ಘಟಪ್ರಭಾ:ಈಜು ಬಾರದೆ ನದಿಯಲ್ಲಿ ಮುಳುಗಿ ಬಾಲಕ ಸಾವು : ಕೊಣ್ಣೂರನ ಹೊರವಲಯದಲ್ಲಿ ಘಟನೆ
ಈಜು ಬಾರದೆ ನದಿಯಲ್ಲಿ ಮುಳುಗಿ ಬಾಲಕ ಸಾವು : ಕೊಣ್ಣೂರನ ಹೊರವಲಯದಲ್ಲಿ ಘಟನೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 29 :
ಕೊಣ್ಣೂರ ಪಟ್ಟಣದ ಸಮೀಪ ಹರಿಯುತ್ತಿರುವ ಘಟಪ್ರಭಾ ನದಿಯಲ್ಲಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಬಾಲಕ ಈಜಲು ಹೋಗಿ ಈಜು ಬಾರದೆ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಜರುಗಿದೆ.
ನೀರು ಪಾಲಾದ ಬಾಲಕ ಸ್ಥಳೀಯ ನಿವಾಸಿಯಾದ ಜಯಪಾಲ ಕೌಜಲಗಿಯವರ ಪುತ್ರ ಪ್ರಶಾಂತ ಕೌಜಲಗಿ (11) ಎಂದು ತಿಳಿದು ಬಂದಿರುತ್ತದೆ. ಮೃತ ವಿದ್ಯಾರ್ಥಿಯು ಸ್ಥಳೀಯ ಖಾಸಗಿ ಶಾಲೆಯಲ್ಲಿ 5ನೇ ತರಗತಿಯನ್ನು ಮುಗಿಸಿರುತ್ತಾನೆ.
ಘಟನೆಯ ವಿವರ : ಪ್ರತಿದಿನ ತಂದೆಯ ಜೊತೆಗೆ ನದಿಯಲ್ಲಿ ಸ್ನಾನ ಮಾಡಲು ಮೃತ ಬಾಲಕ ಹೋಗುತ್ತಿದ್ದನಂತೆ, ಆದರೆ ಈ ದಿನ ಬಾಲಕನ ತಂದೆ ಬೇರೆ ಕೆಲಸದ ನಿಮಿತ್ಯ ನದಿಗೆ ಹೋಗಲಿಲ್ಲ. ಆದರೆ ಬಾಲಕ ತಾನೊಬ್ಬನೇ ಸ್ನಾನ ಮಾಡಲು ನದಿಯ ಕಡೆ ಹೋಗಿ ದಂಡೆಯಲ್ಲಿ ಕುಳಿತು ಸ್ನಾನ ಮಾಡುತ್ತಿದ್ದಾನೆ. ಆಕಸ್ಮಿಕ ಕಾಲು ಜಾರಿ ನದಿಯಲ್ಲಿ ಬಿದ್ದಿದ್ದಾನೆ. ಬಾಲಕ ನದಿಯಲ್ಲಿ ಬಿದ್ದರುವುದನ್ನು ಸ್ಥಳದಲ್ಲಿದ್ದ ಜನರು ಗಮನಿಸಿ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಬಾಲಕ ಅಷ್ಟರಲ್ಲಿಯೇ ನದಿಯಲ್ಲಿ ಮುಳುಗಿ ಮಾಯವಾಗಿದ್ದಾನೆ. ಎಷ್ಟೆ ಪ್ರಯತ್ನ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.
ಈ ಘಟನಾ ಸ್ಥಳವು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುತ್ತಿದ್ದು, ಪೊಲೀಸ್‍ರು, ಮೃತ ಬಾಲಕನ ದೇಹಕ್ಕಾಗಿ ಸ್ಥಳೀಯರ ಜೊತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸುದೀರ್ಘ ಶೋಧ ಕಾರ್ಯ ನಡೆಸಿದ್ದರಿಂದ ಸಂಜೆ 5.30ರ ಸುಮಾರಿಗೆ ಮೃತದೇಹ ಪತ್ತೆಯಾಗಿದೆಂದು ತಿಳಿದು ಬಂದಿರುತ್ತದೆ.