RNI NO. KARKAN/2006/27779|Monday, November 25, 2024
You are here: Home » breaking news » ಖಾನಾಪುರ:ಮೂಲಭೂತ ಸೌಲಭ್ಯಗಳಿಂದ ದೂರ ಉಳಿದ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮ

ಖಾನಾಪುರ:ಮೂಲಭೂತ ಸೌಲಭ್ಯಗಳಿಂದ ದೂರ ಉಳಿದ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮ 

ಮೂಲಭೂತ ಸೌಲಭ್ಯಗಳಿಂದ ದೂರ ಉಳಿದ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮ

ವಿಶೇಷ ವರದಿ: ಕಾಶೀಮ ಹಟ್ಟಿಹೊಳಿ, ಖಾನಾಪುರ

ಖಾನಾಪೂರ ತಾಲೂಕಿನ ದಕ್ಷಿಣದ ಕಟ್ಟಕಡೆಯ ಭಾಗಲ್ಲಿರುವ,ಧಾರವಾಡ-ಗೋವಾ ಮಾರ್ಗದ ಪಕ್ಕ ಕಾಡಿನಿಂದ ಆವೃತ್ತಗೊಂಡ ಸೃಷ್ಟಿ ಸೌಂದರ್ಯದ ಮಡಿಲಲ್ಲಿ ಸ್ಥಿತಗೊಂಡ ಗ್ರಾಮವೇ ನಾಗರಗಾಳಿ ಎಂಬ ಪುಟ್ಟ ಗ್ರಾಮ.ಲಿಂಗನಮಠದಿಂದ,ಗೋಧೋಳಿ,ತಾವರಗಟ್ಟಿ ನಂತರ ಬರುವ ಗ್ರಾಮವೇ ನಾಗರಗಾಳಿ.ಇಲ್ಲಿನ ಜನಸಂಖ್ಯೆ ಸುಮಾರು 5-6 ನೂರು ಮಾತ್ರ.ಗ್ರಾ.ಪಂ. ಹೊಂದಿರುವ ಈ ಗ್ರಾಮ ಮೂಲಭೂತ ಸೌಕರ್ಯಗಳಿಂದ ಮಾರು ದೂರ ಉಳಿದಿದೆ.ಅಪರೂಪಕ್ಕೆಂಬಂತೆ ಕ್ಯಾನರಾ ಬ್ಯಾಕ್ ಇದೆ.

ಹೆಚ್ಚಿನ ಪ್ರಮಾಣದಲ್ಲಿ ಮರಾಠಿ ಭಾಷಿಕರಿರುವ ಗ್ರಾಮ ಹಿಂದುಳಿದ ಜಾತಿ,ಜನಾಂಗ ಹಾಗೂ ಕೆಲ ಲಿಂಗಾಯತ ಕುಟುಂಬಗಳು ಇಲ್ಲಿ ಇವೆ.ಕಲಮೇಶ್ವರ ಹಾಗೂ ಮಾರುತಿ ಮಂದಿರಗಳಿಗೆ ಹೋಗುವ ರಸ್ತೆ ಮಾತ್ರ ಕಳಪೆ ಗುಣಮಟ್ಟದ ಡಾಂಬರೀಕರಣವಾಗಿದ್ದು ಉಳಿದ ಗ್ರಾಮದ ರಸ್ತೆಗಳು ಕಲ್ಲು ಮಣ್ಣಿನಿಂದ ಕೂಡಿವೆ.

ಯಾವದೇ ರೀತಿಯ ರಿಪೇರಿ ಇಲ್ಲ.ಸಿ.ಸಿ.ರಸ್ತೆಗಳಿಲ್ಲದೆ ಹಾಳಾದ ರಸ್ತೆಗಳೇ ಕಾಣುತ್ತವೆ.ವಿದ್ಯುತ್ ಕಂಭಗಳು ಒರಗಿದ ಸ್ಥಿತಿಯಲ್ಲಿದ್ದು ಇಂದು-ನಾಳೆ ಬೀಳುವಂತಿವೆ,ನಿರಂತರ ಜ್ಯೋತಿಯ ಭಾಗ್ಯವೂ ಇಲ್ಲದೆ ಜನ ಪರದಾಡುವ ಸ್ಥಿತಿ ಎದ್ದು ಕಾಣುತ್ತದೆ.ಕುಡಿಯುವ ನೀರಿನ ಸಮರ್ಪಕ ಪೂರೈಕೆ ಇಲ್ಲ.ಅನೇಕ ಬೋರವೆಲ್ ಗಳು ದುರಸ್ಥಿ ಕಾಣದೆ ಕುಳಿತಿವೆ.ಮೋಬೈಲ್ ಟವರ್ ಇಲ್ಲದ್ದರಿಂದ ಹೊರ ಜಗತ್ತಿನ ಸಂಪರ್ಕ ಇಲ್ಲಿಯ ಜನರಿಗೆ ಕಷ್ಟಸಾಧ್ಯವಾಗಿದೆ.ಕೆಲ ನಿಗದಿತ ಸ್ಥಳಗಳಲ್ಲಿ ನಿಂತು ಬೇರೆ ಗ್ರಾಮಗಳಿಂದ ಸಿಗುವ ಅಲ್ಪಸ್ವಲ್ಪ ತರಂಗಗಳ ದೂರವಾಣಿ ಸಂಪರ್ಕಕ್ಕಾಗಿ ಪರದಾಡುವ ದೃಶ್ಯ ಕಂಡುಬರುತ್ತದೆ.ಸ್ಥಳಿಕರು ಮೋಬೈಲ್ ಟವರ್ ಸ್ಥಾಪಿಸಲು ಜಾಗ ಒದಗಿಸಲು ಸಿದ್ಧರಿದ್ದಾರೆ.ಜನಪ್ರತಿನಿಧಿಗಳಿಗೆ,ಶಾಸಕರಿಗೆ,ಸರ್ಕಾರಕ್ಕೆ ಹಲವಾರು ಬಾರಿ ವಿನಂತಿ ಮಾಡಿಕೊಂಡರೂ ಏನೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲು ಬಿಚ್ಚಿಟ್ಟರು.ಈ ವಿಚಾರವಾಗಿ ಯುವಕರ ದಂಡೇ ಬಂದು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.

ಬರದ ಭವಣೆ ತೀವ್ರವಿದ್ದು ಬಿಸಿಲಿನ ಬೇಗೆ ವಿಪರೀತವಾಗಿದೆ.ಜನಜಾನುವಾರುಗಳಿಗೆ ಕುಡಿಯಲು ಮೂಲ ಆಕರವಾಗಿದ್ದ ಕೆರೆ ಕಟ್ಟೆಗಳು,ಹಳ್ಳಕೊಳ್ಳಗಳು ಬತ್ತಿ ಬರಡಾಗಿವೆ.ಇದರಿಂದ ಕುಡಿವ ನೀರಿನ ಹಾಹಾಕಾರ ಹೆಚ್ಚಾಗಿದೆ.ರೈತರು ಯಾವುದೇ ಬೆಳೆ,ಫಸಲು ಇಲ್ಲದೆ ಕಂಗಾಲಾಗಿದ್ದಾರೆ.ದುಡಿಯುವ ಕೈಗಳಿಗೆ ಕೆಲಸ ಇಲ್ಲದಾಗಿದೆ.ಈ ಹಿಂದೆ ಬೆಳೆದ ರೈತರ ಬೆಳೆಗಳು ಕಾಡು ಪ್ರಾಣಿಗಳ ಪಾಲಾಗುತ್ತಿವೆ.ಕಾಡಂಚಿನ ಹೊಲಗದ್ದೆಗಳ ಸುತ್ತಲು ಸೋಲಾರ್ ತಂತಿ ಬೇಲಿ ಅಳವಡಿಸಲು ಜನರು ಆಗ್ರಹಿಸುತ್ತಾರೆ.ಜನವಸತಿ ಪ್ರದೇಶಕ್ಕೆ ಕರಡಿ,ಆನೆ,ನರಿ,ಕಡವೆ,ಕಾಡುಕೋಣ ಮುಂತಾದ ಕಾಡು ಪ್ರಾಣಿಗಳು ಹಿತ್ತಲದಲ್ಲಿಯ ಬಾಳೆ,ಚಿಕ್ಕು,ಗಿಡಗಳ ಮೇಲೆ ದಾಳಿ ಇಟ್ಟು ಹಾಳು ಮಾಡುತ್ತಿವೆ.ಸಣ್ಣ ಮಕ್ಕಳು,ಮಹಿಳೆಯರು,ವೃದ್ಧರ ಮೇಲೆ ಈ ಕಾಡು ಪ್ರಾಣಿಗಳು ದಾಳಿ ಮಾಡುತ್ತವೆ ಇದರಿಂದ ಜನ ಜೀವ ಭಯದಿಂದ ಬದುಕು ಸಾಗಿಸುವಂತಾಗಿದೆ.ಕಾಡಿನ ಸುತ್ತಲೂ 5-6 ಅಡಿ ಟ್ರೆಂಚ್ ತೆಗೆದರೂ ಪ್ರಯೋಜನವಾಗಿಲ್ಲ.ಕಾಡು ಪ್ರಾಣಿಗಳು ದಾಳಿ ಇಡುವುದನ್ನು ಬಿಡ್ಡಿಲ್ಲ.

ಸಮೀಪದಲ್ಲಿಯೇ ವಜ್ರಾ ಫಾಲ್ಸ್ ಇದ್ದು ದುರ್ಗಮ ಕಾಡಿನಲ್ಲಿ ಮನಮೋಹಕ ಜಲಪಾತವಿದ್ದು,ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಅಲ್ಲಿಗೆ ಹೋಗಬೇಕಾಗುತ್ತದೆ.

ಇಲ್ಲಿ 5ನೇ ತರಗತಿ ವರೆಗೆ ಮಾತ್ರ ಶಿಕ್ಷಣ ನೀಡುವ ಪ್ರಾಥಮಿಕ ಶಾಲೆ ಇದೆ.ಮುಂದಿನ ತರಗತಿಗಳಿಗೆ ಅಭ್ಯಸಿಸಲು ಸಮೀಪದ ಕೀರ ಹಲಸಿ,ಕುಂಬಾರ್ಡಾಕ್ಕೆ ತೆರಳಬೇಕು.ಗ್ರಾಮದ ಸಮೀಪ ರೈಲು ಮಾರ್ಗ ಇರುವುದರಿಂದ ಕೆಲ ರೈತರ ಹೊಲಗಳಿಗೆ ತೆರಳಲು ಸಾಧ್ಯವಾಗದೆ ಪಡ ಜಮೀನುಗಳು ಕಂಡುಬರುತ್ತವೆ.ರೈತರ ಅನುಕೂಲಕ್ಕಾಗಿ ಗೇಟ್ ಹಚ್ಚಿ ದಾರಿ ಮಾಡಿಕೊಟ್ಟಿಲ್ಲ ಎಂದು ಕೆಲ ಯುವಕರು ನೈಜ ಪರಿಸ್ಥಿತಿಯ ಚಿತ್ರಣ ನೀಡಿದರು.

ಕುಡಿವ ನೀರಿನ ವ್ಯವಸ್ಥೆ,ಜಮೀನುಗಳ ಸುತ್ತಲು ಬೇಲಿ ಅಳವಡಿಕೆ,ಮೋಬೈಲ್ ಟವರ ಸ್ಥಾಪನೆ,ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಣೆ ಮುಂತಾದ ಮೂಲಭೂತ ಸೌಲಭ್ಯಗಳಿಗಾಗಿ ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸುತ್ತಾರೆ.

Related posts: