ಗೋಕಾಕ:ಜೈನ ಧರ್ಮ ಅಹಿಂಸೆ ಮೂಲಕ ಜನತೆಗೆ ಹೊಸ ಆಯಾಮ ನೀಡಿದೆ : ಎಸ್.ಬಿ. ಮುನವಳ್ಳಿ
ಜೈನ ಧರ್ಮ ಅಹಿಂಸೆ ಮೂಲಕ ಜನತೆಗೆ ಹೊಸ ಆಯಾಮ ನೀಡಿದೆ : ಎಸ್.ಬಿ. ಮುನವಳ್ಳಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 18 :
ಮೌಢ್ಯತೆಯಿಂದ ಕೂಡಿದ ಪ್ರಾಚೀನ ಸಂಪ್ರದಾಯಗಳ ವಿರುದ್ಧ ಜೈನ ಧರ್ಮ ಅಹಿಂಸೆ ಮೂಲಕ ಜನತೆಗೆ ಹೊಸ ಆಯಾಮ ನೀಡಿತು ಎಂದು ಹುಕ್ಕೇರಿಯ ನಿವೃತ್ತ ಶಿಕ್ಷಕ ಎಸ್.ಬಿ. ಮುನವಳ್ಳಿ ಹೇಳಿದರು.
ಅವರು ಬುಧವಾರದಂದು ನಗರದ ದಿಗಂಬರ ಜೈನ ಬಸದಿಯಲ್ಲಿ ಮಹಾವೀರ ಜಯಂತಿ ನಿಮಿತ್ಯ ದಿಗಂಬರ ಜೈನ ಸಮಾಜ, ಶ್ರೀ ಸುಪಾಶ್ರ್ವನಾಥ ಜೈನ ಯುಥ್ ಫೆಡರೇಶನ್, ಶ್ರೀ ಸುಪಾಶ್ರ್ವನಾಥ ದಿಗಂಬರ ಜೈನ ಮಂದಿರ ಟ್ರಸ್ಟ ಕಮೀಟಿ ಹಾಗೂ ಶ್ರೀ ವಾಗೀಶ್ವರಿ ಮಹಿಳಾ ಮಂಡಳ ಸಂಯುಕ್ತವಾಗಿ ಏರ್ಪಡಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಭಗವಾನ ಮಹಾವೀರರು ದೇಶದಾದ್ಯಂತ ಸಂಚರಿಸಿ ಅಹಿಂಸೆ, ಸತ್ಯದ ಪ್ರತಿಪಾದನೆ ನಡೆಸಿ ಮೌಢ್ಯತೆ ವಿರುದ್ಧ ಪ್ರಚಾರ ನಡೆಸಿದರು. ಪ್ರಾಣಿ ಬಲಿ ಬದಲಾಗಿ ಟೆಂಗಿನಕಾಯಿ ಒಡೆಯುವಂತೆ ಪ್ರೇರೇಪಿಸಿದರು. ಅಹಿಂಸೆಯೇ ಅತ್ಯಂತ ಶ್ರೇಷ್ಠ ಧರ್ಮ ಎಂದು ಬೋಧಿಸಿ ಅನ್ನ ದಾನದ ಮಹತ್ವವನ್ನು ತಿಳಿಸಿದರಲ್ಲದೆ ತಾನು ಬದುಕುವದರ ಜೊತೆಗೆ ಮತ್ತೊಬ್ಬರನ್ನು ಬದುಕಲು ಬಿಡು ಎಂದು ಜನರಿಗೆ ತಿಳಿಯುವಂಥ ಸರಳ ಭಾಷೆಯಲ್ಲಿ ಬೋಧಿಸಿದರು. ಅದಕ್ಕಾಗಿ ಭಾರತದ ಸಂವಿಧಾನದ ಪ್ರಥಮ ಪುಟದಲ್ಲಿ ಭಗವಾನ ಮಹಾವೀರರ ಭಾವಚಿತ್ರ ಹಾಕಲಾಗಿದೆ ಎಂದು ತಿಳಿಸಿದರು.
ಜಯಂತಿ ನಿಮಿತ್ಯ ರಕ್ತದಾನ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು.
ವೇದಿಕೆ ಮೇಲೆ ದಿಗಂಬರ ಜೈನ ಸಮಾಜದ ಅಧ್ಯಕ್ಷ ವಿಜಯಕುಮಾರ ಖಾರೇಪಾಟಣ, ವಿವಿಧ ಸಂಘಗಳ ಮುಖಂಡರಾದ ರಾಜು ದರಗಶೆಟ್ಟಿ, ಅಶೋಕ ಅಂಗಡಿ, ಜಂಭೂರಾವ್ ಭರಮಗೌಡ, ಶ್ರೀಮತಿ ಚಂದಾ ಸೋಲಾಪೂರೆ ಇದ್ದರು.
ಟಿ.ಬಿ.ಬಿಲ್ ಸ್ವಾಗತಿಸಿ, ನಿರೂಪಿಸಿದರು. ಧನ್ಯಕುಮಾರ ಕಿತ್ತೂರ ವಂದಿಸಿದರು.
ಸಮಾರಂಭದ ಪೂರ್ವದಲ್ಲಿ ಭಗವಾನ ಮಹಾವೀರರ ತೊಟ್ಟಿಲೋತ್ಸವ ಹಾಗೂ ನಾಮಕರಣ ಕಾರ್ಯಕ್ರಮಗಳು ಜರುಗಿದವು.