಳ ಅನುಕೂಲಕ್ಕಾಗಿ ಗೋಕಾಕ ರೋಡ ರೈಲು ನಿಲ್ದಾಣದ ಸಮೀಪದಲ್ಲಿ ಗೋದಾಮಗಳನ್ನು ನಿರ್ಮಿಸಲಾಗುವುದು. ಘಟಪ್ರಭಾ ತರಕಾರಿ ಮಾರುಕಟ್ಟೆಯಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ತರಕಾರಿ ಸರಬರಾಜು ಮಾಡಲು ಅನುಕೂಲ ಮಾಡುವ ನಿಟ್ಟಿನಲ್ಲಿ ಕೋಲ್ಡ ಸ್ಟೋರೇಜ್‍ಗಳನ್ನು ರೈಲು ಇಲಾಖೆಯಿಂದ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನೈರುತ್ಯ ರೈಲು ಹುಬ್ಬಳ್ಳಿ ಡಿವ್ಹಿಜನ್ ಜನರಲ್ ಮ್ಯಾನೇಜರ ಅಜಯಕುಮಾರ ಸಿಂಗÀ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 80 ವರ್ಷ ಹಳೆಯದಾದ ಘಟಪ್ರಭಾ ರೈಲು ನಿಲ್ದಾಣದ ಅಭಿವೃದ್ಧಿಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ಹಾಗೂ ಸಾರ್ವಜನಿಕರು ನಿಲ್ದಾಣದ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸ್ಥಳೀಯರಿಂದ ಕೆಲವು ಬೇಡಿಕೆಗಳು ಬಂದಿವೆ ಅವುಗಳಗನ್ನು ಮುಂದಿನದಿನಗಳಲ್ಲಿ ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುಜಾತಾ ಪೂಜಾರಿ ವಹಿಸಿದ್ದರು.
ವೇದಿಕೆ ಮೇಲೆ ತಾ.ಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ರೈಲು ಸಲಹಾ ಸಮಿತಿ ಸದಸ್ಯರಾದ ಪ್ರಮೋದ ಜೋಶಿ, ಸುರೇಶ ಪಾಟೀಲ, ಬಾಳಗೌಡಾ ಪಾಟೀಲ, ಗುರುಪಾದ ಕಳ್ಳಿ, ಹಿರಿಯರಾದ ಅಶೋಕ ಪೂಜಾರಿ, ಡಿ.ಆರ್.ಎಂ ರಾಜೇಶ ಮೋಹನ, ಚೀಫ್ ಇಂಜಿಯರ್ ಪ್ರೇಮ ನಾರಾಯಣ, ಡೆಪ್ಯೂಟಿ ಜನರಲ್ ಮ್ಯಾನೇಜರ ಶ್ರೀಮತಿ ಇ.ವಿಜಯಾ ಇದ್ದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಈರಣ್ಣಾ ಕಡಾಡಿ, ಸುರೇಶ ಕಾಡದವರ, ಲಕ್ಷ್ಮಣ ತಪಸಿ, ಪ್ರವೀಣ ಚುನಮುರಿ, ಜಿ.ಎಸ್.ರಜಪೂತ, ಅಪ್ಪಯಪ್ಪಾ ಬಡಕುಂದ್ರಿ, ಭೀಮಪ್ಪಾ ಅಟ್ಟಿಮಿಟ್ಟಿ, ರಾಮಣ್ಣಾ ಹುಕ್ಕೇರಿ, ರಾಜು ಕತ್ತಿ, ಚಿರಾಕಅಲಿಶಾ ಮಕಾನದಾರ, ಅರವಿಂದ ಬಡಕುಂದ್ರಿ, ಚಿದಾನಂದ ದೇಮಶೆಟ್ಟಿ, ಮಾರುತಿ ವಿಜಯನಗರ, ಉಮೇಶ ನಿರ್ವಾಣಿ, ಈರುಪಾಕ್ಷಿ ಯಲಿಗಾರ, ಆದಪ್ಪಾ ಮಗದುಮ್, ನಾಗಲಿಂಗ ಪೋತದಾರ, ರಾಮಪ್ಪಾ ದೇಮನ್ನವರ, ಶೇಖರ ರಜಪೂತ ಸೇರಿದಂತೆ ಅನೇಕರು ಇದ್ದರು.
ವಿವಿಧ ಸಂಘಟನೆಗಳಿಂದ ಹಾಗೂ ಶಾಲಾ ಮಕ್ಕಳಿಂದ ಬಂದ ಮನವಿಗಳನ್ನು ಸಂಸದ ಸುರೇಶ ಅಂಗಡಿ ಸ್ವೀಕರಿಸಿದರು. ಕಾರ್ಯಕ್ರಮವನ್ನು ಅನೀಶ ಹೆಗಡೆ ನಿರೂಪಿಸಿ, ವಂದಿಸಿದರು.