RNI NO. KARKAN/2006/27779|Friday, November 8, 2024
You are here: Home » breaking news » ಘಟಪ್ರಭಾ:ಅರಭಾವಿಯಿಂದಲೇ 50 ಸಾವಿರ ಮತಗಳ ಮುನ್ನಡೆ : ಸಂಸದ ಸುರೇಶ ಅಂಗಡಿ ವಿಶ್ವಾಸ

ಘಟಪ್ರಭಾ:ಅರಭಾವಿಯಿಂದಲೇ 50 ಸಾವಿರ ಮತಗಳ ಮುನ್ನಡೆ : ಸಂಸದ ಸುರೇಶ ಅಂಗಡಿ ವಿಶ್ವಾಸ 

ಅರಭಾವಿಯಿಂದಲೇ 50 ಸಾವಿರ ಮತಗಳ ಮುನ್ನಡೆ : ಸಂಸದ ಸುರೇಶ ಅಂಗಡಿ ವಿಶ್ವಾಸ

 
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 7 :

 

ಏ.23 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರ ಸಹಕಾರದಿಂದ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸುವ ವಿಶ್ವಾಸವನ್ನು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಸುರೇಶ ಅಂಗಡಿ ವ್ಯಕ್ತಪಡಿಸಿದರು.
ರವಿವಾರದಂದು ಪ್ರಭಾಶುಗರ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಜರುಗಿದ ಅರಭಾವಿ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಶಕ್ತಿಯಿಂದಲೇ ಅರಭಾವಿ ಮತಕ್ಷೇತ್ರವೊಂದರಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ದೊರೆಯಲಿದೆ ಎಂದು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿ ಕುಟುಂಬಕ್ಕೆ ಸರ್ಕಾರದಿಂದ ಸಾಕಷ್ಟು ಯೋಜನೆಗಳನ್ನು ನೀಡಿದ್ದೇವೆ. ಬಿಪಿಎಲ್ ಕುಟುಂಬಗಳಿಗೆ ಎಲ್‍ಪಿಜಿ ಗ್ಯಾಸ್ ನೀಡಿದ್ದೇವೆ. ಅಪಘಾತ ವಿಮಾ ಸೌಲಭ್ಯ ದೊರಕಿಸಿಕೊಟ್ಟಿದ್ದೇವೆ. ಮುದ್ರಾ ಯೋಜನೆಯನ್ನು ಜಾರಿ ಗೊಳಿಸಿದ್ದೇವೆ. ಅಂಬೇಡ್ಕರ ಅವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕೆಲ ಪಕ್ಷಗಳು ಅಂಬೇಡ್ಕರ ಅವರಿಗೆ ಅಗೌರವ ಸೂಚಿಸುತ್ತಿವೆ. ಅಂಬೇಡ್ಕರ ಅವರು ಜಗತ್ತಿನಲ್ಲಿಯೇ ದೊಡ್ಡ ಸಂವಿಧಾನ ರಚಿಸಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ನಾವಿಂದು ಅಧಿಕಾರ ಅನುಭವಿಸುತ್ತಿದ್ದೇವೆ ಎಂದರೆ ಅದಕ್ಕೆ ಡಾ.ಅಂಬೇಡ್ಕರ ಅವರ ಸಂವಿಧಾನವೇ ಕಾರಣವೆಂದು ಹೇಳಿದರು.
ಕಳೆದ ಮೂರು ಅವಧಿಗಳಲ್ಲಿ ಬೆಳಗಾವಿ ಲೋಕಸಭಾ ವ್ಯಾಪ್ತಿಯ ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಬೆಳಗಾವಿ ಮಹಾನಗರದಲ್ಲಿ 2000 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ ಸಿಟಿ, ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರೂ., 12 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ರೈಲು ನಿಲ್ದಾಣ ಮತ್ತು 4 ಕೋಟಿ ರೂ. ವೆಚ್ಚದಲ್ಲಿ ಘಟಪ್ರಭಾ ಮೇಲ್ದರ್ಜೆ ಕಾಮಗಾರಿ, 4 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ ಭವನ ನಿರ್ಮಾಣ, ಬೆಳಗಾವಿಯಲ್ಲಿ ಪಾಸಪೋರ್ಟ ಕಛೇರಿ, ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ, ಕೇಂದ್ರೀಯ ಮಹಾವಿದ್ಯಾಲಯ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಜೊತೆಗೆ ಬೆಳಗಾವಿಯನ್ನು ರಾಜ್ಯದ 2ನೇ ರಾಜಧಾನಿಯನ್ನು ಘೋಷಿಸಲು ಪ್ರಯತ್ನಿಸಿದ್ದೇನೆ. ಕಳೆದ 15 ವರ್ಷಗಳ ಅವಧಿಯಲ್ಲಿ 54 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಮಾಡಲಾಗಿದೆ ಎಂದು ತಮ್ಮ ಸಾಧನೆಗಳನ್ನು ವಿವರಿಸಿದರು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ನಿಗಮದ ಸದಸ್ಯ ಜಗದೀಶ ಹಿರೇಮನಿ ಮಾತನಾಡಿ, ಸಂಸದ ಸುರೇಶ ಅಂಗಡಿಯವರು 4ನೇ ಬಾರಿಗೆ ಚುನಾವಣಾ ಕಣದಲ್ಲಿದ್ದು, ಈ ಬಾರಿ ಆಯ್ಕೆಯಾದರೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಲಿದ್ದಾರೆ. ಇದರಿಂದ ಬೆಳಗಾವಿ ಜಿಲ್ಲೆಯು ಸಮಗ್ರ ಅಭಿವೃದ್ಧಿ ಕಾಣಲಿದೆ ಎಂದು ಹೇಳಿದರು.
ಆರ್‍ಎಸ್‍ಎಸ್ ಮುಖಂಡ ಕೃಷ್ಣಾನಂದ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗೂಳಪ್ಪ ಹೊಸಮನಿ, ಗುರುಪಾದ ಕಳ್ಳಿ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಅರಭಾವಿ ಮಂಡಳ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ ವೇದಿಕೆಯಲ್ಲಿದ್ದರು.

Related posts: