ಗೋಕಾಕ:ಬೆಟಗೇರಿ ಗ್ರಾಮದ ಬೀರಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ ಸಂಪನ್ನ
ಬೆಟಗೇರಿ ಗ್ರಾಮದ ಬೀರಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ ಸಂಪನ್ನ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಜೂ 3 :
ಗ್ರಾಮದ ಬೀರಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಹಾಗೂ ದಾನಿಗಳಿಗೆ ಸತ್ಕಾರ ಸಮಾರಂಭ ಶನಿವಾರ ಜೂನ್.1ರಿಂದ ಸೋಮವಾರ ಜೂನ್.3 ರವರೆಗೆ ವಿಜೃಂಭನೆಯಿಂದ ನಡೆಯಿತು.
ಜೂನ್.1ರಂದು ಬೆಳಗ್ಗೆ 6 ಗಂಟೆಗೆ ಬೀರಸಿದ್ದೇಶ್ವರ ದೇವರ ಗದ್ದುಗೆ ಮಹಾಪೂಜೆ, ವiಹಾಭಿಷೇಕದ ಬಳಿಕ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಸಾಯಂಕಾಲ 5 ಗಂಟಗೆ ಪುರದೇವರ ಹಾಗೂ ಪರಸ್ಥಳದ ವಿವಿಧ ದೇವರ ವಾಲಗ ಕೂಡುವ ಕಾರ್ಯಕ್ರಮ ಜರುಗಿದ ನಂತರ ಮಮದಾಪುರದ ಬೀರಸಿದ್ದೇಶ್ವರ, ಕೆಮ್ಮನಕೋಲದ ಬಸರಿಸಿದ್ದೇಶ್ವರ, ಮುಗಳಿಹಾಳದ ಮಾಳಿಂಗರಾಯ ದೇವರ ಪಲ್ಲಕ್ಕಿ ಬರಮಾಡಿಕೊಳ್ಳುವ ಕಾರ್ಯಕ್ರಮ ಸಡಗರದಿಂದ ಜರುಗಿದವು.
ಜೂನ್.2ರಂದು ಬೆಳಗ್ಗೆ 6 ಗಂಟಗೆ ಬೀರಸಿದ್ದೇಶ್ವರ ದೇವರ ಗದ್ದುಗೆ ಮಹಾಪೂಜೆ, ವiಹಾಭಿಷೇಕ ನಡೆದು, ಮುಂಜಾನೆ 7 ಗಂಟಗೆ ಪಲ್ಲಕ್ಕಿ ಉತ್ಸವ, ಮುಂಜಾನೆ 8 ಗಂಟೆಗೆ ನರಗುಂದ ಶ್ರೀಚಕ್ರ ಮಹಿಳಾ ಕಲಾ ತಂಡವರಿಂದ ಡೊಳ್ಳು ಕುಣಿತ, ಮದ್ಯಾಹ್ನ 12 ಗಂಟೆಗೆ ಸಾಮೂಹಿಕ ವಿವಾಹ, ಮಹಾಪ್ರಸಾದ ನಡೆಯಿತು.
ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ ದಿವ್ಯ ಸಾನಿಧ್ಯ, ಮಮದಾಪೂರದ ಮೌನ ಮಲ್ಲಿಕಾರ್ಜುನ ಸ್ವಾಮಿಜಿ ನೇತೃತ್ವ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಜ್ಯೋತಿ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಬಸವಂತ ಕೋಣಿ ಅಧ್ಯಕ್ಷತೆ ವಹಿಸಿದ್ದರು. ಸಿದ್ದಪ್ಪ ಮಾಯಪ್ಪ ಕೋಣಿ ಹಾಗೂ ಕುಟುಂಬದವರಿಂದ ಅನ್ನಸಂತರ್ಪನೆ ಜರುಗಿತು, ಗಣ್ಯರಿಗೆ, ದಾನಿಗಳಿಗೆ ಸತ್ಕಾರ ನಡೆಯಿತು.
ಮಧ್ಯಾಹ್ನ 3 ಗಂಟೆಗೆ ಹಲ್ಲು ಹಚ್ಚದ ಟಗರಿನ ಕಾಳಗ, ಸಾಯಂಕಾಲ 4 ಗಂಟೆಗೆ ನಾಕಲ್ಲಿ ಟಗರಿನ ಕಾಳಗ, ಸಾಯಂಕಾಲ 5 ಗಂಟೆಗೆ ಓಪನ್ ಟಗರಿನ ಕಾಳಗ ಸ್ಪರ್ಧೆ ನಡೆದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಪ್ರಶಸ್ತಿ ವಿತರಿಸಲಾಯಿತು. ರಾತ್ರಿ 10 ಗಂಟೆಗೆ ಕೆಸರಗೊಪ್ಪ ಸೀಮಿ ಲಕ್ಷ್ಮೀದೇವಿ ನಾಟ್ಯ ಸಂಘದವರಿಂದ ಬೀರಸಿದ್ಧೇಶ್ವರ ಮಹಾತ್ಮೆ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಂಡಿತು. ಜೂನ್.3 ರಂದು ಮುಂಜಾನೆ 8 ಗಂಟಗೆ ಬೀರಸಿದ್ದೇಶ್ವರ ದೇವರ ಗದ್ದುಗೆ ಪೂಜೆ, ಅಭಿಷೇಕ, ಭಂಢಾರ ಒಡೆಯುವ ಕಾರ್ಯಕ್ರಮದ ಬಳಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಚುಳಕಿಯ ವೀರಯ್ಯ ಸ್ವಾಮಿಜಿ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸುಭಾಷ ಕರೆಣ್ಣವರ, ಉಪಾಧ್ಯಕ್ಷ ಮಾಯಪ್ಪ ಬಾಣಸಿ, ಸಿದ್ರಾಮ ಜಟ್ಟೆಪ್ಪಗೋಳ, ಸದಾಶಿವ ಕುರಿ, ವೀರನಾಯ್ಕ ನಾಯ್ಕರ, ಗುರಪ್ಪ ಮಾಕಾಳಿ, ನಿಂಗಪ್ಪ ಬಾಣಸಿ, ವಿಠಲ ಬ್ಯಾಗಿ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಸಂತ-ಶರಣರು, ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು, ಬೀರಸಿದ್ಧೇಶ್ವರ ದೇವರ ಭಕ್ತರು, ಗ್ರಾಮಸ್ಥರು ಇದ್ದರು.