RNI NO. KARKAN/2006/27779|Saturday, December 14, 2024
You are here: Home » ಮುಖಪುಟ » ಬಸವ ಜಯಂತಿ ಅಂಗವಾಗಿ ಭಾವೈಕ್ಯತೆ ಸಾರಲಿದೆ ಗೋಕಾಕಿನ ಶೂನ್ಯ ಸಂಪಾದನಾ ಮಠ

ಬಸವ ಜಯಂತಿ ಅಂಗವಾಗಿ ಭಾವೈಕ್ಯತೆ ಸಾರಲಿದೆ ಗೋಕಾಕಿನ ಶೂನ್ಯ ಸಂಪಾದನಾ ಮಠ 

ಬಸವ ಜಯಂತಿ ಅಂಗವಾಗಿ ಭಾವೈಕ್ಯತೆ ಸಾರಲಿದೆ ಗೋಕಾಕಿನ ಶೂನ್ಯ ಸಂಪಾದನಾ ಮಠ

ಸಾಧಿಕ್ ಹಲ್ಯಾಳ, ಗೋಕಾಕ.

ಗೋಕಾಕ :  ಪ್ರಪಂಚದಲ್ಲಿ ಕಾಯಕ ಜೀವಿಗಳನ್ನು ಸಂಘಟಿಸಿದವರಲ್ಲಿ ಮೊದಲನೇ ಸ್ಥಾನದಲ್ಲಿ ಬರುವವರು ವಿಶ್ವ ಗುರು ಬಸವಣ್ಣ ಎಂಬುದು ಇತಿಹಾಸ. ಬಸವಣ್ಣ ನವರು  ಕಾಯಕ ಜೀವಿಗಳನ್ನು ಸಂಘಟಿಸುವ ಮೊದಲು ಯಾರು ಸಂಘಟಿತರಾಗಿರಲಿಲ್ಲ. ಕಾಯಕ ಜೀವಿಗಳು ತಮ್ಮ ಅಸ್ತಿತ್ವಕ್ಕಾಗಿ ಸದಾ ಹೋರಾಡುತ್ತಾ ಬಂದಿದ್ದಾರೆ ಎಂಬುದನ್ನು 12ನೇ ಶತಮಾನದಲ್ಲಿ ಅರಿತುಕೊಂಡವರು ಬಸವಣ್ಣನವರು. ಯಾವ ಆರ್ಥಿಕ ಶಕ್ತಿಯು ಇಲ್ಲಿದೆ ಕಾಯಕ ಜೀವಿಗಳ ಮೇಲೆ ಆತ್ಮ ಸ್ಥೈರ್ಯ ಮತ್ತು ಸಮಾನತೆಯ ಸಿದ್ದಾಂತ ಸಾರಿ ಎಲ್ಲರನ್ನು ಒಗ್ಗೂಡಿಸಿದ ಕೀರ್ತಿ ವಿಶ್ವ ಗುರುವಿಗೆ ಸಲ್ಲುತ್ತದೆ.

ಆದರೆ ಇಂದಿನ ತಂತ್ರಜ್ಞಾನ ಯುಗದ ರಭಸಕ್ಕೆ ಸಿಲುಕಿ ಬುದ್ಧ, ಬಸವ, ಅಂಬೇಡ್ಕರ ರಂತಹ ಜಗತ್ತು ಕಂಡ ಈ ಮಹಾನು ಪುರುಷರ ತತ್ವಾದರ್ಶಗಳನ್ನು ಮರೆತು ಇಂದು ಜೀವನ ಸಾಗಿಸುತ್ತಿದ್ದೇವೆ.

ಮಹಾನ್ ಪುರುಷ, ಪ್ರವಾದಿಗಳ ಜಯಂತಿಗಳು ಬಂದರೆ ಸಾಕು ಆಯಾ ಜನಾಂಗದವರು ಸೇರಿಕೊಂಡು ಜಯಂತ್ಯೋತ್ಸವಗಳನ್ನು ಆಚರಿಸಿ ನಮ್ಮ ಜವಾಬ್ದಾರಿ ಮುಗಿಯಿತು ಎಂದು ಮೈಮರೆತು ಬಿಡುತ್ತೇವೆ.

ಭಾವೈಕ್ಯಯ ನಾಡಿನಲ್ಲಿ ಜನ್ಮ ತಾಳಿರುವ ನಾವುಗಳು ಕನಿಷ್ಠ ಪರಿಜ್ಞಾನವಿಲ್ಲದವರ ಹಾಗೆ ವರ್ತಿಸಿ ಜಯಂತಿಗಳು ನಮಗೇನು ಸಂಬಂಧ, ಆಯಾ ಜನಾಂಗದವರು ಆಚರಿಸಿಕೊಳ್ಳುತ್ತಾರೆ ಎಂಬ ನಿರುತ್ಸಾಹ ತೋರಿ ಜಾರಿಕೊಳ್ಳುವ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುತ್ತಿದ್ದೇವೆ.

ಆದರೆ ಇಂತಹ ಸಾಮಾಜಿಕ ಜಂಜಾಟಗಳನ್ನು ಬದಿಗೊತ್ತಿ ಈ ಬಾರಿಯ ವಿಶ್ವ ಗುರು ಬಸವಣ್ಣನವರ 884ನೇ ಯ ಜಯಂತ್ಯೋತ್ಸವದ ಅಂಗವಾಗಿ ಇಲ್ಲಿಯ ಶೂನ್ಯ ಸಂಪಾದನ ಮಠವು ಸರ್ವಧರ್ಮಿಯರನ್ನು ಒಂದೆಡೆ ಸೇರಿಸಿ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳುವ ಮುಖೇನ ಭಾವೈಕ್ಯತೆಗೆ ಸಾಕ್ಷಿಯಾಗಲಿದೆ.

12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಯೋಗಿಗಳನ್ನು ಸಂಘಟಿಸಿದಂತೆ ಇಂದು ಗೋಕಾಕಿನ ಶೂನ್ಯ ಸಂಪದಾನ ಮಠದ ಮುರುಘರಾಜೇಂದ್ರ ಶ್ರೀಗಳು ಬಸವ ಜಯಂತಿ ಅಂಗವಾಗಿ ನಾಡಿನ ಸರ್ವಧರ್ಮಿಯವರನ್ನು ಒಗ್ಗೂಡಿಸಿ ಜನರ ಮನಸ್ಸಿನಲ್ಲಿ ಬೇರೂರಿರುವ ಮೇಲು, ಕೀಳು ಎಂಬ ಬೇಧ ಭಾವಗಳನ್ನು ದೂರು ಮಾಡಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಲು ಮುಂದಾಗಿದ್ದಾರೆ.

ಬಸವ ಜಯಂತಿ ಅಂಗವಾಗಿ ಮೆ.1 ರಂದು ಗೋಕಾಕಿನ ಶೂನ್ಯ ಸಂಪಾದನಮಠದ ಮ.ನಿ.ಪ್ರ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಲಿರುವ ಈ ಶೋಭಾ ಯಾತ್ರೆಯು ಹಲವು ವಿಶೇಷತೆಗಳಿಂದ ಕೂಡಿದೆ. ತಾಲೂಕಿನ ಸುಮಾರು 30 ಸಾವಿರಕ್ಕಿಂತ ಹೆಚ್ಚಿನ ಜನಸ್ತೋಮ ಈ ಭವ್ಯ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದೆ. ಬರೀ ಲಿಂಗವಂತ ಸಮಾಜದ ಜನರಿಗೆ ಮೀಸಲಾಗದೇ ಸರ್ವಧರ್ಮದ ಜನರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರಲ್ಲದೇ ಸರ್ವಧರ್ಮಿಯರ ಪ್ರವಾದಿಗಳ ಸುಮಾರು 35 ಕ್ಕೂ ಹೆಚ್ಚು ಭಾವಚಿತ್ರಗಳು ಈ ಭವ್ಯ ಶೋಭಾಯಾತ್ರೆಯಲ್ಲಿ ರಾರಾಜಿಸಲಿವೆ.

ಅಂದು ಮದ್ಯಾಹ್ನ 3.30 ಗಂಟೆಗೆ ನಗರದ ಕೊಳವಿ ಹನಮಂತ ದೇವರ ಗುಡಿಯಿಂದ ಪ್ರಾರಂಭವಾಗುವ ಶೋಭಾ ಯಾತ್ರೆಯು ನಗರದ ಪ್ರಮುಖದ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಸಮಾರೋಪಗೊಳ್ಳಲಿದೆ. ಈ ಶೋಭಾ ಯಾತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭಾಗವಹಿಸಲಿದ್ದಾರೆ. ಜೊತೆಗೆ ನಾಡಿನ 51 ಜನ ಮಾಠಾಧೀಶರು ಈ ಶೋಭಾಯಾತ್ರೆಗೆ ಸಾಕ್ಷಿಯಾಗಲಿದ್ದಾರೆ.

12ನೇ ಶತಮಾನದಲ್ಲಿ ಬಸವಣ್ಣನವರು ಕಂಡ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಗೋಕಾಕಿನ ಶೂನ್ಯ ಸಂಪದಾನಮಠದ ಶ್ರೀಗಳು ಸರ್ವಧರ್ಮದವರನ್ನು ಒಗ್ಗೂಡಿಸಿ ಶೋಭಾಯಾತ್ರೆಯ ನೆಪದಲ್ಲಿ ಶಾಂತಿ ಸಹಬಾಳ್ವೆಯ ಸಂದೇಶವನ್ನು ಸಾರುವ ಕಾರ್ಯವನ್ನು ಮಾಡುತ್ತಿರುವುದು ಸಂತಸದ ಸಂಗತಿ.

ಒಟ್ಟಾರೆಯಾಗಿ ಆಧುನಿಕ ಯುಗದ ರಭಸಕ್ಕೆ ಸಿಲುಕಿ ಭಾವೈಕ್ಯತೆಯನ್ನು ಮರೆಯುತ್ತಿರುವ ಜನರಿಗೆ ನಾವೆಲ್ಲರೂ ಭಾರತಾಂಬೆಯ ಮಕ್ಕಳು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾವೆಲ್ಲರೂ ಒಂದೇ ಎಂಬ ಘೋಷವಾಕ್ಯವನ್ನು ಮತ್ತೊಮ್ಮೆ ನೆನಪಿಸುವ ಚಿಕ್ಕ ಪ್ರಯತ್ನ ಗೋಕಾವಿ ನಾಡಿನ ಶೂನ್ಯ ಸಂಪಾದನ ಮಠದ ಪೂಜ್ಯ ಮುರುಘರಾಜೇಂದ್ರ ಶರಣರು ಮಾಡುತ್ತಿರುವುದು ನಮ್ಮ ಹೆಮ್ಮೆ

Related posts: