ಬೆಟಗೇರಿ:ಬೆಟಗೇರಿ ಸುತ್ತಮುತ್ತ ಏನ್ ಬಿಸಿಲು..! ತಂಪು ಪಾನೀಯಾಕ್ಕೆ ಮೊರೆಹೋಗುತ್ತಿರುವ ಜನತೆ
ಬೆಟಗೇರಿ ಸುತ್ತಮುತ್ತ ಏನ್ ಬಿಸಿಲು..! ತಂಪು ಪಾನೀಯಾಕ್ಕೆ ಮೊರೆಹೋಗುತ್ತಿರುವ ಜನತೆ
*ಅಡಿವೇಶ ಮುಧೋಳ ಬೆಟಗೇರಿ.
ಗೋಕಾಕ ತಾಲೂಕಿನ ಬೆಟಗೇರಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಿಸಿಲು ದಿನೇದಿನೆ ಏರುತ್ತಿದ್ದು, ಜನರು ಈಗಲೇ ಬಿಸಿಲಿನ ಝಳ ತಾಳಲಾರದೆ ನೆರಳು ಮತ್ತು ತಂಪು ಪಾನಿಯಗಳಿಗೆ ಮೊರೆಹೋಗುತ್ತಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಈ ದಿಗಳಲ್ಲಿ ಉಷ್ಣಾಂಶ 33 ರಿಂದ 35 ಡಿಗ್ರಿ ಸೆಲ್ಸಿಯಸ್ ಇದ್ದದ್ದು, ಕಳೆದೊಂದು ವಾರದಿಂದ ಇಲ್ಲಿ ಈಗ ಉಷ್ಣಾಂಶ 34-37 ಡಿಗ್ರಿ ಸೆಲ್ಸಿಯಸೆಗೆ ತಲುಪಿದೆ. ಬುಧವಾರ ಏ.10 ರಂದು ಉಷ್ಣಾಂಶ 35-40 ಕ್ಕೂ ಅಧಿಕ ಡಿಗ್ರಿ ಸೆಲ್ಸಿಯಸೆಗೆ ತಲುಪಿತ್ತು. ಈಗ ಏಪ್ರೀಲ್ ಮೊದಲ ವಾರದಲ್ಲಿ ಈ ಸ್ಥಿತಿಯಾದರೆ ಇನ್ನೂ ಏಪ್ರಿಲ್, ಮೇ ತಿಂಗಳಲ್ಲಿ ಹೇಗೆ ಎಂಬ ಚಿಂತೆ ಇಲ್ಲಿಯ ಜನರನ್ನು ಕಾಡುತ್ತಿದೆ. ಹೀಗಾಗಿ ಬೇಸಿಗೆ ಬಿಸಿಲಿನ ಝಳ ತಪ್ಪಿಸಿಕೊಳ್ಳಲು ವೃದ್ಧರು, ವಯಸ್ಕರರು ಗಿಡ-ಮರಗಳ ನೆರಳು ಹುಡುಕಿದರೆ, ಮಕ್ಕಳು, ಯುವಕರು ವಿವಿಧ ತಂಪು ಪಾನೀಯಗಳಿಗೆ ಮೊರೆ ಹೋಗಿ ತಮ್ಮ ದೇಹಕ್ಕೆ ತಂಪು ತಣಿಸಿಕೊಳ್ಳಲು ವಿವಿಧ ರೀತಿಯ ಕಸರತ್ತು ಮಾಡುವುದು ಇಲ್ಲಿ ಸಹಜ ಸಂಗತಿಯಾಗಿದೆ.
ಇಲ್ಲಿಯ ಪ್ರಮುಖ ಸ್ಥಳಗಳಲ್ಲಿರುವ ಪಾನ ಬೀಡಾ, ಕೋಲ್ಡ್ರಿಂಕ್ಸ್ ಮತ್ತೀತರ ಅಂಗಡಿಗಳಲ್ಲಿ ವಿವಿಧ ತಂಪು ಪಾನೀಯ, ಐಸ್-ಕ್ರೀಮ್, ತೆಂಗಿನ ಎಳೆನೀರು, ಹಣ್ಣಿನ ರಸ ಇನ್ನೀತರ ದೇಹಕ್ಕೆ ತಂಪು ನೀಡುವ ವಸ್ತುಗಳಿಗೆ ಶ್ರೀಮಂತರು ಮೊರೆ ಹೋಗಿ ಖರೀದಿಸಿ ತಮ್ಮ ಹೊಟ್ಟೆಗೆ ತಂಪು ತಣಿಸಿಕೊಳ್ಳುತ್ತಿದ್ದಾರೆ. ಬಡವರು ಮಾತ್ರ ತಮ್ಮ ಮನೆಗಳಲ್ಲಿರುವ ಮಣ್ಣಿನ ಮಡಕೆ, ತತ್ರಾನಿಯಲ್ಲಿ ನೀರು ಸಂಗ್ರಹಿಸಿ ಹರಕು ತಟ್ಟು ಅವುಗಳ ಸುತ್ತ ಹೊದಿಸಿ ನೀರು ತಂಪಾಗಿಸಿಕೊಂಡು, ತಂಪಾದ ನೀರು ಕುಡಿದು ತಮ್ಮ ದೇಹ ತಂಪಾಗಿಸಿಕೊಳ್ಳುತ್ತಿರುವುದು ನಿಜ ಸಂಗತಿಯಾಗಿದೆ. ಇನ್ನೊಂದಡೆ ಇಲ್ಲಿಯ ಪಾದಚಾರಿ, ವಾಹನ ಸವಾರರಿಗೆ ರಸ್ತೆಯಲ್ಲಿ ಧೂಳು, ಬಿಸಿಲಿನ ಝಳ ಮೈ ಉರಿಸುತ್ತಿದೆ.
ಮಳೆಯ ನಿರೀಕ್ಷೆಯಲ್ಲಿ ಜನತೆ: ಏಪ್ರೀಲ್ ಮೊದಲ ವಾರ ಈ ಸಲ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಸಿಲಿನ ತಾಪದಿಂದ ತತ್ತರಿಸುತ್ತಿರುವ ಜನರು ಮಳೆಗಾಗಿ ಆಕಾಶದ ಕಡೆಗೆ ಮುಖ ಮಾಡಿ ನೋಡುವಂತಾಗಿದೆ. ಜನತೆ ಮಳೆಯ ನಿರೀಕ್ಷೆಯಲ್ಲಿದ್ದು, ಒಂದು ದೊಡ್ಡ ಮಳೆಯಾದರೆ ಸಾಕು ಭೂಮಿ ತಂಪಾಗುವುದು, ಬಿಸಿಲಿನ ತಾಪ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದೆಂಬ ಲೆಕ್ಕಾಚಾರದಲ್ಲಿ ಅಲ್ಲಲ್ಲಿ ತಂಪಾದ ನೆರಳಲ್ಲಿ ಕುಳಿತು, ನಿಟ್ಟೂಸಿರು ಬಿಡುತ್ತಾ ವೃದ್ದರು ತಮ್ಮ-ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಈಗಂತೂ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲವಾದರೂ ಬಿಸಿಲಿನ ತಾಪಮಾನ ಹೀಗೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋದರೆ ಮೇ ತಿಂಗಳಲ್ಲಿ ಬೋರ್‍ವೆಲ್, ತೆರದ ಬಾಂವಿಗಳ ಅಂತರಜಲಮಟ್ಟ ಸಂಪುರ್ಣ ಕುಸಿದು ಕುಡಿಯುವ ಹನಿ ನೀರಿಗೂ ಪರದಾಡುವ ದುಸ್ಥಿತಿ ಎದುರಾಗಬಹುದಾದ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಬೇಸಿಗೆಯ ಬಿಸಿಲಿಗಿಂತ ಈ ವರ್ಷ ಬೇಸಿಗೆಯ ಬಿಸಿಲು ಹೆಚ್ಚಾಗಿದ್ದರಿಂದ ಹಗಲು ಭೂಮಿ ಬಿಸಿಲು ಝಳಕ್ಕೆ ಕಾದು, ತಡರಾತ್ರಿವರೆಗೂ ಬಿಸಿ ಗಾಳಿ ಸೂಸುತ್ತಿರುತ್ತದೆ. ಜನರು ತಮ್ಮ ತಮ್ಮ ಮನೆಗಳ ಹೊರಗೆ ಕಟ್ಟೆಯ ಮೇಲೆ ಕುಳಿತು ತಮ್ಮ ಮೈಮೇಲಿನ ಅಂಗಿ ಕಳಚಿ ಊಸ್ಸ ಅಂತಾ ನಿಟ್ಟುಸಿರು ಬಿಡುವ ದುಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲದೇ ತಮ್ಮ ದೇಹ ತಂಪಾಗಿಸಿಕೊಳ್ಳಲು ತಡ ರಾತ್ರಿಯವರೆಗೆ ಕಣ್ಣಿಗೆ ನಿದ್ದೆ ಇಲ್ಲದೆ ಸಮಯ ಕಳೆಯಬೇಕಾಗಿದೆ.