RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ಪ್ರೌಢ ಶಾಲಾ ಮುಖ್ಯೋಪಾದ್ಯಾಯರ ಪ್ರೇರಣಾ ಕಾರ್ಯಾಗಾರ

ಮೂಡಲಗಿ:ಪ್ರೌಢ ಶಾಲಾ ಮುಖ್ಯೋಪಾದ್ಯಾಯರ ಪ್ರೇರಣಾ ಕಾರ್ಯಾಗಾರ 

ಪ್ರೌಢ ಶಾಲಾ ಮುಖ್ಯೋಪಾದ್ಯಾಯರ ಪ್ರೇರಣಾ ಕಾರ್ಯಾಗಾರ

 

ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 13 :

 

ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿ ಬದುಕು ಸಾಗಿಸಬೇಕಾದರೆ ವಿದ್ಯಾರ್ಥಿ ಜೀವನದಲ್ಲಿದ್ದಾಗ ಶಿಕ್ಷಕ ಎಲ್ಲ ರೀತಿಯಿಂದಲೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ತಾಳ್ಮೆಯ ಗುಣಗಳನ್ನು ರೂಡಿಸಿ ಬೆಳಸಿದಾಗ ಮಾತ್ರ ಈ ಸಮಾಜ ನಮ್ಮ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಂಡಂತೆ ಆಗುವದು ಎಂದು ಬೆಳಗಾವಿ ವಿಭಾಗದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸಹ ನಿರ್ದೇಶಕ ಹಾಗೂ ವಿಭಾಗೀಯ ಕಾರ್ಯದರ್ಶಿ ಎಮ್ ಎಸ್ ಪ್ರಸನ್ನಕುಮಾರ ಹೇಳಿದರು.
ಅವರು ಮಂಗಳವಾರದಂದು ಜಿ.ಪಂ, ಉಪನಿರ್ಧೇಶಕರ ಕಾರ್ಯಾಲಯ, ಗೋಕಾಕ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಕಲ್ಲೋಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡ ಪ್ರೌಢ ಶಾಲಾ ಮುಖ್ಯೋಪಾದ್ಯಾಯರ ಪ್ರೇರಣಾ ಕಾರ್ಯಾಗಾರದಲ್ಲಿ ಮಾತನಾಡಿದರು. ವಿದ್ಯಾರ್ಥಿಯ ಜೀವನದಲ್ಲಿ ಪ್ರೌಢ ಹಂತವು ಅತಿ ಮುಖ್ಯವಾದದ್ದು, ಜೀವನ ಸಾಗಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಸಮಯವಾಗಿರುತ್ತದೆ. ವಿದ್ಯಾರ್ಥಿಯ ಜೀವನ ಶೈಲಿಯನ್ನು ಬದಲಾಯಸಿ ಉನ್ನತ ವಿಚಾರಗಳನ್ನು ಅವರಿಗೆ ಕೊಟ್ಟಿದ್ದೆಯಾದರೆ ಪ್ರಬುದ್ಧ ಸಮಾಜದಲ್ಲಿ ಬೆಳೆಯಲು ಸಾದ್ಯವಾಗುವದು ಎಂದರು.
ಪರೀಕ್ಷಾ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದ ನಿಟ್ಟಿನಲ್ಲಿ ಕ್ರಮಕೈಗೊಳ್ಳ ಬೇಕು. ಶಾಲಾ ಪರಿಸರದಲ್ಲಿ ಅಗತ್ಯವಾದ ಪ್ರೋತ್ಸಾಹದ ಜೊತೆಯಲ್ಲಿ ಕ್ಲಿಷ್ಠ್ ಪರಿಕಲ್ಪನೆಗಳನ್ನು ಪರಿಹರಿಸಿ ಅಧ್ಯಯನಕ್ಕೆ ಅನುಕೂಲ ಮಾಡಬೇಕು. ಭಯ ಮುಕ್ತ ನಕಲು ರಹಿತ ಪರೀಕ್ಷೆಗಳಿಂದ ವಿದ್ಯಾರ್ಥಿಗಳ ಭವ್ಯ ಭವಿಷ್ಯತ್ತು ಉತ್ತಮವಾಗಿರುತ್ತದೆ. ಸ್ವತಂತ್ರವಾಗಿ ಬದುಕಲು ವಿದ್ಯಾರ್ಥಿಗಳಿಗೆ ಸಕಲ ಕೌಶಲ್ಯಗಳನ್ನು ಕಲಿಸುವದು ಸೂಕ್ತ ಎಂದು ಹೇಳಿದರು.
ಚಿಕ್ಕೋಡಿ ಡಿಡಿಪಿಐ ಎಮ್.ಜಿ ದಾಸರ ಮಾತನಾಡಿ, ವಿದ್ಯಾರ್ಥಿಗಳ ಜೀವನ ರೂಪಿಸಬೇಕಾದಲ್ಲಿ ಮೌಲ್ಯಯುಕ್ತ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಸಾದ್ಯವಾಗಿದೆ. ಅಂಕಗಳೆ ಮಾನದಂಡವಲ್ಲ ಬದಲಾಗಿ ಸಮಯ ಸಂದರ್ಭಕ್ಕನುಸಾರ ನಡೆದುಕೊಳ್ಳುವ ವರ್ತನೆಗಳು ಸಾಮಾಜಿಕವಾಗಿ ಬದಲಾಗುವಂತಿರಬೇಕು. ವಿದ್ಯಾರ್ಥಿಗಳು ಕಷ್ಟಪಟ್ಟು ಓದದೆ ಇಷ್ಟ ಪಟ್ಟು ಅಭ್ಯಾಸದ ಕಡೆ ಗಮನ ಕೊಡಬೇಕು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ತಯಾರಿ ಹಾಗೂ ಪರೀಕ್ಷಾ ಕೇಂದ್ರಗಳ ಸಿದ್ದತೆಗಳ ಕುರಿತು ವಿವರಿಸಿದರು.
ಪೋಬೆಷನರಿ ಡಿ.ವಾಯ್.ಎಸ್.ಪಿ ಪ್ರವೀಣ ಎಮ್, ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ, ನಕಲಿ ಪರ್ತಕರ್ತರು ಸಮಾಜ ಸೇವಕರೆಂಬ ಹೆಸರಿನ ಮುಖವಾಡ ಹಾಕಿಕೊಂಡ ಕಛೇರಿಗಳಿಗೆ ಶಾಲಾ ಕಾಲೇಜುಗಳಿಗೆ ಬರುತ್ತಿರುವ ಕುರಿತು ಗಮನಕ್ಕೆ ಬಂದಿದೆ. ಅಂತಹ ವ್ಯಕ್ತಿಗಳ ಬಗ್ಗೆ ಸಂಶಹ ಬಂದರೆ ಕೂಡಲೆ ನಮ್ಮ ಗಮನಕ್ಕೆ ತರಬೇಕು. ಪರೀಕ್ಷಾ ದಿನಗಳಲ್ಲಿ ಕೇಂದ್ರದ ಸುತ್ತಲು ನಿಷೇದಾಜ್ಞೆ ಜಾರಿಯಲ್ಲಿರುತ್ತದೆ. ಮೊಬೈಲ್ ಇನ್ನಿತರ ಎಲೆಕ್ಟ್ರಾನಿಕ ವಸ್ತುಗಳಿಗೆ ನಿಷೇದವಿದ್ದು ನಕಲು ಮಾಡುವದನ್ನು ತಡೆಗಟ್ಟಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣಕ್ಕೆ ಒಳ್ಳೇಯ ಪ್ರಜೆಗಳನ್ನು ನೀಡಿದಂತಾಗುವದು ಎಂದರು.
ಬಿ.ಇ.ಒ ಗಳಾದ ಜಿ.ಬಿ ಬಳಗಾರ, ಅಜೀತ ಮನ್ನಿಕೇರಿ ಮಾತನಾಡಿ, ವಲಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಮುಖ್ಯೋಪಾದ್ಯಯರುಗಳಿಗೆ ಪ್ರೇರಣಾದಾಯಕ ಕಾರ್ಯಾಗಾರಗಳನ್ನು ಏರ್ಪಡಿಸಿ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮವಾಗಿ ಸಾಗಲು ಮುಖ್ಯೋಪಾದ್ಯಾಯರು ವಿದ್ಯಾರ್ಥಿಗಳೊಂದಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು. ಪರೀಕ್ಷೆಗಳ ತಯಾರಿಯಾಗಿ ವಿದ್ಯಾರ್ಥಿಗಳ ಪ್ರವೇಶ ಪತ್ರ, ಪರೀಕ್ಷಾ ಕೇಂದ್ರಗಳ ವೀಕ್ಷಣೆ, ಆರೋಗ್ಯ ಹಾಗೂ ಮಾನಸಿಕವಾಗಿ ಸದೃಢರಾಗಿರಲು ಪ್ರೇರೆಪಿಸಬೇಕು. ವಿದ್ಯಾರ್ಥಿ, ಶಿಕ್ಷಕ, ಮುಖ್ಯೋಪಾಧ್ಯಾಯ ಪಾಲಕ ಪೋಷಕರು ಪ್ರಮುಖವಾಗಿ ಮಾಡಬೇಕಾದ ಕಾರ್ಯಗಳನ್ನು ವಿವರಿಸಿದರು.
ಕಾರ್ಯಾಗಾರದಲ್ಲಿ ಡಿಡಿಪಿಐ ಕಛೇರಿ ಶಿಕ್ಷಣಾಧಿಕಾರಿ ಎ.ಸಿ ಗಂಗಾಧರ, ಮದ್ಯಾಹ್ನ ಉಪಹಾರ ಯೋಜನೆಯ ದೀಪಕ ಕುಲಕರ್ಣಿ, ಡಿ.ವಾಯ್.ಪಿಸಿ ರೇವತಿ ಮಠದ, ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲಗಳಾದ ಟಿ.ಟಿ ನಡಕರ್ಣಿ, ಎಸ್.ಎ ನಾಡಗೌಡರ, ಬಿ.ಎಮ್ ವಣ್ಣೂರ, ಉಪಹಾರ ಯೋಜನೆಯ ಸಹಾಯಕ ನಿರ್ದೇಶಕ ಎ.ಬಿ ಮಲಬನ್ನವರ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಆರ್.ವಾಯ್ ಗಂಗರಡ್ಡಿ ಬಿ.ಆರ್.ಪಿಗಳಾದ ಕೆ.ಎಲ್.ಮೀಶಿ, ಎ.ಬಿ ಚವಡನ್ನವರ ಹಾಗೂ ಗೋಕಾಕ ಮೂಡಲಗಿ ವಲಯ ವ್ಯಾಪ್ತಿಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಮ್.ಪಿ ಶೇಗುನಶಿ ನಿರೂಪಿಸಿದರು. ಆರ್.ಎಸ್ ಎಮ್ಮಿ ಸ್ವಾಗತಿಸಿ, ಎಸ್.ವಾಯ್ ವಗ್ಗೆನ್ನವರ ವಂದಿಸಿದರು.

Related posts: