ಗೋಕಾಕ:ಸಡಗರದಿಂದ ಜರುಗಿದ ಕಾಮಣ್ಣನಿಗೆ ಪೂಜೆ, ನೈವೆದ್ಯ ಸಮರ್ಪಿಸುವ ಕಾರ್ಯಕ್ರಮ
ಸಡಗರದಿಂದ ಜರುಗಿದ ಕಾಮಣ್ಣನಿಗೆ ಪೂಜೆ, ನೈವೆದ್ಯ ಸಮರ್ಪಿಸುವ ಕಾರ್ಯಕ್ರಮ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಮಾ 21 :
ಹೋಳಿ ಹಬ್ಬದ ಪ್ರಯುಕ್ತ ಗುರುವಾರ ಮಾ.21ರಂದು ಸಂಜೆ 7 ಗಂಟೆಗೆ ಗ್ರಾಮದ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಲಾದ ಕಾಮಣ್ಣನಿಗೆ ಪುರಜನರಿಂದ ಪೂಜೆ, ನೈವೆದ್ಯ ಸಮರ್ಪಿಸುವ ಕಾರ್ಯಕ್ರಮ ಸಡಗರದಿಂದ ನಡೆಯಿತು.
ರಾತ್ರಿ 10 ಗಂಟೆಗೆ ಕಾಮ ದಹನ ಸ್ಥಳದಲ್ಲಿ ಸಂಗ್ರಹಿಸಿದ ಕುಳ್ಳ, ಕಟ್ಟಿಗೆ ಒಟ್ಟಿಗೆ ಸೇರಿಸಿ ಕಾಮ ದಹನಕ್ಕೆ ಕಾಮಣ್ಣನ ಪ್ರತಿಷ್ಠಾಪಿಸಲಾಯಿತು. ಅಲ್ಲದೇ ಗ್ರಾಮದ ಎಲ್ಲೆಡೆ ಮೂರ್ನಾಲ್ಕು ದಿನಗಳಿಂದ ಯುವಕರು, ಮಕ್ಕಳಿಂದ ಹಲಗೆ, ತಮಟೆ ಬಾರಿಸುವ ನಿನಾದ ಕೇಳುತ್ತಿದೆ. ಯುವಕರು, ನಾಗರಿಕರು ಹೊಳಿ ಹಬ್ಬದ ಪ್ರಯುಕ್ತ ಹಂತಿ, ಲವಾಣಿ ಪದ ಒಬ್ಬರಿಗೊಬ್ಬರು ಜಿದ್ದಾ ಜಿದ್ದಿಯಾಗಿ ಹಾಡಿ ಕೇಳುಗರ ಮನ ರಂಜಿಸಿದರು.
ನೈಸರ್ಗಿಕ ಬಣ್ಣ ಬಳಕೆ: ಶುಕ್ರವಾರ ಮಾ.22 ರಂದು ಬೆಳಗ್ಗೆ 6 ಗಂಟೆಗೆ ಕಾಮ ದಹನ ಕಾರ್ಯಕ್ರಮ ನಡೆಯಲಿದೆ. ಬಳಿಕ ಬಣ್ಣ ಎರಚಾಟ ಜರುಗಲಿದ್ದು, ಈ ಬಾರಿ ನೈಸರ್ಗಿಕ ಬಣ್ಣ ಬಳಕೆ, ಮಧ್ಯ ಸೇವನೆಗೆ ಕಡಿವಾಣ ಹಾಕಲಾಗಿದೆ. ಗ್ರಾಮಕ್ಕೆ ಬಂದು ಹೋಗುವ ಅಪರಿಚಿತರಿಗೆ ಒತ್ತಾಯಪೂರ್ವಕ ಬಣ್ಣ ಎರಚಬಾರದು. ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರು ಶಾಂತಿ ಸೌಹಾರ್ದತೆಯಿಂದ ಹೋಳಿ ಹಬ್ಬ ಆಚರಿಸಬೇಕೆಂದು ಇಲ್ಲಿಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಸ್ಥಳೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಗ್ರಾಮದ ಸರ್ವ ಸಮುದಾಯದ ಹಿರಿಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಯುವಕರು, ಮಕ್ಕಳು, ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.