ಗೋಕಾಕ:ಅವ್ಯವಹಾರ ವೆಸಗುತ್ತಿರುವ ನಗರ ಭೂಮಾಪನ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ಅವ್ಯವಹಾರ ವೆಸಗುತ್ತಿರುವ ನಗರ ಭೂಮಾಪನ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 18 :
ಅವ್ಯವಹಾರ ವೆಸಗುತ್ತಿರುವ ನಗರ ಭೂಮಾಪನ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಿದರು.
ಸೋಮವಾರದಂದು ಮುಂಜಾನೆ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ನಗರ ಭೂಮಾಪನ ಅಧಿಕಾರಿ ಮತ್ತು ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಬಸವೇಶ್ವರ ವೃತ್ತದಿಂದ ಮಿನಿ ವಿಧಾನಸೌಧಕ್ಕೆ ಮೆರವಣಿಗೆಯ ಮೂಲಕ ಆಗಮಿಸಿ ಸುಮಾರು ಒಂದು ಘಂಟೆಗೂ ಹೆಚ್ಚುಕಾಲ ಧರಣಿ ನಡೆಸಿ ತಹಶೀಲ್ದಾರ ಪ್ರಶಾಂತ ಹೊಳೆಪ್ಪಗೋಳ ಅವರ ಮುಖಾಂತರ ಇಲಾಖೆಯ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ, ಲೋಕಾಯುಕ್ತರಿಗೆ, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಜಂಟಿ ನಿರ್ದೇಶಕರು ನಗರ ಭೂ ಮಾಪನ ಇಲಾಖೆ ಬೆಳಗಾವಿ ಇವರಿಗೆ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿದರು.
ಪ್ರತಿಭಟನಾ ನಿರತರನ್ನು ಉದ್ಧೇಶಿಸಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಕಳೆದ ಏಳೆಂಟು ವರ್ಷಗಳಿಂದ ಗೋಕಾಕ ನಗರ ಭೂ ಮಾಪನ ಅಧಿಕಾರಿ ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ಮೋಸವೆಸಗುತ್ತಿದ್ದಾರೆ. ಹಾತನಕಾಶೆ, ಸಿಟಿ ಸರ್ವೇ ಉತಾರ (ಮೋಜನಿ) ಸೇರಿದಂತೆ ಇನ್ನಿತರ ದಾಖಲೆಗಳನ್ನು ಪೂರೈಸಲು ಸರಕಾರ ಕೇವಲ ರೂ. 3/- ಶುಲ್ಕ ವಿಧಿಸಿದರೂ ಈ ಅಧಿಕಾರಿಯು ಇದರ ನೂರು ಪಟ್ಟು ಹೆಚ್ಚಿನ ಹಣ ಪಡೆದು ದಾಖಲೆಗಳನ್ನು ಪೂರೈಸಲು ಎರಡು-ಮೂರು ತಿಂಗಳ ಕಾಲ ಸಾರ್ವಜನಿಕರಿಗೆ ಸತಾಯಿಸುತ್ತಿದ್ದಾನೆ. ಇದರ ಬಗ್ಗೆ ಸಾಕಷ್ಟು ಬಾರಿ ಮೌಖಿಕವಾಗಿ ದೂರಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅವರು ನಗರದ ಅಂಬಿಗೇರ ಗಲ್ಲಿ ವ್ಯಾಪ್ತಿಯಲ್ಲಿಯ, ಮರಾಠಾ ಹಿಂಭಾಗದಲ್ಲಿಯ, ಭೋಜಗಾರ ಗಲ್ಲಿ ವ್ಯಾಪ್ತಿಯಲ್ಲಿ ಸೇರಿದಂತೆ, ಇನ್ನಿತರ ಪ್ರದೇಶಗಳಲ್ಲಿರುವ ಸರಕಾರಿ ಆಸ್ತಿಯನ್ನು ಸ್ಥಿತಿವಂತರಿಂದ ಬೇಕಾ ಬಿಟ್ಟಿ ಹಣ ಪಡೆದು ಉತಾರು ಮತ್ತು ಉತಾರ(ವ) ವಿಭಾಗ ಮಾಡಿಕೊಟ್ಟು ಸರಕಾರಕ್ಕೆ ಮೋಸವೆಸಗಿದ್ದಾರೆ. ಇದಲ್ಲದೇ ಮೃತ್ಯುಪತ್ರದಲ್ಲಿಯ ಉಲ್ಲೇಖಗಳನ್ನು ತಾವೇ ಸ್ವತಃ ಶರಾ ಬರೆದು ತಿದ್ದುವುದು, ಆಸ್ತಿಗಳನ್ನು ಎನ್.ಎ. ಮಾಡಲು ಮೋಜನಿ ಇಲಾಖೆ ಇದ್ದರೂ ಸಹ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಎನ್.ಎ. ಮಾಡುತ್ತಿದ್ದಾರೆ. ಗೋಕಾಕ ಮತ್ತು ಮೂಡಲಗಿ ಭಾಗದಲ್ಲಿ ಖಾಸಗಿ ಕಂಪನಿಗಳಿಂದ ಭಾರೀ ಪ್ರಮಾಣದ ಹಣ ಪಡೆದು ಸರಕಾರಿ ಕೆಲಸ ಬದಿಗೊತ್ತಿ ಖಾಸಗಿ ಮೋಜನಿಗಳನ್ನು ಮಾಡಿ ತಮ್ಮ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಈ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಇವರನ್ನು ತಕ್ಷಣದಲ್ಲಿ ಅಮಾನತ್ತುಗೊಳಿಸಿ, ತನಿಖೆ ನಡೆಸಿ, ಇವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಖಾನಪ್ಪನವರ ಆಗ್ರಹಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಪ್ರಶಾಂತ ಹೊಳೆಪ್ಪಗೋಳ ಅವರು ತಕ್ಷಣ ಕಾರ್ಯರೂಪ ಬರುವಂತೆ ಭೂಮಾಪನ ಇಲಾಖೆಯ ಜಂಟಿ ನಿರ್ದೇಶಕರ ಗಮನಕ್ಕೆ ತಂದು ಪ್ರಕರಣಗಳ ಬಗ್ಗೆ ತನಿಖೆ ಕೈಗೊಳ್ಳುವಂತೆ ಸೂಚಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನಿರ್ದೇಶಿಸಲಾಗುವುದೆಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ಸಾದಿಕ್ ಹಲ್ಯಾಳ, ದೀಪಕ ಹಂಜಿ, ಮಂಜುನಾಥ ಪ್ರಭುನಟ್ಟಿ, ರಮೇಶ ಕಮತಿ, ಮಹಾದೇವ ಮಕ್ಕಳಗೇರಿ, ಅಶೋಕ ಬಂಡಿವಡ್ಡರ, ಶೆಟ್ಟೆಪ್ಪಾ ಗಾಡಿವಡ್ಡರ, ಸುರೇಶ ಪತ್ತಾರ, ಕೆಂಪಣ್ಣಾ ಕಡಕೋಳ, ದೀಪಕ ಆಶಿ, ಮಲ್ಲು ಸಂಪಗಾರ, ದಸ್ತಗೀರ ಮುಲ್ಲಾ, ರವಿ ನಾಂವಿ, ಕಿರಣ ಕೊಳವಿ, ದುಂಡಪ್ಪಾ ಮೆಳವಂಕಿ, ವೆಂಕಟೇಶ ಕೌಜಲಗಿ, ಅಪ್ಪಯ್ಯಾ ತಿಗಡಿ, ಲಕ್ಷ್ಮಣ ಗೊರಗುದ್ದಿ, ರಮೇಶ ನಾಕಾ, ಯಲ್ಲಪ್ಪಾ ಧರ್ಮಟ್ಟಿ, ಸಂಜು ಗಾಡಿವಡ್ಡರ, ಮುತ್ತೆಪ್ಪಾ ಘೋಡಗೇರಿ, ದುರ್ಗಪ್ಪಾ ಬಂಡಿವಡ್ಡರ, ಯಶವಂತ ಗ್ಯಾನಪ್ಪನವರ, ರಾಮ ಕೊಂಗನೋಳಿ, ಹಣುಮಂತ ಅಮ್ಮಣಗಿ, ಸಂತು ಕೋಲಕಾರ, ಶಾನೂರ ಗಾಡಿವಡ್ಡರ, ಈರಪ್ಪಾ ರಾಜಪೂರೆ, ಶ್ರೀಪತಿ ದಳವಾಯಿ, ಹಣುಮಂತ ಕಮತಿ, ಆನಂದ ಬಿ.ಕೆ, ಸಿದ್ದಾರೂಢ ಪಿ.ಕೆ. ಸೇರಿದಂತೆ ಇನ್ನೂ ಅನೇಕರು ಇದ್ದರು.