ಮೂಡಲಗಿ:ಸಹಕಾರ ಕ್ಷೇತ್ರಕ್ಕೆ ಬಸನಗೌಡ ಪಾಟೀಲರ ಸೇವೆ ಅನನ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ.
ಸಹಕಾರ ಕ್ಷೇತ್ರಕ್ಕೆ ಬಸನಗೌಡ ಪಾಟೀಲರ ಸೇವೆ ಅನನ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ.
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 4 :
ಸಹಕಾರಿ ಕ್ಷೇತ್ರದಲ್ಲಿ ಬಸನಗೌಡ ಪಾಟೀಲ(ನಾಗನೂರ) ಅವರ ಸೇವೆ ಅಪಾರವಾಗಿದ್ದು, ಗೋಕಾಕ ಟಿಎಪಿಸಿಎಂಎಸ್ ಅಭಿವೃದ್ಧಿಯಲ್ಲಿ ಬಸನಗೌಡರ ಮಾರ್ಗದರ್ಶನ ಅವಶ್ಯವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಾಗನೂರ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದ ಸತ್ಕಾರ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಸನಗೌಡರು ತಮ್ಮ ಇಳಿವಯಸ್ಸಿನಲ್ಲಿಯೂ ನವ ಯುವಕರಂತೆ ಚೈತನ್ಯದ ಚಿಲುಮೆಯಂತೆ ಸಹಕಾರಿ ರಂಗದ ಪ್ರಗತಿಗೆ ಈಗಲೂ ದುಡಿಯುತ್ತಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಗೋಕಾಕ ಟಿಎಪಿಸಿಎಂಎಸ್ ಇದರ ಅಧ್ಯಕ್ಷರಾಗಿ ಸುದೀರ್ಘ 25 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದಾರೆ. ಘಟಪ್ರಭಾ ಜೆ.ಜಿ. ಆಸ್ಪತ್ರೆ, ಚಂದರಗಿ ಕ್ರೀಡಾ ಶಾಲೆಯ ಅಧ್ಯಕ್ಷ-ದಿಗ್ದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಗನೂರ ಪಟ್ಟಣದ ಪ್ರಗತಿಯಲ್ಲಿಯೂ ಪಾಟೀಲರ ಪಾತ್ರ ಮಹತ್ವದ್ದಾಗಿದೆ ಎಂದ ಅವರು, ಬಸನಗೌಡ ಪಾಟೀಲ ಅವರು ಸಹಕಾರಿ ಕ್ಷೇತ್ರದ ಅಜಾತ ಶತ್ರು ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಗೋಕಾಕ ಟಿಎಪಿಸಿಎಂಎಸ್ ನೂತನ ಅಧ್ಯಕ್ಷ ಅಶೋಕ ನಾಯಿಕ, ಉಪಾಧ್ಯಕ್ಷ ವಿಠ್ಠಲ ಪಾಟೀಲ ಮತ್ತು ದಿಗ್ಧರ್ಶಕ ಮಂಡಳಿಯ ಸದಸ್ಯರು ಚಂದರಗಿ ಕ್ರೀಡಾ ಶಾಲೆಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿಮಿತ್ಯ ಬಸನಗೌಡ ಪಾಟೀಲ ಅವರನ್ನು ಸತ್ಕರಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಬಸನಗೌಡ ಪಾಟೀಲ ಅವರು, ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಯಿತು. ಜಾರಕಿಹೊಳಿ ಸಹೋದರರ ಸಮರ್ಥ ಮಾರ್ಗದರ್ಶನದಲ್ಲಿ ಗೋಕಾಕ ಹಾಗೂ ಹೊಸದಾಗಿ ರಚನೆಯಾದ ಮೂಡಲಗಿ ತಾಲೂಕಿನ ಬಹುತೇಕ ಸಂಘ ಸಂಸ್ಥೆಗಳ ಚುನಾವಣೆಗಳು ಅವಿರೋಧವಾಗಿ ಆಯ್ಕೆ ಮಾಡುತ್ತಿರುವುದು ಜಾರಕಿಹೊಳಿ ಸಹೋದರರ ನಾಯಕತ್ವಕ್ಕೆ ಸಂದ ಗೌರವವೆಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಉಪಾಧ್ಯಕ್ಷ ವಿಠ್ಠಲ ಪಾಟೀಲ, ನಿರ್ದೇಶಕರಾದ ಬಸಗೌಡ ಪಾಟೀಲ(ಮೆಳವಂಕಿ), ಶಿವನಗೌಡ ಪಾಟೀಲ, ಸುಭಾಸ ಹುಕ್ಕೇರಿ, ಈಶ್ವರ ಬೆಳಗಲಿ, ಗುರುನಾಥ ಕಂಕಣವಾಡಿ, ಮುಖಂಡರಾದ ಚಂದ್ರಪ್ಪ ಬೆಳಗಲಿ, ಕೆಂಚಗೌಡ ಪಾಟೀಲ, ರಾವಸಾಬ ಬೆಳಕೂಡ, ಗಜಾನನ ಯರಗಣವಿ, ಬಾಳಗೌಡ ಪಾಟೀಲ, ಬಸವರಾಜ ತಡಸನವರ, ಲಕ್ಷ್ಮಣ ಪಡದಲ್ಲಿ, ವಿಠ್ಠಲ ಗುಡೆನ್ನವರ, ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.