RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಇಂದು ನಗರಕ್ಕೆ ಮೌಲಾನಾ ಮೆಹಫೂಜ್-ಉರ್-ರಹ್ಮಾನ್ ಶಾಹಿನ ಜಮಾಲಿ ಚತರ್ವೇದಿ

ಗೋಕಾಕ:ಇಂದು ನಗರಕ್ಕೆ ಮೌಲಾನಾ ಮೆಹಫೂಜ್-ಉರ್-ರಹ್ಮಾನ್ ಶಾಹಿನ ಜಮಾಲಿ ಚತರ್ವೇದಿ 

ಇಂದು ನಗರಕ್ಕೆ ಮೌಲಾನಾ ಮೆಹಫೂಜ್-ಉರ್-ರಹ್ಮಾನ್ ಶಾಹಿನ ಜಮಾಲಿ ಚತರ್ವೇದಿ
ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಫೆ : 1

 

 

ಶೂನ್ಯ ಸಂಪಾದನಾ ಮಠಾಧೀಶ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರಸ್ತುತ 2019 ನೇ ಸಾಲಿನಲ್ಲಿ ಕಾಯಕಯೋಗಿ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಲಿಂಗೈಕ್ಯ ಬಸವ ಸ್ವಾಮಿಗಳ ಹದಿನಾಲ್ಕನೇಯ ಪುಣ್ಯ ಸ್ಮರಣೋತ್ಸವ ನಿಮಿತ್ತ ಆಯೋಜಿಸಿರುವ ಶರಣ ಸಂಸ್ಕøತಿ ಉತ್ಸವ ಹಲವು ಹತ್ತು ವಿಧಗಳಿಂದ ವೈಶಿಷ್ಟ್ಯಪೂರ್ಣವಾಗಿದೆ.

ಶುಕ್ರವಾರ ದಿ. 01-02-2019 ರಂದು ಜರುಗುವ ಗದುಗಿನ ಜಗದ್ಗುರು ಮಹಾ ಸನ್ನಿಧಿಯವರಿಗೆ ಗುರುವಂದನೆ ಹಾಗೂ ಭಾವೈಕ್ಯತೆ ಸಮಾವೇಶದ ನೇತೃತ್ವ ವಹಿಸಲಿರುವ ಮೌಲಾನಾ ಮೆಹಫೂಜ್-ಉರ್-ರಹ್ಮಾನ್ ಶಾಹೀನ ಜಮಾಲಿ ಸಾಹಬ ಚತುರ್ವೇದಿರವರು ಅತ್ಯಂತ ವಿಶಿಷ್ಟ ಹಾಗೂ ಇತರರಿಗಿಂತ ಭಿನ್ನವಾದ ವ್ಯಕ್ತಿತ್ವವುಳ್ಳವರು.

ಪ್ರಖ್ಯಾತ ಆಂಗ್ಲ ಸಾಹಿತ್ಯ ದಿಗ್ಗಜರಾದ ವಿಲಿಯಂ ಶೇಕ್ಷಪಿಯರ್‍ನು ಹೆಸರಿನಲ್ಲೇನಿದೆ?’ ಎಂಬ ಕೃತಿಯ ಮೂಲಕ ಹೆಸರುಗಳಲ್ಲಿ ಅಡಗಿರುವ ಮಹತ್ವ, ಔಚಿತ್ಯ, ಹಾಗೂ ವೈರುಧ್ಯಗಳ ಕುರಿತು ಅತ್ಯಂತ ಮಾರ್ಮಿಕವಾಗಿ ವಿವರಿಸಿದ್ದಾರೆ.

ಮೌಲಾನಾ ಮಹಫುಜರ್ ರಹ್ಮಾನ ಶಾಹೀನ ಜಮಾಲಿರವರ ಹೆಸರಿನ ಕೊನೆಯ ನಾಮ ಚತುರ್ವೇದಿ ಸೋಜಿಗವನ್ನುಂಟು ಮಾಡುವಂಥಹದು. ಚತುರ್ವೇದಿ ಎಂದರೆ ನಾಲ್ಕು ವೇದಗಳಾದ ಖುಗ್ವೇದ, ಯಜುರ್ವೆದ, ಸಾಮವೇದ ಹಾಗೂ ಅಥರ್ವವೇದಗಳ ಬಗ್ಗೆ ಅಪಾರ ಜ್ಞಾನ ಪಾಂಡಿತ್ಯ ಹೊಂದಿರುವವ ಎಂಬರ್ಥ. ಮೌಲಾನಾ ಮಹಫುಜರ್‍ರವರು ಯಾವುದೇ ಸಭೆ-ಸಮಾರಂಭಗಳಲ್ಲಿ ಭಾಗವಹಿಸಲಿ. ಅವರನ್ನು ಎಲ್ಲರೂ ಅಭಿಮಾನ ಪ್ರೀತಿಯಿಂದ ಚತುರ್ವೇದಿ ಎಂದೇ ಸಂಭೋದಿಸುವದು ಸಾಮರಸ್ಯದ ಸಂಕೇತ. ಗಮನಾರ್ಹ ಸಂಗತಿ ಏನೆಂದರೆ ವೇದಗಳ ಕುರಿತು ಇವರು ಹೊಂದಿರುವ ಅಗಾಧ ಜ್ಞಾನ, ಪಾಂಡಿತ್ಯ ಕೇಳಿ ಕರ್ನಾಟಕದ ವಿದ್ವಾಂಸರು ಅವರಿಗೆ ಚತುರ್ವೇದಿ ಎಂಬ ಬಿರುದನ್ನು ನೀಡಿರುತ್ತಾರೆ. [ ಹಿಂದೂಸ್ತಾನ ಟಾಯಿಮ್ಸ ದಿನಪತ್ರಿಕೆ ಮೇ10,2016]

ಮೌಲಾನಾರವರು ಸತತ ಅಧ್ಯಯನಶೀಲ ಪ್ರವೃತ್ತಿ ಬೆಳೆಯಿಸಿಕೊಂಡವರು, ಶ್ರೀಯುತರು ಇಸ್ಲಾಂ ಧಾರ್ಮಿಕ ಶಿಕ್ಷಣದ ಆಲೀಮ್ ಹಾಗೂ ‘ಮುಫ್ತಿ ಪದವೀಧರರಾಗಿದ್ದು ಕುರಾನ್ ಶರೀಫದ ಬಗ್ಗೆ ಸುದೀರ್ಘ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧ ಮಂಡಿಸಿ ಪಿ.ಹೆಚ್.ಡಿ. ಪದವಿ ಗಳಿಸಿರುತ್ತಾರೆ. ಇನ್ನೂ ಹೆಚ್ಚಿನ ಜ್ಞಾನ, ಅರಿವು ಹೊಂದುವ ಹಂಬಲದಿಂದ ಮುಖ್ಯವಾಗಿ ಹಿಂದೂ ಧರ್ಮದ ಬಗ್ಗೆ ತಿಳಿಯುವ ಉದ್ದೇಶದಿಂದ ಅಲಿಗಡ ಮುಸ್ಲಿಂ
ವಿಶ್ವವಿದ್ಯಾಲಯದಿಂದ ಸಂಸ್ಕøತ ಭಾಷೆಯಲ್ಲಿ ಎಮ್.ಎ ಪದವಿ ಹೊಂದಿರುತ್ತಾರೆ. ಹೃದಯ ವೈಶಾಲ್ಯ ಮನೋಭಾವನೆಯ ಮೌಲಾನಾರವರು ಮನಃಪೂರ್ವಕವಾಗಿ ಭಗವದ್ಗೀತಾ, ವೇದಗಳು ಹಾಗೂ ಇತರ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿರುತ್ತಾರೆ.

ಮೌಲಾನಾರವರ ಮೇಲೆ ಗಾಢವಾದ ಪ್ರಭಾವ ಬೀರಿದವರು ಅವರ ವಿದ್ಯಾ ಮಾರ್ಗದರ್ಶಿಗಳಾದ ಪಂಡಿತ ಬಸಿರುದ್ದೀನ್. ಈ ನಾಮವೂ ಕೂಡ ಅತ್ಯಂತ ರೋಚಕತೆಯಿಂದ ಕೂಡಿರುತ್ತದೆ. ಬಸಿರುದ್ದೀನ್‍ರವರ ಸಂಸ್ಕøತ ಜ್ಞಾನ, ಪಾಂಡಿತ್ಯಕ್ಕೆ ಬೆರಗಾಗಿ ಅವರಿಗೆ ಪಂಡಿತ ಬಿರುದನ್ನು ನೀಡಿದವರು ಆಗಿನ ಪ್ರಧಾನಮಂತ್ರಿ ಪಂಡಿತ ಜವಾಹರಲಾಲ ನೆಹರು. ಇಂತಹ ಗುರುವಿನ ಅಚ್ಚುಮೆಚ್ಚಿನ ಶಿಷ್ಯರಾಗಿ ಮೌಲಾನಾರವರು ನಾಲ್ಕು ವೇದಗಳನ್ನು ಕರಗತ ಮಾಡಿಕೊಂಡಿರುತ್ತಾರೆ.

ಮೌಲಾನಾರವರು ಹಿಂದೂ ಪ್ರಭಾವ ಬಾಹುಳ್ಯವಿರುವ ಉತ್ತರಪ್ರದೇಶ ರಾಜ್ಯದ ಮೀರತ್‍ನ ಸದರ ಪ್ರದೇಶದಲ್ಲಿರುವ ಮದರಸಾ ಜಾಮಿಯಾ ಇಮ್ದಾದುಲ್ ಇಸ್ಲಾಂದ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ವಾಸಿಸುತ್ತಿರುವ ಪ್ರದೇಶವು ಮೇಲಿಂದ ಮೇಲೆ ಕೋಮು ದಳ್ಳುರಿಗೆ, ದಂಗೆ, ಹಿಂಸೆಗಳಿಗೆ ಬಲಿಯಾಗುತ್ತಿರುತ್ತದೆ. ಆದರೆ ಅಂತಹ ವಿಷಮ ಪ್ರದೇಶದಲ್ಲಿಯೂ ಕೂಡ ಮೌಲಾನಾರವರು ತಮ್ಮ ವೈಚಾರಿಕ ನುಡಿ, ನಡೆ, ವಿಶಾಲ ತಳಹದಿಯ ತತ್ವಗಳ ಮೂಲಕ ಶಾಂತಿ-ಸಾಮರಸ್ಯ ಸ್ಥಾಪಿಸುವ ಉದಾತ್ತ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಬೀದಿ, ಬೀದಿಗಳಲ್ಲಿ ಮುಕ್ತವಾಗಿ ಸಂಚರಿಸುತ್ತಾ ಶಾಂತಿಪಾಲನಾ ಸಭೆಗಳನ್ನು ಆಯೋಜಿಸುವ ಮೂಲಕ ಸಾಮರಸ್ಯ, ಭಾವೈಕ್ಯತೆ ಸ್ಥಾಪಿಸುತ್ತಿರುವುದು ಅಭಿನಂದನೀಯ.

ತನ್ನ ಧರ್ಮದ ಬಗ್ಗೆ ಅಭಿಮಾನ, ಜ್ಞಾನ ಹೊಂದುವುದರ ಜೊತೆಗೆ ಇತರ ಧರ್ಮ, ಧರ್ಮಗ್ರಂಥಗಳ ಬಗ್ಗೆಯೂ ಕೂಡ ಅಪಾರ ಜ್ಞಾನ, ತಿಳುವಳಿಕೆ ಹೊಂದಿರುವ ಮೌಲಾನಾರವರು ತಮ್ಮ ಉಪನ್ಯಾಸಗಳಲ್ಲಿ ಕುರಾನ್, ಭಗವದ್ಗೀತೆ, ವೇದಗಳು ಸೇರಿದಂತೆ ವಿವಿಧ ಧರ್ಮಗಳ ಉದಾತ್ತ , ಉನ್ನತ ವಿಚಾರಗಳನ್ನು ಉದ್ಧರಿಸುತ್ತಾ ಜಾಗತಿಕ ಶಾಂತಿ, ನೆಮ್ಮದಿ, ಅಹಿಂಸೆ, ಸಾಮರಸ್ಯ ತತ್ವಗಳನ್ನು ಬೋಧಿಸುತ್ತಾ ಭಾವೈಕ್ಯತೆ ಸಂದೇಶವನ್ನು ಸಾರುತ್ತಿರುವುದು ಅತ್ಯಂತ ಪ್ರಸ್ತುತ ಹಾಗೂ ಸ್ವಾಗತಾರ್ಹ.

ಲೇಖನ : ಶಕೀಲಹ್ಮದ ಎಂ ಪೀರಜಾದೆ , ಗೋಕಾಕ

Related posts: