RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಸಮಗ್ರ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಪ್ರಗತಿ ಪರಿಶೀಲನೆ

ಗೋಕಾಕ:ಸಮಗ್ರ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಪ್ರಗತಿ ಪರಿಶೀಲನೆ 

ಸಮಗ್ರ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಪ್ರಗತಿ ಪರಿಶೀಲನೆ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ.31-
ಗುರುವಾರದಂದು ನಗರದ ತಾ.ಪಂ. ಸಭಾಭವನದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ಕೃಷಿ ಇಲಾಖೆಯ ಪ್ರಗತಿ ಬಗ್ಗೆ ಚರ್ಚಿಸುತ್ತಿರುವಾಗ ಪ್ರಸ್ತುತ ಸಾಲಿನಲ್ಲಿ ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಮಳೆಯ ಪ್ರಮಾಣ ಅತ್ಯಂತ ಕಡಿಮೆ ಆಗಿದ್ದು ವಾಡಿಕೆ ಪ್ರಕಾರ ಈವರೆಗೆ 92 ಎಂಎಂ ಮಳೆ ಆಗಬೇಕಾಗಿತ್ತು. ಆದರೆ ಕೇವಲ 16 ಎಂಎಂ ಮಳೆಯಾಗಿದ್ದು ಜೂನ ತಿಂಗಳಲ್ಲಿ ಚನ್ನಾಗಿ ಮಳೆ ಆದರೆ ಮಾತ್ರ ಬಿತ್ತನೆ ಕಾರ್ಯ ಆರಂಭಗೊಳ್ಳಲಿದೆ ಎಂದು ಸಚಿವರಿಗೆ ತಿಳಿಸಲಾಯಿತು.
ಎರಡೂ ತಾಲೂಕುಗಳಲ್ಲಿ ಮಳೆ ಆಗದೆ ಇರುವದರಿಂದ ಬಿತ್ತನೆ ಕಾರ್ಯ ಪ್ರಾರಂಭವೇ ಆಗಿಲ್ಲ. ಅಲ್ಲದೆ 3000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಸದ್ಯ ಕುಡಿಯುವ ನೀರಿನ ಸಮಸ್ಯೆ ಉಂಟಾದ ತಾಲೂಕಿನ ಏಳಪಟ್ಟಿ ಗ್ರಾಮದಲ್ಲಿ ಕೊಳವೆ ಭಾಂವಿ ಬಾಡಿಗೆ ಪಡೆದು ಜನರಿಗೆ ನೀರು ಒದಗಿಸಲಾಗಿದೆ. ಹೊನಕುಪ್ಪಿ ಗ್ರಾಮಕ್ಕೆ ಟ್ಯಾಂಕರ ಮೂಲಕ ನೀರು ಪೂರೈಸಲಾಗುತ್ತಿದೆ. ಕೂಡಲೇ ಮಳೆಯಾಗದಿದ್ದರೆ ಇನ್ನೂ 23 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ತಿಳಿಸಿದಾಗ ಅಂಥ ಸ್ಥಿತಿಯಲ್ಲಿ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜೂನ ತಿಂಗಳಲ್ಲಿ ಮಳೆಯಾದ ಕೂಡಲೇ ರೈತರು ಬಿತ್ತನೆ ಮಾಡಲು ಗೋಕಾಕ, ಅರಭಾಂವಿ ಹಾಗೂ ಕೌಜಲಗಿ ಹೋಬಳಿಗಳಲ್ಲಿ ಬೀಜ, ಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆಯಿಂದ ತಿಳಿಸಲಾಯಿತು.
ಚಿಕುನಗುನ್ಯಾ ಹಾವಳಿ :
ಗೋಕಾಕ ತಾಲೂಕಿನ ಗಿಳಿ ಹೊಸೂರ ಗ್ರಾಮದಲ್ಲಿ ಚಿಕುನಗುನ್ಯಾ ರೋಗದ ಹಾವಳಿ ಹೆಚ್ಚಾಗಿದ್ದು ಈ ರೋಗದಿಂದ ಸುಮಾರು ಏಳೆಂಟು ಜನರು ಕಾಲುಗಳಿಗೆ ಬಾವು ಬಂದು ನಡೆಯಲು ಬಾರದ ಸ್ಥಿತಿ ಇದೆ. ಈ ಬಗ್ಗೆ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿದರೂ ದಾದು ಮಾಡುತಿಲ್ಲ ಎಂದು ಸಭೆಯಲ್ಲಿ ಜನಪ್ರತಿನಿಧಿಯೊಬ್ಬರು ಸಚಿವರ ಗಮನಕ್ಕೆ ತಂದಾಗ ಕೂಡಲೇ ಆರೋಗ್ಯ ಇಲಾಖೆ ವೈದ್ಯರು ಗ್ರಾಮಕ್ಕೆ ಭೇಟಿ ಉಪಚಾರ ನೀಡಬೇಕು. ಅವಶ್ಯಕವೆನಿಸಿದರೆ ಅವರನ್ನು ಆಸ್ಪತ್ರೆಗೆ ಕರೆ ತಂದು ದಾಖಲಿಸಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ಶಾಲಾ ಕಂಪೌಂಡ ನಿರ್ಮಿಸಲು ಆದೇಶ :
ಎರಡೂ ತಾಲೂಕುಗಳಲ್ಲಿಯ ಸರಕಾರಿ ಶಾಲೆಗಳ ಕಂಪೌಂಡ ಗೋಡೆಗಳನ್ನು ಕೂಡಲೇ ನಿರ್ಮಿಸುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆಆದೇಶ ನೀಡಿದರು. ಅಲ್ಲದೆ ಭೂಸೇನಾ ನಿಗಮದಿಂದ ಕಟ್ಟುತ್ತಿರುವ ಅಂಗನವಾಡಿ ಕಟ್ಟಡಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ಅಂತರ್ಜಾತಿ ವಿವಾಹ
ಅಂತರ್ಜಾತಿ ವಿವಾಹ ಮಾಡಿಕೊಳ್ಳುವ ಹಾಗೂ ವಿಧವೆಯರಿಗೆ ಲಗ್ನವಾಗುವವರಿಗೆ ಸರಕಾರದಿಂದ ಸಿಗುವ ಸಹಾಯಧನ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಖಾಸಗಿ ವಾಹನಗಳನ್ನು ನಿಲ್ಲಿಸುವದನ್ನು ತಡೆಯುವಂತೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಗೋಕಾಕ ಘಟಕ ವ್ಯವಸ್ಥಾಪಕರು ಸಚಿವರಿಗೆ ಮನವಿ ಮಾಡಿಕೊಂಡರು. ಸಚಿವರು ಅವಶ್ಯಕ ಕ್ರಮ ಕೈಕೊಳ್ಳುವ ಭರವಸೆ ನೀಡಿದರಲ್ಲದೆ ಗ್ರಾಮಾಂತರ ಪ್ರದೇಶದಲ್ಲಿಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಘಟಕ ವ್ಯವಸ್ಥಾಪಕರಿಗೆ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.
ರೇಷ್ಮೆ ಇಲಾಖೆ ಕಾರ್ಯ ಮಂದಗತಿ :
ತಾಲೂಕಿನಲ್ಲಿ ರೇಷ್ಮೆ ಬೆಳೆ ಬೆಳೆಯಲು ಮಂದಗತಿಯಲ್ಲಿ ನಡೆದಿದ್ದು ಈಗ 40 ವರ್ಷಗಳ ಹಿಂದೆಯೇ ತಿಗಡಿಯಲ್ಲಿ ರೇಷ್ಮೆ ಇಲಾಖೆ ತನ್ನ ಕಾರ್ಯಾರಂಭ ಪ್ರಾರಂಭ ಮಾಡಿತ್ತು. ಆದರೆ ಇನ್ನೂವರೆಗೆ ಅದರ ಪ್ರಗತಿಯೇ ಕಾಣುತ್ತಿಲ್ಲ. ರೇಷೆ ಸಲುವಾಗಿ ಸರಕಾರ ಸಾಕಷ್ಟು ಸಹಾಯಧನ ನೀಡುತ್ತಿದೆ. ಅದನ್ನು ಎರಡೂ ತಾಲೂಕುಗಳ ರೈತರಿಗೆ ಈ ಬಗ್ಗೆ ಮಾಹಿತಿ ಒದಗಿಸುವ ಕಾರ್ಯ ಮಾಡಬೇಕೆಂದು ಸಚಿವರು ತಿಳಿಸಿದರು.
ಕೆರೆ ತುಂಬಿಸುವ ಕಾರ್ಯ
ಎರಡೂ ತಾಲೂಕುಗಳಲ್ಲಿಯ 21 ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಾಗಿದೆ ಎಚಿದು ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದಾಗ ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಡಾ. ರಾಜೇಂದ್ರ ಸಣ್ಣಕ್ಕಿ ಅವರು ಕೌಜಲಗಿ ಗ್ರಾಮದ ಕೆರೆ ತುಂಬಿಸುವ ಕಾರ್ಯ ನಡದೇ ಇಲ್ಲ ಎಚಿದು ತಿಳಿಸಿದಾಗ ‘ತಪ್ಪ ಮಾಹಿತಿ ಸಭೆಗೆ ನೀಡಬಾರದೆಂದು ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಸಮಗ್ರ 5 ಗಂಟೆಗಳ ಕಾಲ ನಡೆದ ಪ್ರಗತಿ ಪರಿಶೀಲನಾ ಸಭೆಯು ದಾಖಲೆಯಾಗಿದ್ದು ಪ್ರತಿಯೊಂದು ವಿಷಯಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದ್ದು ವಿಶೇಷವಾಗಿತ್ತು.

Related posts: