ಗೋಕಾಕ:ಬಳಗಾರ ಅವರು ತಮ್ಮ ಹೆಸರಿಗೆ ಸಾರ್ಥಕತೆ ತಂದು ಕೊಟ್ಟಿದ್ದಾರೆ : ರಾಘವೇಂದ್ರ ಪಾಟೀಲ
ಬಳಗಾರ ಅವರು ತಮ್ಮ ಹೆಸರಿಗೆ ಸಾರ್ಥಕತೆ ತಂದು ಕೊಟ್ಟಿದ್ದಾರೆ : ರಾಘವೇಂದ್ರ ಪಾಟೀಲ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ.17 ;-
ಮಾನವನು ಕೂಡಾ ಓರ್ವ ಪ್ರಾಣಿಯೇ. ಕ್ರೂರ ಪ್ರಾಣಿಗಳು ಹೊಟ್ಟೆ ಪಾಡಿಗಾಗಿ ಬೇಟೆಯಾಡುವ ಸಮಯದಲ್ಲಿ ಮಾತ್ರ ಕ್ರೂರತೆ ಮೆರೆಯುತ್ತಿವೆ. ಆದರೆ ಆದಿ ಮಾನವನಲ್ಲಿ ಕ್ರೂರತೆ ಸದೈವ ತುಂಬಿ ತುಳುಕುತ್ತಿತ್ತು. ಆದರೆ ಸಾಮಾಜಿಕ ಕಟ್ಟುಪಾಡು ಮತ್ತು ಒಳ್ಳೇ ಸಂಸ್ಕಾರದಿಂದ ಮಾನವನಲ್ಲಿಯ ಈ ಕ್ರೂರತೆ ಮಾಯವಾಗಿ ಆತ ಸಭ್ಯ ಮಾನವನಾಗುತ್ತಾ ಬಂದಿದ್ದಾನೆಂದು ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟಿನ ಅಧ್ಯಕ್ಷ ರಾಘವೇಂದ್ರ ಪಾಟೀಲ ಹೇಳಿದರು.
ಅವರು ಶನಿವಾರದಂದು ನಗರದ ಸಮುದಾಯ ಭವನದಲ್ಲಿ ಪತ್ರಕರ್ತ ಸಾದಿಕ ಹಲ್ಯಾಳ ಸಂಪಾದನೆಯಲ್ಲಿ ಮೂಡಿ ಬಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರ ಅಭಿನಂದನಾ ಗ್ರಂಥ ‘ಛಲಗಾರ’ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಜಿ.ಬಿ.ಬಳಗಾರ ಅವರಿಗೆ ತಂದೆ-ತಾಯಿ ಹಾಗೂ ಸುತ್ತಮುತ್ತಲಿನ ಪರಿಸರದಿಂದ ಒಳ್ಳೇ ಸಂಸ್ಕಾರ ದೊರತು ವಿನಯಶೀಲ, ಸಾತ್ವಿಕತೆಯಿಂದ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದಾರೆ. ಅವರು ಶಿಕ್ಷಣದ ಮಹಾಸಾಗರವೇ ಆಗಿದ್ದಾರೆ. ಗಜಬರ ಎಂದರೆ ಹೃದಯವಂತ ಎಂದು ಅರ್ಥ. ಬಳಗಾರ ಅವರು ತಮ್ಮ ಹೆಸರಿಗೆ ಸಾರ್ಥಕತೆ ತಂದು ಕೊಟ್ಟಿದ್ದಾರೆಂದು ತಿಳಿಸಿದರು.
ಗ್ರಂಥದ ಸಂಪಾದಕರು ಕೃತಿಗೆ ‘ಛಲಗಾರ’ ಎಂದು ಕರೆದಿದ್ದು ಅತ್ಯಂತ ಸೂಕ್ತವಾಗಿದೆ ಎಂದು ರಾಘವೇಂದ್ರ ಪಾಟೀಲ ತಿಳಿಸಿ ತಾಲೂಕಿನ ಬೆಟಗೇರಿ ಪ್ರೌಢ ಶಾಲೆಯಲ್ಲಿ 15 ವರ್ಷಗಳ ದೀರ್ಘ ಸೇವೆಯಲ್ಲಿ ಸಲ್ಲಿಸಿದ ಘಟನೆಗಳನ್ನು ನೆನಪಿಸಿದರು.
ನಗರಸಭೆ ಹಿರಿಯ ಸದಸ್ಯ ಎಸ್.ಎ.ಕೊತವಾಲ, ಪ್ರೊ. ಜಿ.ವ್ಹಿ.ಮಳಗಿ, ಪ್ರೊ. ಚಂದ್ರಶೇಖರ ಅಕ್ಕಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಬಿಸಿಯೂಟ ಅಧಿಕಾರಿ ಡಿ.ಎಸ್.ಕುಲಕರ್ಣಿ, ಮುಖ್ಯಾಧ್ಯಾಪಕ ಆರ್.ಎಮ್.ಅಳಗನ್ನವರ ಅವರು ಮಾತನಾಡಿದರು.
ಛಲಗಾರ ಗ್ರಂಥದ ಸಂಪಾದಕ ಸಾಧಿಕ ಹಲ್ಯಾಳ ಮಾತನಾಡಿ, ಗ್ರಂಥ ರಚಿಸಲು ಪ್ರೇರಣೆಯಾದ ಘಟನೆ ತಿಳಿಸಿ ಗ್ರಂಥ ರಚನೆಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಸತ್ಕಾರ ಸ್ವೀಕರಿಸಿದ ಬಿ.ಜಿ.ಬಳಗಾರ ಅವರು ಮಾತನಾಡಿ ಸಾಮಾನ್ಯ ರೈತನ ಮಗನೊಬ್ಬ ಹೊಟ್ಟೆಪಾಡಿಗಾಗಿ ನೌಕರಿ ಮಾಡುವ ನನ್ನಂಥ ವ್ಯಕ್ತಿಗೆ ಈ ಮಟ್ಟಕೆ ಏರಲು ಪ್ರೇರೇಪಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು. ತಂದೆ-ತಾಯಿ ನೀಡಿದ ಸಂಸ್ಕಾರ ಮತ್ತು ಉದಗಟ್ಟಿ ಗ್ರಾಮದ ಹಿರಿಯರ ಬೆಂಬಲ ಕಾರಣ ಅದಕ್ಕಾಗಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಮುಖ್ಯಾಧ್ಯಾಪಕ ಹುದ್ದೆಯಿಂದ ಪದೋನ್ನತಿ ಹೊಂದಬೇಕಾದರೆ ಬೆಟಗೇರಿಯ ಹಿರಿಯರ ಹಾಗೂ ಗ್ರಾಮಸ್ಥರ ಸಹಕಾರವೇ ಮುಖ್ಯವೆಂದು ಸ್ಮರಿಸಿದರು. ನಾನು ಒಂದು ಹಂತಕ್ಕೆ ಬಂದು ಮುಟ್ಟಲು ತಂದೆ-ತಾಯಿ, ಸಹೋದರ ಮತ್ತು ಪತ್ನಿಯ ಸಹಕಾರ ಕಾರಣವೆಂದೂ ಬಳಗಾರ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಎಮ್.ಜಿ.ದಾಸರ ಅವರು ಮಾತನಾಡಿ ಸೂರ್ಯನಷ್ಟೇ ಬೆಳಕು ನೀಡುತ್ತಾನೆ ಎಂದೇನಲ್ಲ. ಜ್ಞಾನ ಕೂಡಾ ಒಂದು ಬೆಳಕವೇ. ಬಳಗವಂತ ಬಳಗಾರ ಬಂಗಾರದ ಶಿಕ್ಷಣ ತಜ್ಞ. ಮಕ್ಕಳಿಗೆ ಮೌಲ್ಯ, ಧೈರ್ಯ ತುಂಬುವ ಬಳಗಾರ ಎಂದು ಶ್ಲಾಘಿಸಿದರು.
ಸಮಾರಂಭವನ್ನು ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಸಾಹಿತಿ ಜಯಾನಂದ ಮಾದರ ಛಲಗಾರ ಗ್ರಂಥದ ಕುರಿತು ಮಾತನಾಡಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ ವಿನಯಶಾಲಿ, ಸಂಸ್ಕಾರಯುತ ಮಾತನಾಡುವ ಮೃದು ಸ್ವಭಾವದ ಬಿ.ಜಿ.ಬಳಗಾರರ ಬದುಕು ಸಾರ್ಥಕ. ಇಂದು ಸಮಾರಂಭದಲ್ಲಿ ಮಾತನಾಡಿದ ಹಾಗೂ ಸೇರಿದ ಜನರನ್ನು ನೋಡಿದಾಗ ಬಳಗಾರರು ಧನ್ಯರು ಎಂದರು.
ಬಳಗಾರರ ವಿನಯವೇ ಅವರೆಡೆಗೆ ಎಲ್ಲರನ್ನೂ ಸೆಳೆಯುತ್ತದೆ. ಪ್ರೀತಿ, ಸೌಹಾರ್ದತೆ, ಭಾವೈಕ್ಯತೆಯಿಂದ ಬಾಳುತ್ತಿರುವ ಬಳಗಾರರಿಗೆ ಆಯುರಾರೋಗ್ಯ ಮತ್ತು ಇನ್ನೂ ಹೆಚ್ಚಿನ ಸ್ಥಾನ ದೊರೆಯಲಿ ಎಂದು ಹಾರೈಸಿದರು.
ವೇದಿಕೆ ಮೇಲೆ ಗುಜನಾಳ ಗ್ರಾ.ಪಂ. ಅಧ್ಯಕ್ಷ ಭೀಮಗೌಡ ಪೋಲೀಸಗೌಡ್ರ, ಅಂಜುಮನ್-ಎ-ಇಸ್ಲಾಮ ಕಮೀಟಿ ಅಧ್ಯಕ್ಷ ಗೋಕಾಕ ಇದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ಜಮ್ಮು-ಕಾಶ್ಮೀರದಲ್ಲಿ ಬಾಂಬ ಧಾಳಿಗೆ ತುತ್ತಾಗಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಲಾಯಿತು.
ಜಿ.ಬಿ.ಬಳಗಾರ ಅಭಿನಂದನಾ ಗ್ರಂಥ ಸಮಿತಿ ಅಧ್ಯಕ್ಷ ಬಸವರಾಜ ಖಾನಪ್ಪಬವರ ಸ್ವಾಗತಿಸಿದರು. ಆರ್.ಎಲ್.ಮಿರ್ಜಿ ಹಾಗೂ ಟಿ.ಬಿ.ಬಿಲ್ ನಿರೂಪಿಸಿದರು.
ನಂತರ ವಿವಿಧ ಸಂಘಟನೆಗಳ ಪರವಾಗಿ ಜ.ಬಿ.ಬಳಗಾರ ಅವರನ್ನು ಸತ್ಕರಿಸಲಾಯಿತು.