ಮೂಡಲಗಿ:ಪರೀಕ್ಷಾ ಅಧೀಕ್ಷಕರ ಸಿದ್ಧತಾ ಸಭೆ ಹಾಗೂ ಹತ್ತನೇ ತರಗತಿ ಶಿಕ್ಷಕರ ಅಭಿನಂದನಾ ಕಾರ್ಯಕ್ರಮ
ಪರೀಕ್ಷಾ ಅಧೀಕ್ಷಕರ ಸಿದ್ಧತಾ ಸಭೆ ಹಾಗೂ ಹತ್ತನೇ ತರಗತಿ ಶಿಕ್ಷಕರ ಅಭಿನಂದನಾ ಕಾರ್ಯಕ್ರಮ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 6 :
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸಮೀಪಿಸಿದ್ದು, ವಲಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಚಟುವಟಿಕೆಗಳು ಭರದಿಂದ ಸಾಗಿದೆ. ವಲಯ ವ್ಯಾಪ್ತಿಯಲ್ಲಿ 18 ಪರೀಕ್ಷಾ ಕೇಂದ್ರಗಳಿದ್ದು, 6135 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳ ಜೊತೆಯಲ್ಲಿ ವೈಧ್ಯಕೀಯ ಹಾಗೂ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವದು ಪರೀಕ್ಷಾ ಅಧೀಕ್ಷರ ಆದ್ಯ ಕರ್ತವ್ಯವಾಗಿದೆ ಎಂದು ಮೂಡಲಗಿ ಬಿ.ಇ.ಓ ಅಜೀತ ಮನ್ನಿಕೇರಿ ಹೇಳಿದರು.
ಅವರು ಬಿ.ಆರ್.ಸಿ ಕಛೇರಿಯಲ್ಲಿ ಬುಧವಾರ ಜರುಗಿದ ಪರೀಕ್ಷಾ ಅಧೀಕ್ಷಕರ ಸಿದ್ಧತಾ ಸಭೆ ಹಾಗೂ ಹತ್ತನೇ ತರಗತಿ ಶಿಕ್ಷಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರೀಕ್ಷೆಗಳು ಸುಲಭವಾಗಿ ಜರುಗಲು ಸಮರೋಪಾಯವಾಗಿ ಸಾಗಬೇಕು. ಮಕ್ಕಳ ಮನೆ ಭೇಟಿ, ಪರೀಕ್ಷಾ ಭಯದ ನಿವಾರಣೆ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ಹಾಗೂ ಕ್ಲೀಷ್ಠಾಂಶಗಳನ್ನು ನೂರಿತ ಶಿಕ್ಷಕರಿಂದ ಪರಿಹರಿಸಬೇಕು. ಪರೀಕ್ಷಾ ದಿನಗಳಂದು ಕೇಂದ್ರದ ಸುತ್ತ ನಿಷೇದಾಜ್ಞೆ ಜಾರಿಯಲ್ಲಿದ್ದು, ಸಮೀಪದ ಪೋಲಿಸ್ ಠಾಣೆಯಿಂದ ಅಗತ್ಯ ಸಿಬ್ಬಂದಿಗಳನ್ನು, ಆರೋಗ್ಯ ಇಲಾಖೆಯಿಂದ ವೈಧ್ಯಕೀಯ ನೆರವು ಹಾಗೂ ಮೂಲಭೂತ ಅಗತ್ಯತೆಗಳಾದ ಆಸನದ ವ್ಯವಸ್ಥೆ, ಕುಡಿಯುವ ನೀರು, ವರ್ಗ ಕೊಠಡಿಗಳಿಗೆ ಮೇಲ್ವಿಚಾರಕ ನೇಮಕ ಮಾಡಿಕೊಳ್ಳ ಬೇಕು.ಮೊಬೈಲ್ ಬಳಕೆ ಸಂಪೂರ್ಣ ನಿಷೇದವಿದ್ದು ಬಳಕೆಗೆ ಆಸ್ಪದ ನೀಡಬಾರದು ಎಂದರು.
ವಲಯ ವ್ಯಾಪ್ತಿಯ ಶಾಲೆಗಳಲ್ಲಿ ಸಾಂಯಕಾಲ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ವ್ಯವಸ್ಥೆ ಮಾಡಿರುವದು ಪ್ರಶಂಸನೀಯವಾಗಿದೆ. ಮನೆ ಮನೆ ಭೇಟಿ, ವಲಯದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕುರಿತು ಮನವರಿಕೆ ಕಾರ್ಯಕ್ರಮ ಮೆಚ್ಚುವಂತಹದು. ಮುಖ್ಯ ಅಧೀಕ್ಷಕರಿಗೆ, ಸಹಾಯಕ ಅಧೀಕ್ಷಕರಿಗೆ ಈಗಾಗಲೇ ಪರೀಕ್ಷಾ ಮಂಡಳಿಯ ನಿರ್ಧೇಶನಗಳನ್ನು ನೀಡಿದ್ದು ಪರೀಕ್ಷೆಗಳು ಯಶಸ್ವಿಯಾಗಿ ಜರುಗಲು ಎಲ್ಲರ ಪಾತ್ರ ಪ್ರಮುಖವಾಗಿದೆ ಎಂದು ನುಡಿದರು.
ಪರೀಕ್ಷೆಯ ನೋಡಲ್ ಅಧಿಕಾರಿ ಎಸ್.ಎ ನಾಡಗೌಡರ ಮಾತನಾಡಿ, ವಲಯ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳು, ಅಧೀಕ್ಷಕರುಗಳ ಮಾಹಿತಿ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳ ಬೇಕಾದ ಕಾರ್ಯಗಳನ್ನು ವಿವರಿಸಿದರು.
ಸಭೆಯಲ್ಲಿ ಇಸಿಒ ಟಿ.ಕರಿಬಸವರಾಜು, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಲ್.ಐ ಕೊಳವಿ, ಬಿ.ಆರ್.ಪಿಗಳಾದ ಪಿ.ಜಿ ಪಾಟೀಲ, ಕೆ.ಎಲ್ ಮೀಶಿ, ಎ.ಬಿ ಚವಡನ್ನವರ, ಅಧೀಕ್ಷಕರಾದ ಗೀತಾ ಕರಗಣ್ಣಿ, ಜೆ.ಎಮ್ ಕಾಮಣ್ಣವರ, ಎಸ್.ಎಮ್ ಸೊನ್ನದ, ಆರ್.ಎಸ್ ಅಳಗುಂಡಿ, ಎಸ್.ಎಮ್ ಗುಗ್ಗರಿ, ಎಸ್.ಬಿ ನ್ಯಾಮಗೌಡರ, ರೇಣುಕಾ ಆಣಿ, ಮೀನಾಕ್ಷೀ ಖನದಾಳೆ, ರಾಜೇಶ್ವರಿ ನಾಯಿಕ ಹಾಗೂ ಎಸ್‍ಎಸ್‍ಎಲ್‍ಸಿ ತರಗತಿಗಳ ಶಿಕ್ಷಕರು ಉಪಸ್ಥಿತರಿದ್ದರು.