RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ

ಗೋಕಾಕ:ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ 

ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ
ಗೋಕಾಕ ಜು 5: ರೈತರ ಪಂಪಸೆಟ್‍ಗಳ ಮಂಜೂರಾತಿ ಪಡೆಯಲು ಕೆಲ ಸಂಘಟನೆಗಳು ರೈತರಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಈ ಬಗ್ಗೆ ಜಾಗೃತ ವಹಿಸಿ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ ಈಗಾಗಲೇ ದರ ನಿಗದಿಪಡಿಸಿದೆ. ಕಛೇರಿಗೆ ಬರುವ ರೈತರ ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ರೈತರು ನೇರವಾಗಿ ಹೆಸ್ಕಾಂ ಕಛೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಹಣ ಪಾವತಿಸುವಂತೆ ಅವರು ತಿಳಿಸಿದ್ದಾರೆ

3 ಎಚ್‍ಪಿ ಮೋಟಾರಗೆ 13,680 ರೂ, 5 ಎಚ್‍ಪಿ ಮೋಟಾರಗೆ 16,100 ರೂ, 7.5 ಎಚ್‍ಪಿ ಮೋಟಾರಗೆ 19,720 ರೂ, 10 ಎಚ್‍ಪಿ ಮೋಟಾರಗೆ 22,150 ರೂ.ಗಳನ್ನು ರೈತರು ಹೆಸ್ಕಾಂ ಕಛೇರಿಗೆ ತೆರಳಿ ಹಣ ಪಾವತಿಸಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಹಣ ನೀಡಬಾರದು. ಹೆಸ್ಕಾಂ ಕಛೇರಿಗೆ ಪಾವತಿ ಮಾಡಿದ ನಂತರ ರೈತರ ಮೂಲಸೌಕರ್ಯ ನಿರ್ಮಾಣ ಕೆಲಸವನ್ನು ಹೊಸ ಟೆಂಡರ್ ಕರೆದು ಕೆಲಸ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

2014-15ನೇ ಸಾಲಿನಲ್ಲಿ ಮಂಜೂರಾತಿ ಪಡೆದ ನೀರಾವರಿ ಪಂಪಸೆಟ್‍ಗಳ ಮಾರ್ಗ ವಿಸ್ತರಣೆ ಕೆಲಸ ಮುಗಿಯುವ ಹಂತದಲ್ಲಿದ್ದು, ಈ ಯೋಜನೆಯಲ್ಲಿ 2134 ಫಲಾನುಭವಿಗಳಿಗೆ ವಿದ್ಯುತ್ ಮೂಲಸೌಕರ್ಯ ಒದಗಿಸಿಕೊಡಲಾಗಿದೆ. 25 ಕೆವ್ಹಿಯ 1594 ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗಿದೆ. 269.89 ಕಿ.ಮೀ ಹೆಚ್.ಟಿ ಲೈನ್ ವಿದ್ಯುತ್ ಮಾರ್ಗ ವಿಸ್ತರಿಸಲಾಗಿದೆ. ಹಾಗೂ 244.02 ಕಿ.ಮೀ ಎಲ್‍ಟಿ ವಿದ್ಯುತ್ ಮಾರ್ಗವನ್ನು ಈಗಾಗಲೇ ವಿಸ್ತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅರಭಾವಿ ಮತಕ್ಷೇತ್ರದಲ್ಲಿ ಈಗಾಗಲೇ ಹೊಸದಾಗಿ ಯಾದವಾಡ ಮತ್ತು ನಾಗನೂರ ಗ್ರಾಮಗಳಲ್ಲಿ 110 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರಗಳಿಗೆ ಚಾಲನೆ ನೀಡಲಾಗಿದೆ. ಗೋಸಬಾಳ ಭಾಗದಲ್ಲಿ ವಿದ್ಯುತ್ ಒತ್ತಡ ಕಡಿಮೆ ಮಾಡಲು ಹೊಸದಾಗಿ 110 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿಗೆ ಮಂಜೂರಾತಿ ದೊರೆತಿದೆ. ಮುಂದಿನ ದಿನಗಳಲ್ಲಿ ಅರಳಿಮಟ್ಟಿ ಹಾಗೂ ಹಳ್ಳೂರ ಗ್ರಾಮಗಳಲ್ಲಿ 33 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರಗಳನ್ನು 110 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರಗಳನ್ನಾಗಿ ಉನ್ನತೀಕರಣಗೊಳಿಸುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕ್ಷೇತ್ರದ ಎಲ್ಲ ಗ್ರಾಮಗಳ ಹಳೆಯ 518 ಕಿ.ಮೀ ತಂತಿಯನ್ನು ಬದಲಾವಣೆ ಮಾಡಲಾಗಿದ್ದು, ಹೊಸದಾಗಿ 18 ಲಿಂಕ್‍ಲೈನ್ ತಯಾರಿಸಿ ಹಳೆಯ ಫೀಡರ್‍ಗಳ ಮೇಲಿನ ಒತ್ತಡ ಕಡಿಮೆ ಮಾಡಲಾಗಿದೆ. ಕಳ್ಳಿಗುದ್ದಿ, ರಡ್ಡೇರಹಟ್ಟಿ, ಹೊಸಯರಗುದ್ರಿ ಗ್ರಾಮಗಳ ರೈತರ ನೀರಾವರಿ ಪಂಪಸೆಟ್‍ಗಳಿಗೆ ಹೊಸ ವಿದ್ಯುತ್ ಮಾರ್ಗಗಳನ್ನು ನಿರ್ಮಾಣ ಮಾಡಿ ಯಾದವಾಡ 110 ವಿದ್ಯುತ್ ವಿತರಣಾ ಕೇಂದ್ರದ ಈ ಭಾಗಗಳಿಗೆ ಸಮರ್ಪಕ ವಿದ್ಯುತ್ ವಿತರಣೆಯಾಗಲಿದೆ. ಇದರಿಂದ ಈ ಭಾಗದ ರೈತರ ಸಮಸ್ಯೆ ಪರಿಹಾರವಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

Related posts: