ಗೋಕಾಕ:ಲೋಕಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ
ಲೋಕಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ
ನಮ್ಮ ಬೆಳಗಾವಿ ಸುದ್ದಿ ,ಬೆಟಗೇರಿ.ಏ 22 :
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸೋಮವಾರ ಏ.22 ರಂದು ಸಾಯಂಕಾಲ 4 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನದ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲಿರುವ ಎಲ್ಲ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ನಿಯೋಜಿತ ಮತದಾನದ ಮತಗಟ್ಟೆ ಕೊಠಡಿಗಳಿಗೆ ಬಂದಿಳಿದಿದ್ದಾರೆ. ಮಂಗಳವಾರ ಏ.23 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಗ್ರಾಮದಲ್ಲಿ ಮತದಾರರಿಗೆ 5 ಮತಗಟ್ಟೆ ಸ್ಥಾಪಿಸಲಾಗಿದೆ. ಮತಗಟ್ಟೆಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್, ಹೋಂಗಾಡ್ಸ್ ಬಂದೂಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್, ಹೋಂಗಾಡ್ಸ್, ಮತಗಟ್ಟೆ ಅಧಿಕಾರಿಗಳು, ಸಹಾಯಕರು ಸೇರಿದಂತೆ ಸುಮಾರು 37ಕ್ಕೂ ಹೆಚ್ಚು ಜನರು ಈ ಐದು ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಇಲ್ಲಿ ಎಲ್ಲ ಮೂಲ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಏ.23 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಸ್ಥಳೀಯ ಮತದಾರರು ಮತದಾನ ಮಾಡಬಹುದು. ಎಫೀಕ್ ಅಥವಾ ಉಲ್ಲೇಖಿತ 11 ದಾಖಲಾತಿಗಳಲ್ಲಿ ಯಾವುದಾದರೊಂದು ದಾಖಲಾತಿಯ ಗುರುತಿನ ಚೀಟಿಯನ್ನು ಮತದಾರರು ಮತದಾನಕ್ಕೆ ಬರುವಾಗ ತಪ್ಪದೇ ತರಬೇಕು ಎಂದು ಇಲ್ಲಿಯ ಮತದಾನ ಕೇಂದ್ರದ ಸೆಕ್ಟರ್ ಆಫಿಸರ್ ಚಿರಂಜೀವಿ.ಟಿ., ತಿಳಿಸಿದ್ದಾರೆ.
ಈ ವೇಳೆ ಗ್ರಾಮ ಲೆಕ್ಕಾಧಿಕಾರಿ ಜೆ.ಎಮ್.ನದಾಫ್, ವೈ.ಸಿ.ಶೀಗಿಹಳ್ಳಿ, ಎಸ್.ಬಿ.ಸನದಿ, ರುದ್ರಪ್ಪ ಕಾಡವ್ವಗೋಳ, ವಿಠಲ ಚಂದರಗಿ, ಬೀರಪ್ಪ ಕುರಬೇಟ ಸೇರಿದಂತೆ ಮತಗಟ್ಟೆಗಳ ಸಿಬ್ಬಂದಿ, ಸ್ಥಳೀಯ ಗ್ರಾಪಂ ಸಿಬ್ಬಂದಿ, ಬಿಎಲ್‍ಒ, ಮತ್ತೀತರರು ಇದ್ದರು.